ತರಾತುರಿಯಲ್ಲಿ ಟೆಂಡರ್ ಕರೆಯುವ ಮೂಲಕ ಖಜಾನೆ ಲೂಟಿ: ಸರ್ಕಾರದ ವಿರುದ್ಧ ಕಾಂಗ್ರೆಸ್​ ಗಂಭೀರ ಆರೋಪ

DKS
Published on

ಬೆಂಗಳೂರು: ಚುನಾವಣೆ ಸಮೀಪಿಸುತ್ತಿದ್ದಂತೆ ಈ ಸರ್ಕಾರ ರಾಜ್ಯವನ್ನು ಲೂಟಿ ಹೊಡೆಯುವ ಕೆಲಸ ಮಾಡುತ್ತಿದೆ. ನೀರಾವರಿ, ಲೋಕೋಪಯೋಗಿ,‌ ಆರೋಗ್ಯ ಹಾಗೂ ಇಂಧನ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳಲ್ಲಿ‌ ತರಾತುರಿಯಲ್ಲಿ ಟೆಂಡರ್ ಮಾಡುವ ಮೂಲಕ ರಾಜ್ಯದ ಬೊಕ್ಕಸವನ್ನು ಸರ್ಕಾರ ದೋಚುತ್ತಿದೆ ಎಂದು ಕಾಂಗ್ರೆಸ್​, ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಅವರ ಸದಾಶಿವನಗರದ ನಿವಾಸದಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ, ಡಿಕೆಶಿ, ಸುರ್ಜೇವಾಲಾ ಹಾಗೂ ಸಿದ್ದರಾಮಯ್ಯ ಅವರು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.

ಡಿಕೆಶಿ ಮಾತನಾಡಿ, ಇಂದು ತುರ್ತಾಗಿ ಸುದ್ದಿಗೋಷ್ಟಿ ಕರೆದಿದ್ದೇವೆ. ಸರ್ಕಾರ ಇನ್ನು ಒಂದು ತಿಂಗಳು ಮಾತ್ರ ಇರುತ್ತದೆ. ಹೀಗಾಗಿ ತರಾತುರಿಯಲ್ಲಿ ಎಲ್ಲಾ ಇಲಾಖೆಯಲ್ಲಿ ಟೆಂಡರ್ ಮಾಡ್ತಿದ್ದಾರೆ. 500 ಕೋಟಿ ರೂ. ಟೆಂಡರ್ ಇದ್ದರೆ, ‌ಅದನನ್ನು 1000 ಕೋಟಿ ರೂ.ಗೆ ಅಂದಾಜು ಮಾಡುತ್ತಿದ್ದಾರೆ. ಕೆಲವೊಂದನ್ನು ಕ್ಯಾಬಿನೆಟ್‌ ಗಮನಕ್ಕೆ ತಂದು, ಕೆಲವೊಂದನ್ನು ತರದೇ ಮಾಡ್ತಿದ್ದಾರೆ. ಈ ಬಗ್ಗೆ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್​ ಪತ್ರ ಸಹ ಬರೆದಿದ್ದಾರೆ. ಮಂತ್ರಿ ಸ್ಥಾನ ಸಿಗದಿದ್ದರೆ‌‌ ಟೆಂಡರ್ ನೀಡುವ ಮೂಲಕ ಸಮಾಧಾನ ಮಾಡ್ತಿದ್ದಾರೆ. ಮುಂಚಿತವಾಗಿ ಹಣ‌ ತಲುಪಿಸುವವರಿಗೆ ಬಿಲ್ ಪಾವತಿ ಮಾಡ್ತಿದ್ದಾರೆ ಎಂದರು ಆರೋಪ ಮಾಡಿದರು.

