ಕಾಂಗ್ರೆಸ್ ಸರ್ಕಾರದ ಹಗರಣ ಬಯಲು: ಬಿಜೆಪಿ ವಾಗ್ದಾಳಿ | Lokayukta investigation urge

B Y Vijayendra
Published on

ಬೆಂಗಳೂರು: ರಾಜ್ಯ ಸರ್ಕಾರದ ಮತ್ತೊಂದು ಭ್ರಷ್ಟಾಚಾರ ಬಯಲಾಗಿದೆ, ಕಾಂಗ್ರೆಸ್ ಪಕ್ಷದ ದಲಿತ ವಿರೋಧಿ ನೀತಿ ಮತ್ತೆ ನಿಚ್ಚಳವಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಚಾಟಿ ಬೀಸಿದ್ದಾರೆ.

ಭೂಒಡೆತನ ಯೋಜನೆಯಡಿ ಲಾನುಭವಿಗೆ 25 ಲಕ್ಷ ರೂ. ಅನುದಾನ ಮಂಜೂರು ಮಾಡಲು ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವಿಕುಮಾರ್ ಮಧ್ಯವರ್ತಿ ಮೂಲಕ ಐದು ಲಕ್ಷ ರೂ. ಲಂಚ ಕೇಳಿದರು ಎನ್ನಲಾದ ವಿಡಿಯೋ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಗುರುತರ ಆರೋಪದ ಕುರಿತು ಆರ್.ಅಶೋಕ್, ಎಚ್.ಡಿ.ಕುಮಾರಸ್ವಾಮಿ ಹಾಗೂ ಬಿ.ವೈ.ವಿಜಯೇಂದ್ರ ಅವರು ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಪ್ರತ್ಯೇಕವಾಗಿ ಸಂದೇಶ ಹಂಚಿಕೊಂಡು, ರಾಜ್ಯ ಸರ್ಕಾರದ ಮೇಲೆ ಬಿಜೆಪಿ, ಜೆಡಿಎಸ್ ನಾಯಕರು ಮುಗಿಬಿದ್ದಿದ್ದಾರೆ.

ಕಮಿಷನ್ ದಂಧೆಗೆ ಕೈಗನ್ನಡಿ

ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವಿಕುಮಾರ್ ಅವರು ಲಾನುಭವಿಗೆ ಅನುದಾನ ಬಿಡುಗಡೆಗೆ ಐದು ಲಕ್ಷ ರೂ. ಕಮಿಷನ್‌ಗೆ ಬೇಡಿಕೆಯಿಟ್ಟಿದ್ದು, ಕಾಂಗ್ರೆಸ್ ಸರ್ಕಾರದಲ್ಲಿ ತಾಂಡವವಾಡುತ್ತಿರುವ ಕಮಿಷನ್ ದಂಧೆಗೆ ಕೈಗನ್ನಡಿ ಎಂದು ಆರ್.ಅಶೋಕ್ ವಾಗ್ದಾಳಿ ಮಾಡಿದ್ದಾರೆ.

ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕೆ ವಿನಿಯೋಗಿಸಬೇಕಾಗಿದ್ದ ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂ. ತೆಲಂಗಾಣ ಹಾಗೂ ಲೋಕಸಭಾ ಚುನಾವಣೆಗೆ ಬಳಸಿಕೊಂಡು ನುಂಗಿ ನೀರು ಕುಡಿದಿದ್ದಾಯಿತು.

ಈಗ ಭೋವಿ ಅಭಿವೃದ್ಧಿ ನಿಗಮದಲ್ಲಿ ಲಾನುಭವಿಗಳಿಗೆ ಅನುದಾನ ಬಿಡುಗಡೆ ಮಾಡಲು ನಿಗಮದ ಅಧ್ಯಕ್ಷ ಕಮಿಷನ್ ಕೇಳುತ್ತಿರುವ ಹಗರಣ ಬಯಲಾಗಿದೆ. ಇಷ್ಟಾದರೂ ಸಿಎಂ ಸಿದ್ದರಾಮಯ್ಯ ತಮ್ಮ ಕುರ್ಚಿಗೆ ಅಂಟಿಕೊಂಡಿದ್ದಾರೆ. ಆತ್ಮಸಾಕ್ಷಿ, ನೈತಿಕತೆ ಇದ್ದರೆ ಇನ್ನೊಂದು ಕ್ಷಣವೂ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಬಾರದು ಎಂದು ಆರ್.ಅಶೋಕ್ ಆಗ್ರಹಿಸಿದ್ದಾರೆ.

ಲೋಕಾಯುಕ್ತ ತನಿಖೆಗೆ ಒತ್ತಾಯ

ಭೋವಿ ಅಭಿವೃದ್ಧಿ ನಿಗಮದಲ್ಲಿ ಲಾನುಭವಿಗಳಿಂದ ನೇರ ವಸೂಲಿಗೆ ಇಳಿದಿರುವ ನಿಗಮದ ಅಧ್ಯಕ್ಷ ರವಿಕುಮಾರ್ ಅವರು ಭೂಒಡೆತನ ಯೋಜನೆಯಡಿ ಲಂಚಕೇಳಿ ಸಿಕ್ಕಿಬಿದ್ದಿರುವ ಪ್ರಕರಣ ಅತ್ಯಂತ ನಾಚಿಕೆಗೇಡಿತನದ ಪರಮಾವಧಿ ಎಂದು ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ.

ದಲಿತ ವಿರೋಧಿ ಕಾಂಗ್ರೆಸ್ ಸರ್ಕಾರ ಈ ಮೊದಲು ವಾಲ್ಮೀಕಿ ನಿಗಮದ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಿತ್ತು. ನಂತರ ಪರಿಶಿಷ್ಟರು, ಶೋಷಿತ ಸಮುದಾಯಗಳ ಕಲ್ಯಾಣಕ್ಕೆ ಮೀಸಲಿಟ್ಟಿರುವ ಹಣವನ್ನೂ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿತು.

ಇದೀಗ ಭೋವಿ ಸಮುದಾಯದ ಅಭಿವೃದ್ಧಿ ನಿಗಮದ ಲಾನುಭವಿಗಳಿಂದ ವಸೂಲಿಗೆ ಇಳಿದಿರುವುದು ನಾಡಿಗೆ ದುರಂತದ ದೌರ್ಭಾಗ್ಯವೇ ಸರಿ. ಭೋವಿ ಸಮುದಾಯದ ಅರ್ಹ ಲಾನುಭವಿಗಳನ್ನು ಗುರುತಿಸಿ ಅವರನ್ನು ಆರ್ಥಿಕ, ಸಾಮಾಜಿಕವಾಗಿ ಮೇಲೆತ್ತಬೇಕಿದ್ದ ಜವಾಬ್ದಾರಿಯುತ ಸ್ಥಾನದಲ್ಲಿರುವ ಅಧ್ಯಕ್ಷರೇ ವಸೂಲಿಗೆ ಇಳಿದಿದ್ದಾರೆ.

ಈ ಘಟನೆಯು ‘ಬೇಲಿಯೆ ಎದ್ದು ಹೊಲ ಮೇಯ್ದಂತಾಗಿದೆ’. ಈ ಸಂಬಂಧ ಕೂಡಲೇ ಲೋಕಾಯುಕ್ತ ಸ್ವಯಂ ದೂರು ದಾಖಲಿಸಿಕೊಂಡು ಸೂಕ್ತ ತನಿಖೆ ನಡೆಸಲಿ ಎಂದು ಬಿ.ವೈ.ವಿಜಯೇಂದ್ರ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net