ಗ್ಯಾರಂಟಿಗಳ ಜೊತೆ ಆತ್ಮಹತ್ಯೆಯ ಭಾಗ್ಯ ಕರುಣಿಸಿದ ಕಾಂಗ್ರೆಸ್​ ಸರ್ಕಾರ: ಬಿ.ವೈ.ವಿಜಯೇಂದ್ರ ವಾಗ್ದಾಳಿ | Congress

dk (42)
Published on

ಬೆಂಗಳೂರು: ಪ್ರಿಯಾಂಕ್ ಖರ್ಗೆ(Congress) ಆಪ್ತ ರಾಜು ಕಪನೂರನ ಕಿರುಕುಳ ಹಾಗೂ ಬೆದರಿಕೆಯಿಂದ ತತ್ತರಿಸಿರುವ ಬೀದರ್ ಗುತ್ತಿಗೆದಾರ ಸಚಿನ್ ಸುದೀರ್ಘ ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಈ ಕೂಡಲೇ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ಪಡೆಯಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಗ್ರಹಿಸಿದ್ದಾರೆ.

ಈ ಕುರಿತು ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿರು ವಿಜಯೇಂದ್ರ, ಇತ್ತೀಚೆಗಷ್ಟೇ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಪ್ತಸಹಾಯಕನ ಕಿರುಕುಳಕ್ಕೆ ತಹಸೀಲ್ದಾರ್ ಕಚೇರಿಯ ಎಸ್‌ಡಿಎ ರುದ್ರೇಶ್ ಆತ್ಮಹತ್ಯೆ, ಇದರ ಬೆನ್ನಲ್ಲೇ ವಿಧಾನ ಮಂಡಲದ ಸುವರ್ಣಸೌಧಕ್ಕೆ ನುಗ್ಗಿ ಶಾಸಕ ಸಿಟಿ ರವಿ ಅವರ ಮೇಲೆ ಗೂಂಡಾಗಿರಿ ಪ್ರದರ್ಶಿಸಿದ ಸುದ್ದಿ ಹಸಿಯಾಗಿರುವಾಗಲೇ ಇಂದು ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರನ ಕಿರುಕುಳದಿಂದ ಗುತ್ತಿಗೆದಾರ ಅತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಸರ್ಕಾರ ಪಂಚ ಗ್ಯಾರಂಟಿಗಳ ಜೊತೆಗೆ ಆತ್ಮಹತ್ಯೆಯ ಭಾಗ್ಯವನ್ನೂ ಕರುಣಿಸಿ ನತದೃಷ್ಟ ಕುಟುಂಬಗಳನ್ನು ಅನಾಥವಾಗಿಸಲು ಹೊರಟಿದೆ. ಎಲ್ಲ ವಿಷಯದಲ್ಲೂ ಅನಗತ್ಯ ಮೂಗು ತೂರಿ ತಮ್ಮ ನಡೆ, ನುಡಿಗಳಲ್ಲಿ ದಾಷ್ಟ್ಯತನ ಪ್ರದರ್ಶಿಸುವ ಸಚಿವ ಪ್ರಿಯಾಂಕ್ ಖರ್ಗೆ ಈ ಸಾವಿಗೆ ಹೊಣೆಗಾರರಾಗಿದ್ದಾರೆ ಎಂಬುದು ಆತ್ಮಹತ್ಯೆಗೆ ಒಳಗಾಗಿರುವ ದುರ್ದೈವಿ ಗುತ್ತಿಗೆದಾರ ಸಚಿನ್ ಬರೆದಿರುವ ಪತ್ರದಲ್ಲಿ ಸ್ಪಷ್ಟವಾಗಿರುವುದರಿಂದ ಕೂಡಲೇ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಗುತ್ತಿಗೆದಾರರು ಅತ್ಯಂತ ಆತಂಕದ ಸ್ಥಿತಿ ಎದುರಿಸುತ್ತಿದ್ದಾರೆ, ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನಲುಗಿ ಹೋಗಿದ್ದಾರೆ. ವಿಪರೀತ ಆರ್ಥಿಕ ಒತ್ತಡ ಅವರನ್ನು ಆತ್ಮಹತ್ಯೆಗೆ ಪ್ರೇರೇಪಿಸುತ್ತಿದೆ. ಸಚಿವರ ಕೈ ಕೆಳಗಿನ ಅಧಿಕಾರಿಗಳು ಹಾಗೂ ಆಪ್ತರ ಒತ್ತಡಗಳು ಗುತ್ತಿಗೆದಾರರನ್ನು ಉಸಿರುಗಟ್ಟಿಸುತ್ತಿವೆ ಎಂದಿದ್ದಾರೆ.

ಪ್ರಿಯಾಂಕ್ ಖರ್ಗೆ ಅವರ ಬಲಗೈ ಬಂಟ ಹಾಗೂ ಕಾಂಗ್ರೆಸ್ ಮುಖಂಡ ರಾಜುವಿನ ದೌರ್ಜನ್ಯಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಸಚಿನ್ ಬರೆದಿಟ್ಟಿರುವ ಪತ್ರ ಇದಕ್ಕೆ ಸಾಕ್ಷಿಯಾಗಿದೆ. ಈ ಕೂಡಲೇ ಪೊಲೀಸ್ ಅಧಿಕಾರಿಗಳು ಪಕ್ಷಪಾತಿಗಳಂತೆ ವರ್ತಿಸುವುದನ್ನು ಬಿಟ್ಟು ಪಾರದರ್ಶಕ ತನಿಖೆ ನಡೆಸದಿದ್ದರೆ ಈ ವಿಷಯವನ್ನು ಬಿಜೆಪಿ ಅತ್ಯಂತ ಗಂಭೀರವಾಗಿ ಪರಿಗಣಿಸಿ ಪ್ರಿಯಾಂಕ್ ಖರ್ಗೆ ಅವರು ರಾಜೀನಾಮೆ ನೀಡುವವರೆಗೂ ಹೋರಾಟ ನಡೆಸಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net