

ರಾಣೆಬೆನ್ನೂರ: ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಸ್ವಜನಪಕ್ಷಪಾತ ಮಿತಿ ಮೀರಿದ್ದು ಕಾಂಗ್ರೆಸ್ ಸಚಿವರ ವಿರುದ್ಧವೇ ಸ್ವಪಕ್ಷೀಯ ಶಾಸಕರುಗಳೆ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ. ಆದ್ದರಿಂದ ದಕ್ಷ ಆಡಳಿತ ನಡೆಸುವಲ್ಲಿ ವಿಫಲವಾಗಿರುವ ಕಾಂಗ್ರೆಸ್ ಸರ್ಕಾರ ವಜಾಗೊಳಿಸುವಂತೆ ಆಗ್ರಹಿಸಿ ಇಲ್ಲಿನ ಜೆಡಿಎಸ್ ಪಕ್ಷದ ತಾಲೂಕು ಘಟಕದ ವತಿಯಿಂದ ನಗರದ ತಹಸೀಲ್ದಾರ್ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಕುರುಬಗೇರಿ ಕ್ರಾಸ್ನ ಜೆಡಿಎಸ್ ಕಚೇರಿಯಿಂದ ತಹಸೀಲ್ದಾರ್ ಕಚೇರಿ ವರೆಗೆ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನಾ ರ್ಯಾಲಿ ನಡೆಸಿದರು. ಕೂಡಲೇ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಪಕ್ಷದ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ ಮಾತನಾಡಿ, ರಾಜ್ಯ ಸರ್ಕಾರ ಬಡವರಿಗೆ ಯಾವುದೆ ಯೋಜನೆಗಳ ಅನುಷ್ಠಾನ ಮಾಡದೆ ಭ್ರಷ್ಟಾಚಾರದಲ್ಲಿ ಮುಳುಗಿದೆ. ಅಭಿವೃದ್ಧಿಗೆ ಯಾವುದೇ ಅನುದಾನ ಸಿಗುತ್ತಿಲ್ಲ. ಹಲವು ಇಲಾಖೆಗಳಲ್ಲಿ ಭ್ರಷ್ಟಾಚಾರ ಮಿತಿ ಮೀರಿದ್ದು ಸಚಿವರು ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಶಾಸಕರೇ ನೇರವಾಗಿ ದಾಖಲೆಗಳ ಸಮೇತ ಮಾಧ್ಯಮಗಳ ಮೂಲಕ ಆರೋಪಿಸಿದ್ದಾರೆ.
ರಾಜ್ಯದಲ್ಲಿ ವಸತಿ ಯೋಜನೆ ಆಗಲಿ ರಸ್ತೆ ಚರಂಡಿ ಕಾಮಗಾರಿಗಳಾಗಲಿ ಅಭಿವೃದ್ಧಿ ಕಾರ್ಯಗಳಾಗದೆ ಜನ ಸಾಮಾನ್ಯರ ಮೇಲೆ ದರ ಏರಿಕೆಯ ಹೊರೆಯನ್ನು ಹೊರಿಸಿ ಆಡಳಿತ ನಡೆಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿರುವ ಜನ ವಿರೋಧಿ ಸರ್ಕಾರವನ್ನು ರಾಜ್ಯಪಾಲರು ವಜಾಗೊಳಿಸಬೇಕು ಎಂದು ಒತ್ತಾಯಿಸಿದರು. ತಹಸೀಲ್ದಾರ್ ಆರ್.ಎಚ್. ಭಾಗವಾನ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಪಕ್ಷದ ತಾಲೂಕು ಘಟಕದ ಅಧ್ಯಕ್ಷ ಮಹೇಶ ಹೊನ್ನಜ್ಜೇರ, ಪ್ರಮುಖರಾದ ಮಲ್ಲಿಕಾರ್ಜುನ ಹಲಗೇರಿ, ರಮೇಶ ಮಾಕನೂರ, ದಾವುಲ್ ಮಲ್ಲಿಕ, ಮೋನೇಶ ಮನ್ವಾಚಾರಿ, ಮೊನೇಶ ಬಡಿಗೇರ, ಮೊನೇಶ ಕಮ್ಮಾರ, ಚನ್ನವಿರಪ್ಪ ಬಡಿಗೇರ, ಎಂ.ಬಿ. ಕಂಬಳಿ, ಸಿದ್ದಪ್ಪ ಗುಡಿಮುಂದ್ಲರ, ನಿಂಗಪ್ಪ ಸಣ್ಣಕೊಟ್ರಪ್ಪನವರ, ಬಸವರಾಜ ದೇವರಮನಿ, ಸುನ್ನಾಖಾನ್ ಮುನ್ನಾ, ಇಬ್ರಾಹಿಂ ಯಲಗಚ್ಚಿ ಮತ್ತಿತರರು ಪಾಲ್ಗೊಂಡಿದ್ದರು.