

ಬೆಂಗಳೂರು: ಸರ್ಕಾರದ ಭ್ರಷ್ಟಾಚಾರ, ನಿರ್ಲಕ್ಷ್ಯಕ್ಕೆ ರೋಸಿಹೋದ ಕಾಂಗ್ರೆಸ್ ಶಾಸಕರೇ ತಿರುಗಿ ಬಿದ್ದಿದ್ದು, ಜನರು ಛೀ, ಥೂ ಎಂದು ಉಗುಳುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ರಾಜೀನಾಮೆ ನೀಡಿ ತೊಲಗಿದರೆ ಸ್ವಲ್ಪಮಟ್ಟಿಗೆ ಬದಲಾವಣೆ ಸಾಧ್ಯವೆಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಚಾಟಿ ಬೀಸಿದರು.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್, ಪೇಸಿಎಂ ಎಂಬ ಸುಳ್ಳು ಆರೋಪ ಮಾಡಿ, ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತೇವೆ ಎಂಬ ಭರವಸೆ ನೀಡಿದರು.
ಅಧಿಕಾರಕ್ಕೆ ಬಂದ ಮೇಲೆ ಕಾಂಗ್ರೆಸ್ ನೇರ ವ್ಯಾಪಾರಕ್ಕೆ ಕುಳಿತಿದೆ. ಬಿಹಾರ ಚುನಾವಣೆ ಬರುತ್ತಿರುವ ಕಾರಣ ಲೂಟಿಗೆ ಇಳಿದಿದ್ದಾರೆ. ಭ್ರಷ್ಟಾಚಾರದಲ್ಲಿ ಸರ್ಕಾರ ಮುಳುಗಿದ್ದು, ಸಿಎಂ ಸಿದ್ದರಾಮಯ್ಯ ಅತಿ ದೊಡ್ಡ ಭ್ರಷ್ಟ ಎಂದು ಆರೋಪಿಸಿದರು.
ಅಕ್ರಮದ ವಿರುದ್ಧ ಧ್ವನಿ ಎತ್ತಿದವರ ಬಾಯಿ ಮುಚ್ಚಿಸುವ ಕೆಲಸಕ್ಕೆ ಸಿಎಂ, ಡಿಸಿಎಂ ಮುಂದಾಗಿದ್ದಾರೆ. ಈ ವ್ಯವಸ್ಥೆ ಬಗ್ಗೆ ಗೌರವ, ಮಾನ-ಮರ್ಯಾದೆ ಏನಾದರೂ ಇದ್ದರೆ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು.
ಭ್ರಷ್ಟಾಚಾರ, ಹಗರಣಗಳ ಬಗ್ಗೆ ಪ್ರತಿಪಕ್ಷಗಳು ಆಪಾದಿಸಿದರೆ ರಾಜಕೀಯ ಕಾರಣ. ತಪ್ಪು ಮಾಹಿತಿ ಎಂದು ತಳ್ಳಿಹಾಕುತ್ತಿದ್ದರು. ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ನಂಬರ್ ಒನ್ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದ್ದರು.
ಇದೀಗ ಮನೆ ಹಂಚಿಕೆಗೆ ಲಂಚದ ಬಗ್ಗೆ ಅದೇ ಪಕ್ಷದ ಮತ್ತೊಬ್ಬ ಶಾಸಕ ಬಿ.ಆರ್.ಪಾಟೀಲ ಆರೋಪ ಮಾಡಿದ್ದಲ್ಲದೆ, ತಾವು ಹೇಳಿದ್ದು ಸತ್ಯವೆಂದು ಪ್ರತಿಪಾದಿಸಿದ್ದಾರೆ. ಸರ್ಕಾರದ ಕಾರ್ಯವೈಖರಿಗೆ ಶಾಸಕ ರಾಜು ಕಾಗೆ ಬಹಿರಂಗವಾಗಿ ಮತ್ತೊಮ್ಮೆ ಆಕ್ರೋಶ ಹೊರಹಾಕಿದ್ದಾರೆ.
ದಿನಕ್ಕೆ 2-3 ಹಗರಣಗಳು ಹೊರಬರುತ್ತಿವೆ, ಪ್ರತಿಪಕ್ಷವಾಗಿ ನಾವು ಹೋರಾಡುತ್ತಿದ್ದೇವೆ. ಕಾಂಗ್ರೆಸ್ ಪಕ್ಷದ ಶಾಸಕರೇ ತಿರುಗಿ ಬಿದ್ದಿರುವ ಕಾರಣ ಸರ್ಕಾರ ಆಯಸ್ಸು ಕಡಿಮೆಯಾಗುತ್ತಿದೆ. ಹಗರಣಗಳನ್ನು ಸರ್ಕಾರ ಒಪ್ಪದಿದ್ದರೂ ಜನರು ದಂಗೆ ಪರಿಸ್ಥಿತಿ ಉದ್ಭವವಾಗುತ್ತಿದೆ ಎಂದು ಛಲವಾದಿ ನಾರಾಯಣಸ್ವಾಮಿ ಎಚ್ಚರಿಸಿದರು.