ಅಧಿಕಾರ ಸಿಗದೆ ಕಾಂಗ್ರೆಸ್‌ಗೆ ಹತಾಶೆ

sgr m (1)
ಮೈತ್ರಿ ಪಾಟೀಲ್
Published on

ಸಾಗರ: ನಗರಸಭೆಯಲ್ಲಿ ಆಡಳಿತ ಹಿಡಿಯಲು ಸಾಧ್ಯವಾಗದ ಕಾರಣಕ್ಕೆ ಕಾಂಗ್ರೆಸಿಗರು ಹತಾಶರಾಗಿದ್ದಾರೆ. ನಗರಸಭೆಯಲ್ಲಿ ಮಹಿಳಾ ಅಧ್ಯಕ್ಷರು, ಉಪಾಧ್ಯಕ್ಷರು ಕಾರ್ಯನಿರ್ವಹಿಸುವುದು ಅವರಿಗೆ ಇಷ್ಟವಿಲ್ಲದಂತೆ ಕಾಣುತ್ತಿದೆ. ಏಕೆಂದರೆ ಅವರ ಕಾರ್ಯವೈಖರಿಯೇ ಎಲ್ಲವನ್ನೂ ತಿಳಿಸುತ್ತಿದೆ ಎಂದು ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್ ದೂರಿದರು.

ಗುರುವಾರ ನಗರಸಭೆ ಸಾಮಾನ್ಯಸಭೆಯಲ್ಲಿ ಕಾನೂನಿನ ಪ್ರಕಾರವೇ ಸ್ಥಾಯಿ ಸಮಿತಿ ಸದಸ್ಯರನ್ನು ನಾನು ಘೋಷಣೆ ಮಾಡಿದ್ದೇನೆ. ಆದರೆ ಶಾಸಕರಿಗೆ ಮತ್ತು ಕಾಂಗ್ರೆಸ್‌ನ ಸದಸ್ಯರಿಗೆ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಕೈತಪ್ಪಿದ್ದು ಹಾಗೂ ಸ್ಥಾಯಿ ಸಮಿತಿಗೆ ಹೆಚ್ಚು ಬಿಜೆಪಿ ಸದಸ್ಯರನ್ನು ಘೋಷಿಸಿದ್ದರಿಂದ ಹತಾಶರಾಗಿ ಸಾಮಾನ್ಯ ಸಭೆಯಲ್ಲಿ ಗದ್ದಲ ಸೃಷ್ಟಿಸಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

ಅನೇಕ ತಿಂಗಳ ನಂತರ ನಗರಸಭೆಯಲ್ಲಿ ಚುನಾಯಿತ ಪ್ರತಿನಿಧಿಗಳ ಆಡಳಿತ ಬಂದಿದೆ. ಶಾಸಕರು ಹೆಚ್ಚಿನ ಅನುದಾನ ತರುವ ಜತೆಗೆ ಸೂಕ್ತ ಮಾರ್ಗದರ್ಶನ ನೀಡಿ ಜನರಿಗೆ ಉತ್ತಮ ಆಡಳಿತ ನೀಡಲು ಬೆಂಬಲ ಕೊಡಬೇಕಾಗಿತ್ತು. ಆದರೆ ಸಭೆಯಲ್ಲಿ ಗದ್ದಲ ನಡೆಯುತ್ತಿದ್ದರೂ ಶಾಸಕರು ಮೌನವಾಗಿದ್ದರು. ಇದು ನನಗೆ ಆಗಿರುವ ಅವಮಾನವಲ್ಲ. ಸಾಗರದ ಜನತೆಗೆ, ಮಹಿಳೆಯರಿಗೆ ಆಗಿರುವ ಅವಮಾನ ಎಂದರು.

ಸದಸ್ಯೆ ಪ್ರೇಮಾ ಕಿರಣ್ ಸಿಂಗ್ ಮಾತನಾಡಿ, ಶಾಸಕರೇ ಹೇಳುವಂತೆ ನಗರಸಭೆ ಅವಧಿ ಇರುವುದು ಎಂಟು ತಿಂಗಳು ಮಾತ್ರ. ಇದಕ್ಕೆ ಶಾಸಕರು ಬೆಂಬಲ ನೀಡಬೇಕಿತ್ತೇ ಹೊರತು ಆಡಳಿತದಲ್ಲಿ ಹಸ್ತಕ್ಷೇಪ ಮಾಡಿ ಗೊಂದಲ ಸೃಷ್ಟಿಸುವ ಕೆಲಸ ಮಾಡಬಾರದಿತ್ತು. ನಗರಸಭೆಗೆ ಯಾವುದೇ ಅನುದಾನ ಬರುತ್ತಿಲ್ಲ. ನೂತನ ಅಧ್ಯಕ್ಷರು, ಉಪಾಧ್ಯಕ್ಷರು ತಮ್ಮ ಕೈನಿಂದ ಹಣ ಖರ್ಚು ಮಾಡಿ ವಾಹನಕ್ಕೆ ಪೆಟ್ರೋಲ್ ಹಾಕಿಸಿಕೊಂಡು ಶಿವಮೊಗ್ಗ ಹೋಗಿ ಬರಬೇಕಾದ ಸ್ಥಿತಿಯಿದೆ. ಅಧಿಕಾರಿಗಳು ಚುನಾಯಿತ ಮಂಡಳಿಗೆ ಬೆಂಬಲ ನೀಡುತ್ತಿಲ್ಲ. ಊರಿನ ಅಭಿವೃದ್ಧಿಗೆ ಎಲ್ಲರೂ ಸಹಕರಿಸಬೇಕು ಎಂದು ಒತ್ತಾಯಿಸಿದರು.

ಅಧ್ಯಕ್ಷರು ಕಾನೂನಾತ್ಮಕವಾಗಿ ಬಂದಿರುವ ಅಧಿಕಾರವನ್ನು ನಿಭಾಯಿಸಿದ್ದಾರೆ. ಕಾಂಗ್ರೆಸ್‌ನವರಿಗೆ ಇಷ್ಟ ಇಲ್ಲದಿದ್ದರೆ ಆಕ್ಷೇಪಣೆ ಸಲ್ಲಿಸಬಹುದಿತ್ತು. ಆದರೆ ಸಭೆ ಮುಂದುವರಿಸಲು ಅವಕಾಶ ನೀಡದಂತೆ ಗಲಾಟೆ ಮಾಡಿದ್ದು ಖಂಡನೀಯ. ಇಂತಹ ದಬ್ಬಾಳಿಕೆ ಸಹಿಸಿಕೊಂಡಿರಲು ಸಾಧ್ಯವಿಲ್ಲ. ಪೌರಾಯುಕ್ತ ನಾಗಪ್ಪ, ತಮ್ಮ ಹೊಣೆಗಾರಿಕೆಯನ್ನು ನಿಭಾಯಿಸಿದ್ದಾರೆ. ಕೆಲವರು ಶಾಸಕರಿಗೆ ತಪ್ಪು ಮಾಹಿತಿ ನೀಡುವ ಮೂಲಕ ಅವರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸದಸ್ಯೆ ಮಧುರಾ ಶಿವಾನಂದ್ ದೂರಿದರು.

ಉಪಾಧ್ಯಕ್ಷೆ ಸವಿತಾ ವಾಸು, ಸದಸ್ಯರಾದ ಭಾವನಾ ಸಂತೋಷ್, ಸರೋಜಾ ಭಂಡಾರಿ, ಸುಧಾ ಉದಯ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net