

PM Modi: ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದು 26/11ರ ಮುಂಬೈ ದಾಳಿಗೆ ಅಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಪಾಕಿಸ್ತಾನದ ವಿರುದ್ಧ ಪ್ರತೀಕಾರವನ್ನು ತೀರಿಸಿಕೊಳ್ಳಲಿಲ್ಲ ಎಂದು ಮಾಜಿ ಗೃಹ ಸಚಿವ ಪಿ.ಚಿದಂಬರಂ ಹೇಳಿಕೆ ಉಲ್ಲೇಖಿಸಿ ಪ್ರಧಾನಿ ಮೋದಿ ಬುಧವಾರ(ಅ. 08) ವಾಗ್ದಾಳಿ ನಡೆಸಿದ್ದಾರೆ.
ನವಿ ಮುಂಬೈ ಅಂತರಾಷ್ಟ್ರೀಯ ಏರ್ಪೋರ್ಟ್ ಉದ್ಘಾಟಿಸಿ ಮಾತನಾಡಿದ ಅವರು, ಚಿದಂಬರಂ ಹೆಸರನ್ನು ಉಲ್ಲೇಖಿಸದೆ ಭಾರತದ ಆರ್ಥಿಕ ರಾಜಧಾನಿಯಾಗಿರುವ ಮುಂಬೈ ಅನ್ನು ಉಗ್ರರು 2008ರಲ್ಲಿ ಗುರಿಯಾಗಿಸಿ ದಾಳಿ ನಡೆಸಿದರು. ಆದರೆ ಅಂದು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ದೌರ್ಬಲ್ಯ ಮತ್ತು ಭಯೋತ್ಪಾದನೆಯ ಮುಂದೆ ಮಂಡಿಯೂರುವ ಸಂದೇಶವನ್ನು ನೀಡಿತು ಕಿಡಿಕಾರಿದ್ದಾರೆ.
ಭಾರತದ ಗೃಹ ಸಚಿವರಾಗಿ ಸೇವೆ ಸಲ್ಲಿಸಿದ್ದ ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಇತ್ತೀಚೆಗೆ ಭಾರತದ ಸಶಸ್ತ್ರ ಪಡೆಗಳು 26/11 ರ ನಂತರ ಪಾಕಿಸ್ತಾನದ ಮೇಲೆ ದಾಳಿ ಮಾಡಲು ಸಿದ್ಧವಾಗಿದ್ದವು. ದೇಶವೂ ಅದನ್ನೇ ಬಯಸಿತ್ತು, ಆದರೆ ಅಂತಾರಾಷ್ಟ್ರೀಯ ಒತ್ತಡದಿಂದಾಗಿಸರ್ಕಾರ ಪಾಕಿಸ್ತಾನದ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸಿತು ಎಂದು ಹೇಳಿದ್ದಾರೆ.
ಹಾಗಾದ್ರೆ ಅಂತಾರಾಷ್ಟ್ರೀಯ ಒತ್ತಡದಿಂದ ಪ್ರತೀಕಾರ ಬೇಡ ಎಂಬ ನಿರ್ಧಾರವನ್ನು ಯಾರೂ ತೆಗೆದುಕೊಂಡರು ಎಂಬುದನ್ನು ಕಾಂಗ್ರೆಸ್ ಉತ್ತರಿಸಬೇಕು. ಕಾಂಗ್ರೆಸ್ ದೌರ್ಬಲ್ಯವು ಭಯೋತ್ಪಾದಕರನ್ನು ಧೈರ್ಯಗೊಳಿಸಿತು, ಮತ್ತು ಭಾರತದ ಭದ್ರತೆಯನ್ನು ದುರ್ಬಲಗೊಳಿಸಿತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ತಮ್ಮ ಸರ್ಕಾರವು ದೇಶದ ಜನರಿಗೆ ಮತ್ತು ಅದರ ಭದ್ರತೆ ಮೊದಲ ಆದ್ಯತೆ ನೀಡುತ್ತದೆ. ಇಂದಿನ ಭಾರತವು ಸೂಕ್ತ ಪ್ರತಿಕ್ರಿಯೆ ನೀಡುವ ಮತ್ತು ಪಾಕ್ ಮೇಲೆ ಅದರ ನೆಲದಲ್ಲಿ ದಾಳಿ ಮಾಡುವಷ್ಟು ಗಟ್ಟಿ ಇದೆ. ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತ ಆಪರೇಷನ್ ಸಿಂಧೂರ ನಡಸಿತು. ಈಗ ಜಗತ್ತು ಭಾರತವನ್ನು ಅರ್ಥ ಮಾಡಿಕೊಂಡಿದೆ ಎಂದು ಹೇಳಿದ್ದಾರೆ.
26/11 ಮುಂಬೈ ದಾಳಿ ಬಗ್ಗೆ ಪಿ.ಚಿದಂಬರಂ ಹೇಳಿದ್ದೇನು?
2008ರ ಮುಂಬೈ ಭಯೋತ್ಪಾದಕ ದಾಳಿಯ ಬಳಿಕ ಭಾರತದ ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದ ಪಿ. ಚಿದಂಬರಂ ಅವರು ಇತ್ತೀಚಿಗೆ ಖಾಸಗಿ ಚಾನಲ್ಗೆ ನೀಡಿದ ಸಂದರ್ಶನವೊಂದರಲ್ಲಿ, ಪಾಕಿಸ್ತಾನದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ದೇಶ ಸಿದ್ದತೆ ನಡೆಸಿತ್ತು. ಆದರೆ ಯುದ್ಧವನ್ನು ಪ್ರಾರಂಭಿಸದಂತೆ ಜಾಗತಿಕವಾಗಿ ಸರ್ಕಾರದ ಮೇಲೆ ಒತ್ತಡ ಬಂದ ಬಳಿಕ ಸಂಯಮದಿಂದ ವರ್ತಿಸಲು ನಿರ್ಧರಿಸಲಾಯಿತು ಎಂದು ಹೇಳಿದ್ದರು.
ಆಗಿನ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಕಾಂಡೋಲೀಜಾ ರೈಸ್ ಕೂಡ ಭಾರತಕ್ಕೆ ಬಂದು ತಮ್ಮನ್ನು ಮತ್ತು ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿ ಭಾರತವು ಪಾಕಿಸ್ತಾನದ ವಿರುದ್ಧ ಮಿಲಿಟರಿ ಕ್ರಮ ಕೈಗೊಳ್ಳದಂತೆ ಒತ್ತಾಯಿಸಿದ್ದರು ಎಂದು ತಿಳಿಸಿದ್ದರು. (ಏಜೆನ್ಸೀಸ್)