

ರಾಣೆಬೆನ್ನೂರ: ಬೆಳಗಾವಿಯಲ್ಲಿ ಕಾಂಗ್ರೆಸ್ನಿಂದ ಆಯೋಜಿಸಿದ್ದ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶಕ್ಕೆ ತೆರಳಿದ್ದ ಪಕ್ಷದ ಕಾರ್ಯಕರ್ತರೊಬ್ಬರು ಹೃದಯಾಘಾತದಿಂದ ಮೃತಪಟ್ಟ ಟನೆ ಮಂಗಳವಾರ ರಾತ್ರಿ ಬೆಳಗಾವಿಯಲ್ಲಿ ನಡೆದಿದೆ.
ತಾಲೂಕಿನ ನದಿಹರಳಹಳ್ಳಿಯ ನಿವಾಸಿ ಬಸಪ್ಪ ಕೆಂಚಪ್ಪ ಪಾಮೇನಹಳ್ಳಿ (75) ಮೃತ ವ್ಯಕ್ತಿ.
ಇವರು ಬೆಳಗಾವಿಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಸಮಾವೇಶಕ್ಕೆ ರಾಣೆಬೆನ್ನೂರಿನಿಂದ ತೆರಳಿದ್ದರು. ಸಮಾವೇಶ ನಡೆಯುತ್ತಿದ್ದ ಸಮಯದಲ್ಲಿ ಮಧ್ಯಾಹ್ನ 1.30ರ ಸುಮಾರಿಗೆ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ, ತಡರಾತ್ರಿ 12.30ಕ್ಕೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ.
5 ಲಕ್ಷ ರೂ. ಪರಿಹಾರ ಘೋಷಣೆ...
ಮೃತ ಬಸಪ್ಪ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿದ್ದು ಈ ವಿಷಯ ತಿಳಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ಚಂದ್ರಣ್ಣ ಬೇಡರ ತಿಳಿಸಿದ್ದಾರೆ.