ಕಾಂಗ್ರೆಸ್‌ಗೆ ಪಾಪಪ್ರಜ್ಞೆ: ಛಲವಾದಿ ಟೀಕೆ | Betrayal of the constitution

BJP program
Published on

ಬೆಂಗಳೂರು: ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಸಂವಿಧಾನಕ್ಕೆ ದ್ರೋಹಬಗೆದ ಪಾಪಪ್ರಜ್ಞೆ ಕಾಂಗ್ರೆಸ್ ಪಕ್ಷವನ್ನು ಕಾಡುತ್ತಿದೆ. ಅದನ್ನು ಮರೆಮಾಚುವ ಸಲುವಾಗಿ ರಾಹುಲ್‌ಗಾಂಧಿಯವರು ಸಂವಿಧಾನ ಪುಸ್ತಕ ಹಿಡಿದುಕೊಂಡು ಓಡಾಡುತ್ತಿದ್ದಾರೆ ಎಂದು ಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು.

ರಾಜ್ಯ ಬಿಜೆಪಿ ಕಚೇರಿಯಲ್ಲಿ ‘ಮನೆ, ಮನಕ್ಕೆ ಸಂವಿಧಾನ ಅಭಿಯಾನ’ದ ಶೀರ್ಷಿಕೆ ಗೀತೆಯನ್ನು ಗುರುವಾರ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಕಾಂಗ್ರೆಸ್‌ಸಿಗರು ಮೊದಲಿನಿಂದಲೂ ಸಂವಿಧಾನವನ್ನು ಗೌರವಿಸಿದ್ದರೆ ರಾಹುಲ್ ಗಾಂಧಿಯವರು ಸಂವಿಧಾನ ಪುಸ್ತಕ ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ಬರುತ್ತಿದ್ದಿಲ್ಲ ಎಂದು ಕುಟುಕಿದರು.

ಸಂವಿಧಾನ ಹಾಗೂ ಸಂವಿಧಾನ ಕರ್ತೃ ಡಾ.ಬಿ.ಆರ್.ಅಂಬೇಡ್ಕರ್ ಬಿಜೆಪಿ ಗರಿಷ್ಠ ಗೌರವ ನೀಡಿದ್ದರೆ, ಕಾಂಗ್ರೆಸ್ ಪಕ್ಷ ಅಪಚಾರ ಎಸಗಿದೆ ಎಂದು ದೇಶಕ್ಕೆ ಗೊತ್ತಿದೆ. ತುರ್ತು ಪರಿಸ್ಥಿತಿ ಹೇರಿ ಸಂವಿಧಾನಕ್ಕೆ ಅಪಮಾನಿಸಿದ ಕಾಂಗ್ರೆಸ್ ಪಕ್ಷ, ಈಗ ಸಂವಿಧಾನಕ್ಕೆ ಗೌರವ ಕೊಡುತ್ತೇವೆ ಎಂದು ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ಮಾಡಿದರು.

ಜನರಿಗೆ ಮನವರಿಕೆ

ಮಾಜಿ ಸಚಿವ, ಪಕ್ಷದ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಮಾತನಾಡಿ ಹಿಂದುಗಳಿಗೆ ಭಗವದ್ಗೀತೆ, ಮುಸ್ಲಿಮರಿಗೆ ಕುರಾನ್, ಕ್ರೈಸ್ತರಿಗೆ ಬೈಬಲ್ ಧರ್ಮಗ್ರಂಥವಾದರೆ ಎಲ್ಲ ಭಾರತೀಯರಿಗೆ ಸಂವಿಧಾನ ಧರ್ಮಗ್ರಂಥವಾಗಿದೆ. ಇದು ಜನರಿಗೆ ಮನವರಿಕೆಯಾಗಬೇಕಾಗಿದೆ ಎಂದರು.

ಎಂದೆಂದೂ ಸಂವಿಧಾನಕ್ಕೆ ಗೌರವ ಕೊಡದೆ ಇರುವವರು ಸಂವಿಧಾನದ ಪುಸ್ತಕವನ್ನು ಹಿಡಿದುಕೊಂಡು ಓಡಾಡುವಂತಹ ವಾತಾವರಣ ನೋಡುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಸಂವಿಧಾನದ ಆಶಯಗಳನ್ನು ಮನೆ, ಮನೆಗೆ ಮನಕ್ಕೆ ತಲುಪಿಸುವ ಕೆಲಸ ಮಾಡಬೇಕು. ಇಲ್ಲವಾದರೆ ಸಂವಿಧಾನಕ್ಕೆ ಯಾರಾದರೂ ಅಪಾಯ ತಂದಿಡುವ ಸಾಧ್ಯತೆಗಳಿವೆ ಎಂದು ಎಚ್ಚರಿಸಿದರು.

ಪಕ್ಷದ ಎಸ್‌ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ಮಾತನಾಡಿ ಸಂವಿಧಾನವನ್ನು 75 ಬಾರಿ ತಿದ್ದುಪಡಿ ಮಾಡಿದ ಕಾಂಗ್ರೆಸ್, ಸದುದ್ದೇಶದಿಂದ ಈ ಕ್ರಮವಹಿಸಿದ್ದಲ್ಲ. ಆದರೂ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.

ಕಾರ್ಯಕ್ರಮದಲ್ಲಿ ಎಸ್‌ಸಿ ಮೋರ್ಚಾ ರಾಜ್ಯಾಧ್ಯಕ್ಷ, ಶಾಸಕ ಸಿಮೆಂಟ್ ಮಂಜುನಾಥ್, ಶಾಸಕರಾದ ರಮೇಶ ಭೂಸನೂರ, ಬಸವರಾಜ ಮತ್ತಿಮಡು, ಎಸ್‌ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು, ಪಕ್ಷದ ಕಲಬುರಗಿ ನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್ ಇನ್ನಿತರರು ಇದ್ದರು.

ಡಾ.ಬಿ.ಆರ್.ಅಂಬೇಡ್ಕರ್ ರಚಿತ ಸಂವಿಧಾನ ಅಂದರೇನು, ನಮಗೇನು ಕೊಟ್ಟಿದೆ ಎಂಬ ಮಾಹಿತಿ ಪ್ರತಿ ಮನೆಗೆ ತಲುಪಿಸಲು ‘ಡಾಕ್ಯೂ-ಡ್ರಾಮಾ’ ಧಾರಾವಾಹಿಯನ್ನು ಚಿತ್ರಿಸಲು ಉದ್ದೇಶಿಸಲಾಗಿದೆ. - ಸಿಮೆಂಟ್ ಮಂಜುನಾಥ್, ಶಾಸಕ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net