ಸರ್ಕಾರದಲ್ಲಿ ಕೇವಲ ವಸೂಲಿ ಕೆಲಸ ನಡೆಯುತ್ತಿದೆ. ಕಮಿಷನ್ ಹೆಚ್ಚು ಕಡಿಮೆಯಾಗಿ ಅವರ ಶಾಸಕರೇ ಪತ್ರ‌ ಬರೆಯುತ್ತಿದ್ದಾರೆ. ಸರ್ಕಾರ, ಗುತ್ತಿಗೆದಾರರು, ಅಧಿಕಾರಿಗಳಿಗೆ ಎಚ್ಚರಿಕೆ ನೀಡುತ್ತೇನೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ.‌ ಆನಂತರ ಎಲ್ಲ ಟೆಂಡರ್ ರದ್ದು ಮಾಡುತ್ತೇವೆ. ಪ್ರತಿ ಜಿಲ್ಲಾ ವಾರು ಟೆಂಡರ್ ಹಂಚಿಕೆಗೆ ಜವಾಬ್ದಾರಿ ವಹಿಸಿದ್ದಾರೆ. ಕಮಿಷನ್​ಗೆ ಬೇಡಿಕೆ ಇಡುತ್ತಿದ್ದಾರೆ. ಲೂಟಿ ಹೊಡೆಯೋಕೆ ನಿಂತಿದ್ದಾರೆ. ಚುನಾವಣೆ ದಿನಾಂಕ ನಿಗದಿಯಾಗುವಷ್ಟರಲ್ಲಿ ಎಷ್ಟು ಕಬಳಿಸಬೇಕೋ ಅಷ್ಟು ಕಬಳಿಸುವ ಪ್ರಯತ್ನ ಮಾಡ್ತಿದ್ದಾರೆ. ಇದು ಇಲ್ಲಿಗೆ ಕೊನೆ ಆಗಬೇಕು, ಇಲ್ಲವಾದಲ್ಲಿ ನಾವು ಸುಮ್ಮನೇ ಬಿಡಲ್ಲ ಎಂದು ಡಿಕೆಶಿ ಆಕ್ರೋಶ ಹೊರಹಾಕಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಈ ಸರ್ಕಾರ ರಾಜ್ಯದ ಬೊಕ್ಕಸವನ್ನು ಸಿಕ್ಕಾಪಟ್ಟೆ ಲೂಟಿ ಹೊಡೆಯೋಕೆ ಶುರು ಮಾಡಿದೆ. ಇನ್ನೊಂದೇ ತಿಂಗಳು ಸರ್ಕಾರ ಇರೋದು. ಆ ನಂತರ ನಿಂತಿ ಸಂಹಿತೆ ಜಾರಿಗೆ ಬರುತ್ತದೆ. ಹೀಗಾಗಿ ಚುನಾವಣೆಗೆ ದುಡ್ಡು ಮಾಡಲು ಮತ್ತು ಅಸಮಾಧಾನವನ್ನು ತಣಿಸಸಲು ತರಾತುರಿಯಲ್ಲಿ ಎಲ್ಲಾ ನಿಗಮಗಳಲ್ಲಿ ಪ್ರಾಜೆಕ್ಟ್‌ ಅಪ್ರೂವ್ ಮಾಡ್ತಿದ್ದಾರೆ ಎಂದು ಆರೋಪ ಮಾಡಿದರು.

ಇದು ಜನರ ತೆರಿಗೆ ಹಣ. ಅದನ್ನು ರಕ್ಷಣೆ ಮಾಡೋದು ನಮ್ಮ ಹೊಣೆ. ಟೆಂಡರ್‌ ಮೊತ್ತ ಹೆಚ್ಚಿಗೆ ಮಾಡೋದು, ಕಮಿಷನ್ ಕೊಡುವ ಗುತ್ತಿಗೆದಾರರಿಗೆ ಟೆಂಡರ್ ಕೊಡುವುದು ಹಾಗೂ ಬಾಕಿ ಉಳಿದಿರುವ ಬಿಲ್ ಕ್ಲಿಯರ್​ಗಾಗಿಯೂ ಕಮಿಷನ್ ಬೇಡಿಕೆ ಇಡಲಾಗಿದೆ. ಮುಖ್ಯಮಂತ್ರಿಗಳ ಕಚೇರಿಯಿಂದಲೇ ಕಮಿಷನ್​ಗಾಗಿ ಟೆಂಡರ್ ಶುರುವಾಗಿದೆ ಎಂದು ಆರೋಪಿಸಿದ ಸಿದ್ದರಾಮಯ್ಯ ಅವರು, ಕೋರ್ಟ್​ಗೂ ಹೋಗ್ತೇವೆ ಮತ್ತು ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡ್ತೇವೆ ಎಂದು ಎಚ್ಚರಿಕೆಯನ್ನು ನೀಡಿದರು.

