

ಬೆಂಗಳೂರು: ಭ್ರಷ್ಟಾಚಾರ ಮುಕ್ತ ಆಡಳಿತ ಕೊಡುತ್ತೇವೆ ಎಂದು ಹೇಳಿ ವರ್ಗಾವಣೆ ದಂಧೆ, ನುಡಿದಂತೆ ನಡೆದಿದ್ದೇವೆ ಎನ್ನುತ್ತಾ ಗ್ಯಾರಂಟಿಗಳಿಗೆ ಹಲವು ನಿರ್ಬಂಧ ವಿಧಿಸಿದೆ ಎಂದು ಮಾಜಿ ಸಿಎಂ ಡಿ.ವಿ.ಸದಾನಂದಗೌಡ ವಾಗ್ದಾಳಿ ನಡೆಸಿದರು.
ಮಲ್ಲೇಶ್ವರದಲ್ಲಿ ಶನಿವಾರ ಆಯೋಜಿಸಿದ್ದ ಬಿಜೆಪಿ ‘ಉಪಾಹಾರ ಬೈಠಕ್’ನಲ್ಲಿ ಪಾಲ್ಗೊಂಡಿದ್ದ ಅವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಸಚಿವರ ಕಾರ್ಯವೈಖರಿ ಸ್ವಪಕ್ಷದ ಶಾಸಕರು ಬೇಸತ್ತು ಅಸಮಾಧಾನ ಹೊರಹಾಕಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೂರೇ ತಿಂಗಳಲ್ಲಿ ಆ ಪಕ್ಷದ ಕಪಟ ನಾಟಕ ಬಯಲಾಗಿದೆ ಎಂದರು.
ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನವಿಲ್ಲವೆನ್ನುತ್ತಿದೆ. ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ರೈತರು, ಬಡವರ ಯೋಜನೆಗಳನ್ನು ನಿಲ್ಲಿಸಿ, ಜನವಿರೋಧಿ ನೀತಿ ಅನಾವರಣಗೊಳಿಸಿದೆ. ನಿಜಾಂಶ ಮುಚ್ಚಿ ಹಾಕಲು ಬಿಜೆಪಿ ಶಾಸಕರು, ಮಾಜಿ ಶಾಸಕರು ಕಾಂಗ್ರೆಸ್‌ಗೆ ಸೇರಲಿದ್ದಾರೆ ಎಂಬ ವದಂತಿ ಹರಡಿದೆ ಎಂದು ಟೀಕಿಸಿದರು.
ಮಾಜಿ ಸಚಿವ ಎಸ್.ಟಿ.ಸೋಮಶೇಖರ್ ಪ್ರತಿನಿಧಿಸುತ್ತಿರುವ ಕ್ಷೇತ್ರದಲ್ಲಿ ಆಂತರಿಕ ಸಮಸ್ಯೆಯಿದೆ. ಅದನ್ನೆಲ್ಲ ಸರಿಪಡಿಸುವ ಕೆಲಸ ಮಾಡುತ್ತೇವೆ. ಬಿಜೆಪಿ ಬಿಟ್ಟು ಯಾರೊಬ್ಬರೂ ಹೋಗುವುದಿಲ್ಲ ಎಂದರು.
ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತು ಸಂಘಟನಾ ಹಂತದಲ್ಲಿ ಯಾವುದೇ ಚರ್ಚೆಗಳಾಗಿಲ್ಲ. ಐದು ರಾಜ್ಯಗಳ ವಿಧಾನಸಭೆ ಚುನಾವಣೆಗಳಿಗೆ ತಯಾರಿಯಲ್ಲಿ ಪಕ್ಷದ ವರಿಷ್ಠರು ತೊಡಗಿಕೊಂಡಿದ್ದಾರೆ ಎಂದು ಡಿ.ವಿ.ಸದಾನಂದಗೌಡ ಹೇಳಿದರು.
ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಮಾತನಾಡಿ ಸರ್ಕಾರದೊಳಗೆ ಅನೇಕ ಸಮಸ್ಯೆಗಳು ತಲೆದೋರಿದ್ದು, ಮೊದಲು ಅವುಗಳನ್ನು ಬಗೆಹರಿಸಿಕೊಳ್ಳಲಿ. ಮುಳುಗುವ ಹಡಗಿನಲ್ಲಿ ಯಾರೂ ಕೂಡ ಪ್ರಯಾಣಿಸಲು ಬಯಸುವುದಿಲ್ಲವೆಂದು ಕಾಂಗ್ರೆಸ್ ನಾಯಕರಿಗೆ ಛೇಡಿಸಿದರು.
ಬಿಜೆಪಿ ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ನೆ.ಲ.ನರೇಂದ್ರಬಾಬು ಈ ಬಾರಿ ಬಜೆಟ್‌ನಲ್ಲಿ ಹಿಂದುಳಿದ ವರ್ಗಗಳ ನಿರೀಕ್ಷೆಗೆ ತಕ್ಕಂತೆ ಅನುದಾನ ಮೀಸಲಿರಿಸಿಲ್ಲ. ಸಿಎಂ ಸಿದ್ದರಾಮಯ್ಯ ಸಮುದಾಯಗಳ ನಿರೀಕ್ಷೆ ಹುಸಿಗೊಳಿಸಿದ್ದಾರೆ ಎಂದು ಟೀಕಿಸಿದರು.