ಕಾಂಗ್ರೆಸ್ ಸರ್ಕಾರದ 100 ದಿನದ ಸಾಧನೆ, ವರ್ಗಾವಣೆ ಮಾತ್ರ : ಯತ್ನಾಳ್

YATNAL-1
Published on

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ 100 ದಿನದ ಸಾಧನೆ ಎಂದರೆ ಅದು ವರ್ಗಾವಣೆ ಮಾತ್ರ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಟೀಕಿಸಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಅಭಿವೃದ್ಧಿ ಕೆಲಸ ಎಲ್ಲ ಸ್ಥಗಿತವಾಗಿವೆ. ನಮ್ಮ ಕಾಲದ ಕೆಲಸಗಳನ್ನೆಲ್ಲ ಸ್ಥಗಿತ ಮಾಡಿದ್ದಾರೆ. ಎಲ್ಲರಿಗೂ ಉಚಿತ ಖಚಿತ ಅಂದರು. ಆದರೆ ಆದರೆ ಈಗ ನೂರಾರು ಷರತ್ತು ಹಾಕಿದ್ದಾರೆ. ಯಾವುದೇ ಯೋಜನೆ ಪೂರ್ಣ ಪ್ರಮಾಣದಲ್ಲಿ ಈ ಜನರಿಗೆ ಸಿಗಲ್ಲ ಎಂದರು.

ಬಿಜೆಪಿ ಚಾರ್ಜ್ ಶೀಟ್ ಬಿಡುಗಡೆಗೆ ಕಾಂಗ್ರೆಸ್ ಲೇವಡಿ ವಿಚಾರ ಕುರಿತ ಪ್ರಶ್ನೆಗೆ, ಪ್ರತಿಪಕ್ಷದ ನಾಯಕನ ಆಯ್ಕೆಗೂ ಚಾರ್ಜ್‌ಶೀಟ್‌ಗೂ ಸಂಬಂಧವಿಲ್ಲ. ನೂರು ದಿನದ ವೈಲ್ಯ ಏನು ಎಂಬುದನ್ನು ಚಾರ್ಜ್‌ಶೀಟ್‌ನಲ್ಲಿ ಹೇಳಲಾಗಿದೆ. ಅದಕ್ಕೆ ಕಾಂಗ್ರೆಸ್ ಸರ್ಕಾರ ಮೊದಲು ಉತ್ತರ ಕೊಡಬೇಕು. ವಿರೋಧ ಪಕ್ಷದ ನಾಯಕನ ಆಯ್ಕೆ ಆಗುತ್ತದೆ. ಅಧಿಕೃತ ವಿರೋಧ ಪಕ್ಷವಾಗಿ ನಾವು ಕೇಳಿದ್ದಕ್ಕೆ ಉತ್ತರ ಕೊಡಲಿ. ಯಾವುದೋ ನೆಪ ಹೇಳಿ ಜಾರಿಕೊಳ್ಳಬಾರದು ಎಂದು ಸವಾಲು ಹಾಕಿದರು.

ಪಾರ್ಟಿ ಬಿಡುವ ಬೆದರಿಕೆ ಸರಿಯಲ್ಲ

ಬಿಜೆಪಿ ಕಚೇರಿ ಗಾಸಿಪ್ ಕೇಂದ್ರ ಎಂಬ ಶಾಸಕ ರೇಣುಕಾಚಾರ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಕಚೇರಿ ಇರುವುದು ಪಕ್ಷ ಸಂಘಟನೆಗೆ ಮಾತ್ರ. ಗಾಸಿಪ್‌ಗಳೆಲ್ಲ ಮನೆಗಳಲ್ಲಿ ಆಗುತ್ತವೆ.

ಗಾಸಿಪ್‌ಗೆಂದೇ ನಾಲ್ಕು ಬೇರೆ ಮನೆಗಳಿವೆ. ಅವರ ಮನೆಗಳಲ್ಲಿ ಗಾಸಿಪ್ ಸೃಷ್ಟಿ ಆಗುತ್ತವೆ ಎಂದು ತಿರುಗೇಟು ನೀಡಿದರು.

ಕೆಲವು ಜನ ಪಾರ್ಟಿ ಬಿಡುತ್ತೇವೆ ಎಂದು ಬೆದರಿಕೆ ಹಾಕುವುದು ಸರಿಯಲ್ಲ. ಪಕ್ಷದಿಂದ ಗೆದ್ದಿದ್ದೇವೆ, ಮಂತ್ರಿಗಳಾಗಿದ್ದೀವಿ. ಸೋಲು ಗೆಲುವು ಸಾಮಾನ್ಯ. ಸೋತಾಗ ಹತಾಶರಾಗುವುದು ಬೇಡ ಎಂದು ಬಸನಗೌಡ ಪಾಟೀಲ ಯತ್ನಾಳ್ ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net