ನಾವು ಅಧಿಕಾರಕ್ಕೆ ಬಂದರೆ ತನಿಖೆ ಮಾಡಿಸಿ, ಭ್ರಷ್ಟಾಚಾರವನ್ನು ಬಯಲಿಗೆ ಎಳೆಯುತ್ತೇವೆ. ಚುನಾವಣೆ ಸಮಯದಲ್ಲಿ ಲೂಟಿ ಹೊಡೆಯುವ ಕೆಲಸ ಮಾಡ್ತಿದ್ದಾರೆ. ಇಂದು ವೋಟ್​ಗೆ 6 ಸಾವಿರ ಕೊಡುತ್ತೇವೆ ಎಂದು ಬಹಿರಂಗವಾಗಿ ಹೇಳ್ಕೊಂಡಿದ್ದಾರೆ. ನಿಮ್ಮ ಶಾಸಕರುಗಳೇ ಹೇಳಿದ್ದಾರೆ. ಇಷ್ಟರ ಮಟ್ಟಿಗೆ ರಾಜ್ಯ ಹಾಳು ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದರು.

ಮಾತೆತ್ತಿದ್ರೆ‌ ದಾಖಲೆ ಕೊಡಿ ಅಂತಾರೆ, ಇದು ದಾಖಲೆ ಆಲ್ಬಾ? ಈ ಸರ್ಕಾರಕ್ಕೆ ನಾಚಿಕೆ ಮಾನ ಮರ್ಯಾದೆ ಇದೆಯಾ? ಇಂಥಾ ಕೆಟ್ಟ ಭ್ರಷ್ಟ ಸರ್ಕಾರ ಇನ್ನೊಂದಿಲ್ಲ‌‌. ಸಿಎಂ ಕಚೇರಿಯಲ್ಲಿಯೇ ಎಲ್ಲವು ಶುರುವಾಗಿದ್ದು, ನೀವೊಂದಿಷ್ಟು ಇಟ್ಕೊಂಡು ನಮಗೂ ಒಂದಿಷ್ಟು ಕೊಡು‌ ಅತಾ ಕೇಳ್ತಾ ಇದಾರೆ ದೂರಿದರು.

ರಣದೀಪ್ ಸುರ್ಜೇವಾಲಾ ಮಾತನಾಡಿ, ಇದು 40% ಕಮಿಷನ್ ಮುಂದುವರಿದ ಭಾಗವಾಗಿದೆ. ನಮ್ಮ ಸರ್ಕಾರ ಬಂದ್ಮೇಲೆ ವಿಚಾರಣೆ ಮಾಡಿಸುತ್ತೇವೆ ಮತ್ತು ತನಿಖಾ ಸಂಸ್ಥೆ ರಚನೆ ಮಾಡುತ್ತೇವೆ. ಸಿಎಂ ಬಸವರಾಜ ಬೊಮ್ಮಾಯಿ ಜತೆ ಸಚಿವರು, ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಸಹ ಶಾಮೀಲಾಗಿದ್ದಾರೆ. ಎಲ್ಲರಿಗೂ ನಾವು ಎಚ್ಚರಿಕೆ ಕೊಡ್ತಾ ಇದೀವಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net