ದೇಗುಲಗಳಲ್ಲಿ ಹರಕೆ ತೀರಿಸಿದ ಶಿವಕುಮಾರ್

ಧಖಶ
Published on

ಕುಣಿಗಲ್/ರಾಮನಗರ: ಕೆಪಿಸಿಸಿ ಅಧ್ಯಕ್ಷ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಸಂಕಷ್ಟಗಳ ಪರಿಹಾರಕ್ಕೆ ದೇವರ ಮೊರೆ ಹೋಗಿದ್ದಾರೆ. ಐಟಿ, ಇಡಿ ಸಂಕಷ್ಟಕ್ಕೆ ಶಿವಕುಮಾರ್ ಸಿಲುಕಿಕೊಂಡಿದ್ದಾಗ ಕುಣಿಗಲ್​ನ ಹಂಗರಹಳ್ಳಿ ವಿದ್ಯಾಚೌಡೇಶ್ವರಿ ಮಹಾಸಂಸ್ಥಾನ ಮಠದ ಶ್ರೀ ಬಾಲ ಮಂಜುನಾಥ್ ಸ್ವಾಮೀಜಿ ಅವರು ಡಿಕೆಶಿ ಕಷ್ಟಗಳ ನಿವಾರಣೆಗಾಗಿ 1008 ಹಿಡುಗಾಯಿ ಹೊಡೆಸುವುದಾಗಿ ಹರಕೆ ಹೊತ್ತಿದ್ದರು. ಈ ಹಿನ್ನೆಲೆಯಲ್ಲಿ ಶುಕ್ರವಾರ ದೇಗುಲಕ್ಕೆ ಭೇಟಿ ನೀಡಿದ್ದ ಡಿಕೆಶಿ ಹರಕೆ ತೀರಿಸಿದರು.

ಮೂರು ಗಂಟೆ ಕಾಲ ಶತ ಚಂಡಿಕಾ ಮಹಾಯಾಗದಲ್ಲಿ ಭಾಗಿಯಾದರು. ವಿದ್ಯಾಚೌಡೇಶ್ವರಿಗೆ ತಾವೇ 1008 ಹೀಡುಗಾಯಿ ಹೊಡೆದರು. ಇದಕ್ಕೆ ಪಟ್ಟನಾಯಕನಹಳ್ಳಿಯ ಶ್ರೀ ನಂಜಾವಧೂತ ಸ್ವಾಮೀಜಿ ಸಾಥ್ ನೀಡಿದರು.

ಕಬ್ಬಾಳಮ್ಮನಿಗೆ ಪೂಜೆ: ಕನಕಪುರದಲ್ಲಿ ಶಿವಕುಮಾರ್ ತಾಯಿ ಗೌರಮ್ಮ ಮಗನ ಏಳಿಕೆಗಾಗಿ ಮನೆದೇವರು ಕೆಂಕೇರಮ್ಮ ಹಾಗೂ ಗ್ರಾಮದೇವತೆ ಕಬ್ಬಾಳಮ್ಮನಗೆ ವಿಶೇಷ ಪೂಜೆ ಸಲ್ಲಿಸಿದರು. ಮಗನಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ದೊರೆಯುತ್ತಿರುವ ಹಿನ್ನೆಲೆಯಲ್ಲಿ ಸಿಕ್ಕ ಅವಕಾಶವನ್ನು ಪಕ್ಷದ ಮತ್ತು ರಾಜ್ಯದ ಜನರ ಒಳಿತಿಗಾಗಿ ನಡೆಸಿಕೊಂಡು ಬರಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.

ಗಡೇ ದುರ್ಗಾದೇವಿ ಮೊರೆ

ಡಿಕೆಶಿಗೆ ಒಳಿತಾಗಲಿ ಎಂದು ಯಾದಗಿರಿ ಜಿಲ್ಲೆ ಗೋನಾಲ ಗ್ರಾಮದ ಶಕ್ತಿದೇವತೆ ಗಡೇ ದುರ್ಗಾದೇವಿಗೆ ಶುಕ್ರವಾರ ಬೆಳಗ್ಗಿನ ಜಾವ ವಿಶೇಷ ಪೂಜೆ ಸಲ್ಲಿಸಲಾಯಿತು.

ಮುಂದುವರಿದ ಕುತೂಹಲ

ನವದೆಹಲಿ: ಕೆಪಿಸಿಸಿಗೆ ನೂತನ ಸಾರಥಿ ಘೊಷಣೆ ಶುಕ್ರವಾರ ಆಗಲಿದೆ ಎಂಬ ರಾಜ್ಯ ಕಾಂಗ್ರೆಸ್ ನಾಯಕರು, ಕಾರ್ಯಕರ್ತರ ನಿರೀಕ್ಷೆ ಹುಸಿಯಾಗಿದೆ. ಎಂ.ಬಿ. ಪಾಟೀಲ್ ಅಥವಾ ಡಿ.ಕೆ.ಶಿವಕುಮಾರ್ ಅವರಲ್ಲಿ ಹೈಕಮಾಂಡ್ ಆಯ್ಕೆ ಯಾರು ಎಂಬ ಕುತೂಹಲ ಮತ್ತೆ ಮುಂದುವರಿದಿದೆ. ಕಾರ್ಯಾಧ್ಯಕ್ಷ ಹುದ್ದೆ ನಿರೀಕ್ಷೆಯಲ್ಲಿರುವ ಸತೀಶ್ ಜಾರಕಿಹೊಳಿ ದೆಹಲಿಗೆ ಆಗಮಿಸಿದ್ದು, ಹಿರಿಯ ನಾಯಕ ಅಹ್ಮದ್ ಪಟೇಲ್​ರನ್ನು ಭೇಟಿ ಮಾಡಿ ಪರಿಶಿಷ್ಟ ಪಂಗಡದ ಕೋಟಾದಲ್ಲಿ ಸ್ಥಾನಮಾನ ನೀಡಬೇಕೆಂದು ರ್ಚಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net