

ಬೆಂಗಳೂರು: ಎಲ್ಲದರ ಬಗ್ಗೆಯೂ ಉಡಾಫೆ ಮಾತು, ಯಾವುದರಲ್ಲೂ ಗಂಭೀರತೆಯಿಲ್ಲದ ನಡವಳಿಕೆ. ಪೂರ್ವ ತಯಾರಿ, ಯೋಜಿತ ರೂಪರೇಷೆಯಿಲ್ಲದೆ ಐಪಿಎಲ್ ಕ್ರಿಕೆಟ್ ನಲ್ಲಿ ಆರ್ ಸಿಬಿ ತಂಡದ ವಿಜಯೋತ್ಸವ ಆಯೋಜಿಸಿ, 11 ಜನ ಮುಗ್ಧರ ಸಾವು, ಹತ್ತಾರು ಜನರ ಗಾಯಗಳಿಗೆ ಕಾರಣವಾದ ಕಾಂಗ್ರೆಸ್ ಸರ್ಕಾರ, ಬೆಂಗಳೂರು ಹಾಗೂ ಕರ್ನಾಟಕಕ್ಕೆ ಕಳಂಕ ತಂದಿದೆ ಬಿಜೆಪಿ ಸಂಸದ, ಡಾ.ಕೆ.ಸುಧಾಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಹೇಳಿಕೆಯೊಂದನ್ನು ನೀಡಿರುವ ಅವರು, ಸಾವಿನ ಮನೆ, ಸೂತಕದ ವೇಳೆ ರಾಜಕಾರಣ ಮಾಡಲು ಖಂಡಿತ ಬಯಸುವುದಿಲ್ಲ. ಆದರೆ ಮಾನವೀಯತೆ, ನೈತಿಕತೆ, ಆತ್ಮಸಾಕ್ಷಿ ಎನ್ನುವುದಿದ್ದರೆ ರಾಜೀನಾಮೆ ನೀಡಬೇಕು. ಹಿರಿಯ ಅಧಿಕಾರಿಗಳು ರಾಜೀನಾಮೆ ನೀಡಿ, ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಐಪಿಎಲ್ 18ನೇ ಆವೃತ್ತಿಯಲ್ಲಿ ಆರ್ ಸಿಬಿ ತಂಡ ಚಾಂಪಿಯನ್ ಕಪ್ ಗೆದ್ದಿದೆ. ಫೈನಲ್ ಪಂದ್ಯ ಮುಗಿದ ರಾತ್ರಿಯೇ ಅಭಿಮಾನಿಗಳ ಆನಂದೋತ್ಸಾಹ ಉತ್ತುಂಗಕ್ಕೆ ಏರಿದ್ದೂ ಸಹಜ. ಇದನ್ನು ಗಮನಿಸಿ ಎಷ್ಟು ಜನರು ಸೇರಬಹುದು ಎಂದು ಅಂದಾಜಿಸಿ ಸನ್ಮಾನ ಕಾರ್ಯಕ್ರಮ ರೂಪಿಸಬೇಕಾಗಿತ್ತು. ಗುಪ್ತಚರ ಸೇರಿ ಎಲ್ಲ ಇಲಾಖೆಗಳ ಜತೆಗೆ ಸಮನ್ವಯ ಸಾಧಿಸಿ ವ್ಯವಸ್ಥೆ ಮಾಡಬೇಕಾಗಿತ್ತು ಎಂದು ಸಾಮಾನ್ಯ ಜನರೇ ಹೇಳುತ್ತಿದ್ದಾರೆ ಎಂದರು.
ಚಾಂಪಿಯನ್ ತಂಡವನ್ನು ತೆರೆದ ವಾಹನದಲ್ಲಿ ಕರೆ ತರುವ ಮೂಲಕ ಜನದಟ್ಟಣೆ ನಿಯಂತ್ರಿಸಲು ಸಾಧ್ಯವಿತ್ತು. ಆದರೆ ಕಾರ್ಯಕ್ರಮದ ಕೊನೆವರೆಗೂ ಅಸ್ಪಷ್ಟತೆಯಿತ್ತು. ಒಮ್ಮೆ ವಿಜಯಯಾತ್ರೆ ನಡೆಯುತ್ತದೆ ಅಥವಾ ಇಲ್ಲ. ವಿಧಾನಸೌಧ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಏರ್ಪಾಡು ಹೀಗೆ ಗೊಂದಲ ಸೃಷ್ಟಿಸಲಾಯಿತು. ನೆಚ್ಚಿನ ಆಟಗಾರರನ್ನು ಬಂದಿದ್ದ ಸಾವಿರಾರು ಅಭಿಮಾನಿಗಳು ಎತ್ತ ಹೋಗಬೇಕು ಎಂದು ತಿಳಿಯದೆ ಪರದಾಡಿದರು, ನೂಕು-ನುಗ್ಗಲಿಗೆ ಕಾರಣವಾಯಿತು ಎಂದು ದೂರಿದ್ದಾರೆ.
