ಜನಹಿತ ಮರೆತ ಕಾಂಗ್ರೆಸ್ ಸರ್ಕಾರ: ವಿಜಯೇಂದ್ರ | Fight for power

bjp mla b.y.vijayendra
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ
Published on

ಬೆಂಗಳೂರು: ಅತಿವೃಷ್ಟಿ, ನೆರೆ ಹಾವಳಿಯಿಂದ ರೈತರ ಸಂಕಷ್ಟಕ್ಕೆ ಸಿಲುಕಿದ್ದು, ಬೆಳೆ ಪರಿಹಾರ ನೀಡಲು ಸಾಧ್ಯವಾಗದ ಕಾಂಗ್ರೆಸ್ ಸರ್ಕಾರ ಬದುಕಿದ್ದೂ ಸತ್ತಂತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಾಪ್ರಹಾರ ಮಾಡಿದರು.

ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಜನರ ಕುಂದು-ಕೊರತೆ ಸ್ಪಂದಿಸಲು ಶಾಸಕರು ಪರದಾಡುತ್ತಿದ್ದಾರೆ. ನಾವು ಜನರ ಸಮಸ್ಯೆಗಳ ಬಗ್ಗೆ ಹೇಳಿದರೆ ಆಡಳಿತ ಪಕ್ಷದ ಶಾಸಕರು, ಸಚಿವರು ನವೆಂಬರ್ ಕ್ರಾಂತಿಯ ಹೇಳಿಕೆ ಕೊಡುತ್ತಿದ್ದಾರೆ ಎಂದು ದೂರಿದರು.

ರೈತರ ಸಮಸ್ಯೆಗೆ ಪರಿಹರಿಸದೆ ಸಿಎಂ ಬದಲಾವಣೆ ಚರ್ಚೆಯಲ್ಲಿ ಮಗ್ನರಾಗಿದ್ದಾರೆ. ಆಡಳಿತ ಕಾಂಗ್ರೆಸ್ ಪಕ್ಷದ ಕಚ್ಚಾಟ ಕಂಡು ಜನರು ರೋಸಿ ಹೋಗಿದ್ದು, ಕಾಂಗ್ರೆಸ್ ಸರ್ಕಾರದ ಮೇಲೆ ವಿಶ್ವಾಸವನ್ನೇ ಕಳೆದುಕೊಂಡಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ಕುಟುಕಿದರು.

ಸಿಎಂ ಮೇಲೂ ವಿಶ್ವಾಸವಿಲ್ಲ

ನಾನೇ 5 ವರ್ಷ ಸಿಎಂ ಎಂದು ಸಿದ್ದರಾಮಯ್ಯ ಪದೇ ಪದೆ ಹೇಳುವ ಪರಿಸ್ಥಿತಿ ಬಂದು ತಲುಪಿದೆ ಎಂದರೆ, ಮುಖ್ಯಮಂತ್ರಿ ಮೇಲೆ ಆಡಳಿತ ಪಕ್ಷದಲ್ಲಿ ವಿಶ್ವಾಸ ಹೊರಟುಹೋಗಿದ್ದಕ್ಕೆ ನಿದರ್ಶನವೆಂದು ವಿಶ್ಲೇಷಿಸಿದರು.

ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ. ಗೊಂದಲ ಸೃಷ್ಟಿಸುವ ಹೇಳಿಕೆಗಳನ್ನು ನಿಲ್ಲಿಸದೇ ಹೋದರೆ ಇದರ ಪರಿಣಾಮ ಆಡಳಿತದ ಮೇಲೆ ಬೀಳಲಿದೆ ಎಂದು ಗೃಹ ಸಚಿವ ಪರಮೇಶ್ವರ್ ಒಪ್ಪಿಕೊಂಡಿದ್ದಾರೆ ಎಂದರು.

ಸಿಎಂ ಯಾರಾಗುತ್ತಾರೆ? ಬದಲಾಗುತ್ತಾರಾ ? ಎಂಬ ಬಗ್ಗೆ ಜನರಲ್ಲಿ ಆಸಕ್ತಿ ಇಲ್ಲ. ಒಳಜಗಳದಿಂದ ಕೆಪಿಸಿಸಿಗೆ ಬೀಗ ಹಾಕುವುದು ಇರಲಿ, ರಾಜ್ಯದ ಖಜಾನೆಗೆ ಬೀಗ ಹಾಕಿ ಕೂತಿದ್ದಾರೆ. ರಾಜ್ಯವನ್ನು ಆರ್ಥಿಕ ಸಂಕಷ್ಟಕ್ಕೆ ನೂಕುವ ಕೆಲಸವನ್ನು ಸಿಎಂ ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ಕಳವಳ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net