

ಬೆಂಗಳೂರು: ಶೈಕ್ಷಣಿಕ, ಸಾಮಾಜಿಕ ಸಮೀಕ್ಷೆಯಲ್ಲಿ ಹಿಂದು ಜಾತಿಗಳ ನಡುವೆ ಕ್ರೈಸ್ತರನ್ನು ನುಗ್ಗಿಸಲು ರಾಜ್ಯ ಸರ್ಕಾರ ಪಿತೂರಿ ಹೂಡಿದೆ ಎಂದು ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆ ಶಂಕೆ ವ್ಯಕ್ತಪಡಿಸಿ, ಜನ ಜಾಗೃತಿಗೆ ಕರಪತ್ರ ಹಂಚಲು ತೀರ್ಮಾನಿಸಿದೆ.
ವೇದಿಕೆ ಮುಖಂಡ, ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾ ಅಧ್ಯಕ್ಷ ಎಸ್.ಹರೀಶ್ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರಾಜ್ಯ ಸರ್ಕಾರದ ಸಮೀಕ್ಷಾ ಧೋರಣೆ ಬಗ್ಗೆ ಮಠಾಧೀಶರು, ಜಾತಿವಾರು ಸಂಘಟನೆಗಳ ಮುಖಂಡರು ಅರ್ಥ ಮಾಡಿಕೊಳ್ಳಬೇಕು ಎಂದು ಕೋರಿದರು.
ಕಾಂತರಾಜು ವರದಿಯು ಅನ್ಯಾನ್ಯ ಕಾರಣಗಳಿಂದ ಅಂಗೀಕಾರವಾಗಿಲ್ಲ. ಕೊನೆಗೆ ಸರ್ಕಾರವೇ ಕೈಬಿಟ್ಟು ಸೆ.22 ರಿಂದ ಅ.7ರವರೆಗೆ ಹೊಸದಾಗಿ ಸಮೀಕ್ಷೆ ನಡೆಸಲು ಮುಂದಾಗಿದೆ. ಹಿಂದಿನ ಕಹಿ ಅನುಭವಗಳ ಹಿನ್ನೆಲೆಯಲ್ಲಿ ಜನರ ಎಚ್ಚೆತ್ತುಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.
ಹಿಂದುಳಿದ ವರ್ಗಗಳ ಆಯೋಗವು ಸಮೀಕ್ಷೆಗೆ ಒಳಪಡಲಿರುವ 1400 ಜಾತಿ- ಉಪಜಾತಿಗಳ ಪಟ್ಟಿಯನ್ನು ಪ್ರಕಟಿಸಿದೆ. ಇದರಲ್ಲಿ ಅನಧಿಕೃತವಾಗಿ ಹಿಂದು ಜಾತಿಗಳನ್ನು ಕ್ರೈಸ್ತರ ಜಾತಿಗಳೆಂದು ಗುರುತಿಸಿದ್ದು, ಇದಕ್ಕೆ ಆಕ್ಷೇಪಣೆ ಸಲ್ಲಿಕೆಯಾಗಿವೆ.
ಆದರೂ ರಾಜ್ಯ ಸರ್ಕಾರ, ಆಯೋಗದ ನಿಲುವು ಬದಲಾವಣೆಯಾಗಿಲ್ಲ. ಜಾತಿ ಸಮುದಾಯಗಳನ್ನು ಒಡೆಯಲು, ಮತಾಂತರಕ್ಕೆ ಕುಮ್ಮಕ್ಕು ಕೊಟ್ಟು, ವ್ಯವಸ್ಥಿತ ಸಂಚು ರೂಪಿಸಿದಂತಿದೆ. ಈ ಧೋರಣೆ ಬದಲಾಗಲಿದಿದ್ದರೆ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಸ್.ಹರೀಶ್ ಎಚ್ಚರಿಸಿದರು.
ಕ್ರೈಸ್ತ ಗೊಂದಲ ಮೊದಲು ಬಗೆಹರಿಸಬೇಕು ಎಂದು ಸರ್ಕಾರ, ಆಯೋಗಕ್ಕೆ ಒತ್ತಾಯಿಸಿ ಪತ್ರ ಬರೆಯಬೇಕು. ಜಾತಿ, ಉಪಜಾತಿಗಳ ಸಂಘಟನೆಗಳು ತುರ್ತಾಗಿ ಸಭೆ ಖಂಡನಾ ನಿರ್ಣಯವನ್ನು ಅಂಗೀಕರಿಸಬೇಕು ಎಂದರು.
ಹಕ್ಕೊತ್ತಾಯ ಮಂಡಿಸಿ ಸರ್ಕಾರದ ಗಮನಸೆಳೆಯಲು ಸಾಮಾಜಿಕ ಜಾಲತಾಣಗಳ ವೇದಿಕೆಯನ್ನು ಜಾತಿವಾರು ಸಂಘಟನೆಗಳು ಬಳಸಿಕೊಳ್ಳಬೇಕು. ಸಮುದಾಯಗಳಲ್ಲಿ ಜಾಗೃತಿ ಮೂಡಿಸಲು ವಿವಿಧ ಮಠಾಧೀಶರು ಮುಂದಾಗಬೇಕು ಎಂದು ಎಸ್.ಹರೀಶ್ ವಿನಂತಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಕೇಂದ್ರ ಜಿಲ್ಲಾ ಅಧ್ಯಕ್ಷ ಸಪ್ತಗಿರಿ ಗೌಡ, ಒಬಿಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಗಣೇಶ್‌ರಾವ್ ಕೇಸರ್ಕರ್, ವಿವಿಧ ಸಮುದಾಯಗಳ ಪದಾಧಿಕಾರಿಗಳಾದ ಶ್ರೀಧರ, ಸೋಮಶೇಖರ್, ಬಾಬು ಪತ್ತಾರ್, ನಾಗರಾಜ ಇದ್ದರು.