ನಿರೀಕ್ಷೆಗೆ ಮೀರಿ ಲಕ್ಷಾಂತರ ಜನರು ಸೇರಿದ್ದರು ಎಂದು ಸರ್ಕಾರ ಹೇಳುತ್ತಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಒಳಗೆ 35 ಸಾವಿರ ಆಸನಗಳ ಪೈಕಿ 25 ಸಾವಿರ ಖಾಲಿಯಿದ್ದವು. ಹೊರಗೆ 30 ಸಾವಿರ ಜನರಿದ್ದರು. ವ್ಯವಸ್ಥಿತವಾಗಿ ಎರಡು ಕಡೆ ಕಾರ್ಯಕ್ರಮ ಸಂಘಟನೆ, ಸೂಕ್ತ ಭದ್ರತಾ ಏರ್ಪಾಡು ಮಾಡದೆ ಕಾಲ್ತುಳಿತ ದುರ್ಘಟನೆಗೆ ಸರ್ಕಾರವೇ ನೇರ ಹೊಣೆಯಾಗಿದೆ ಎಂದು ಡಾ.ಕೆ.ಸುಧಾಜರಚ ಆರೋಪಿಸಿದ್ದಾರೆ.
ಐಪಿಎಲ್ ನಲ್ಲಿ ಈ ಹಿಂದೆ ಚಾಂಪಿಯನ್ ಆಗಿ ಹೊರ ಹೊಮ್ಮಿದ ತಂಡಗಳಿಗೆ ಮುಂಬೈ, ಚೆನ್ನೈ, ಕೋಲ್ಕತ್ತಾದಲ್ಲಿ ಭರ್ಜರಿ ಸ್ವಾಗತ, ಸನ್ಮಾನಗಳಾಗಿವೆ. ಭಾರತ ಟಿ20 ವಿಶ್ವ ಕಪ್ ಗೆದ್ದಾಗ ಮುಂಬೈನಲ್ಲಿ ವಿಜಯೋತ್ಸವ ನಡೆದಿದೆ. ಅಲ್ಲೆಲ್ಲ ಲಕ್ಷಾಂತರ ಜನರು ಸೇರಿದ್ದರು. ಬೆಂಗಳೂರಿನಲ್ಲಿ ಸೇರಿದ್ದಕ್ಕಿಂತ ಮೂರ್ನಾಲ್ಕು ಪಟ್ಟು ಹೆಚ್ಚಿದ್ದರು. ಯಾವುದೇ ಸಣ್ಣ ಘಟನೆಯಾಗಿರಲಿಲ್ಲ. ಅಂದರೆ ಯೋಜಿತ ಸಿದ್ಧತೆ, ಭದ್ರತಾ ವ್ಯವಸ್ಥೆ ಹೇಗಿತ್ತೆಂಬುದಕ್ಕೆ ನಿದರ್ಶನವಾಗಿದೆ ಎಂದರು.
ವಿಧಾನಸೌಧ ಮಹಾದ್ವಾರದ ಮೆಟ್ಟಿಲು ಮೇಲೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಂತ್ರಿಗಳು, ಶಾಸಕರು, ಅಧಿಕಾರಿಗಳ ಮಕ್ಕಳು, ಮೊಮ್ಮಕ್ಕಳು ತುಂಬಿಕೊಂಡಿದ್ದರು. ಕ್ರಿಕೆಟಿಗರ ಪರಿಚಯ, ಆಟೋಗ್ರಾಫ್, ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ತಲ್ಲೀನರಾಗಿದ್ದರು ಎಂದು ಡಾ.ಕೆ.ಸುಧಾಕರ್ ಕುಟುಕಿದರು.
ವೇದಿಕೆ ಮೇಲಿದ್ದ ಎಲ್ಲರಿಗೂ ವಿವಿಐಪಿ ಭದ್ರತಾ ವ್ಯವಸ್ಥೆಯಿತ್ತು. ಕಾರ್ಯಕ್ರಮ ಮುಗಿದ ಬಳಿಕ ಇದಕ್ಕೆಲ್ಲ ಅವಕಾಶ ಮಾಡಿಕೊಳ್ಳಬಹುದಿತ್ತು. ಒಟ್ಟೂ ವೈಫಲ್ಯಗಳಿಂದ ಅಮಾಯಕರು ಬಲಿಯಾಗಿ,ಆ ಕುಟುಂಬಗಳು ಕಣ್ಣೀರಿನಲ್ಲಿ ಕೈತೊಳೆದುಕೊಳ್ಳುವಂತೆ ಮಾಡಿದೆ ಎಂದು ಮರುಕ ವ್ಯಕ್ತಪಡಿಸಿದರು.
ಕನ್ನಡಿಗರ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಕಾಲಿಕವಾಗಿ ನಿಧನರಾದಾಗ ಲಕ್ಷಾಂತರ ಅಭಿಮಾನಿಗಳು ಆಗಮಿಸಿದ್ದರು. ಅಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ, ಬಿಗಿ ಭದ್ರತಾ ವ್ಯವಸ್ಥೆ ಮಾಡಿತ್ತು. ಎರಡು ದಿನಗಳ ಕಾಲ ಪುನೀತ್ ಕಳೇಬರದ ಅಂತಿಮ ದರ್ಶನ ನಂತರ ಅಂತಿಮ ಯಾತ್ರೆಯನ್ನು ವ್ಯವಸ್ಥಿತವಾಗಿ ಆಯೋಜಿಸಿದ್ದನ್ನು ಸಂಸದ ಡಾ.ಕೆ.ಸುಧಾಕರ್ ನೆನಪಿಸಿದ್ದಾರೆ.