

ಬೆಂಗಳೂರು: ಚನ್ನಪಟ್ಟಣ, ಸಂಡೂರು ಮತ್ತು ಶಿಗ್ಗಾಂವಿ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಯನ್ನು ಆಡಳಿತ ಕಾಂಗ್ರೆಸ್ ಪಕ್ಷಕ್ಕೆ ಪ್ರತಿಷ್ಠೆಯ ವಿಷಯವಾಗಿದೆ. ಒಂದೂವರೆ ವರ್ಷದ ಆಡಳಿತ ವೈಖರಿಗೆ ಓರೆಗಲ್ಲಿಗೆ ಹಚ್ಚಿದೆ ಎಂದು ಪರಿಭಾವಿಸಿ ಮೂರೂ ಕ್ಷೇತ್ರಗಳನ್ನು ಗೆಲ್ಲಲು ಪಣ ತೊಟ್ಟಿದೆ.
ಅಧಿಕಾರದ ಬಲ, ಪ್ರಭಾವ ಕೈಯಲ್ಲಿಟ್ಟುಕೊಂಡು ಗೆಲ್ಲದಿದ್ದರೆ ತಪ್ಪು ಸಂದೇಶ ರವಾನೆಯಾಗಲಿದೆ. ಅಷ್ಟೇ ಅಲ್ಲ, ಆಡಳಿತದ ವಿರುದ್ಧ ಜನಮತ ಗಣನೆ ಎಂದು ಪ್ರತಿಪಕ್ಷಗಳಿಗೆ ಪ್ರತಿಪಾದಿಸಿ, ಸರ್ಕಾರದ ವರ್ಚಸ್ಸಿಗೆ ಕುಂದು ತರಲಿವೆ ಎಂಬ ಆತಂಕವೂ ಮುಂಚೂಣಿ ನಾಯಕರನ್ನು ಕಾಡಲಾರಂಭಿಸಿದೆ.
ಈ ಹಿನ್ನೆಲೆಯಲ್ಲಿ ಭಾನುವಾರ ವಾರದ ರಜೆ ದಿನವಾದರೂ ಸಿಎಂ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಸಚಿವ ಸಹೋದ್ಯೋಗಿಗಳ ಸಭೆ ಸೇರಿಸಿ, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಗಂಭೀರ ವಿಚಾರ ವಿನಿಮಯ ಮಾಡಿದ್ದಾರೆ.
ಉಪಚುನಾವಣೆ ನಡೆಯುತ್ತಿರುವ ಮೂರು ಕ್ಷೇತ್ರಗಳ ಪೈಕಿ ಸಂಡೂರನ್ನು ಪಕ್ಷದ ತೆಕ್ಕೆಯಲ್ಲಿ ಉಳಿಸಿಕೊಳ್ಳುವ ಜತೆಗೆ ಶಿಗ್ಗಾಂವಿ, ಚನ್ನಪಟ್ಟಣದಲ್ಲಿ ಗೆದ್ದು ಪಾರಮ್ಯ ಮೆರೆಯಬೇಕು ಎಂಬ ಸ್ಪಷ್ಟ ಸಂದೇಶವನ್ನು ಸಚಿವರಿಗೆ ರವಾನಿಸಿ, ಪ್ರತಿಯೊಬ್ಬರಿಗೂ ಜವಾಬ್ದಾರಿ ನಿಗದಿಪಡಿಸಿದ್ದಾರೆ.
- ಪ್ರತೀ ಚುನಾವಣೆ ಸಂದರ್ಭದಲ್ಲೂ ಬಿಜೆಪಿಯ ಪ್ರತಿಯೊಬ್ಬರೂ ಚಾಲೆಂಜಿಗೆ ಬಿದ್ದವರಂತೆ ಸುಳ್ಳುಗಳನ್ನು ಹೇಳುತ್ತಾರೆ. ಅವರ ಸುಳ್ಳುಗಳನ್ನು ಜನರೆದುರು ಬಯಲುಗೊಳಿಸಬೇಕು
- ಲೋಕಸಭೆ ಚುನಾವಣೆ ಮುಗಿದ ಮರುದಿನವೇ ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳುತ್ತವೆ ಎಂದು ಮೋದಿಯವರಿಂದ ಹಿಡಿದು ಸಿ.ಟಿ.ರವಿವರೆಗೂ ಪ್ರತಿಯೊಬ್ಬರೂ ರಾಶಿ ರಾಶಿ ಸುಳ್ಳು ಹೇಳಿದ್ದರು
- ಈ ಚುನವಣೆಯಲ್ಲೂ ಹೊಸ ಹೊಸ ಸುಳ್ಳುಗಳನ್ನು ಬೆಳಗ್ಗೆ, ಮಧ್ಯಾಹ್ನ, ಸಂಜೆ, ರಾತ್ರಿ ಹೇಳುತ್ತಲೇ ಇರುತ್ತಾರೆ. ಇವುಗಳನ್ನು ಸರಿಯಾಗಿ ಕೌಂಟರ್ ಮಾಡಬೇಕು
- ಉಪಚುನಾವಣೆ ಮುಗಿಯುವರೆಗೂ ಕೇಂದ್ರ ತನಿಖಾ ಸಂಸ್ಥೆಗಳ ದುರುಪಯೋಗಪಡಿಸಿಕೊಳ್ಳುವ ಪ್ರಮಾಣ ಇನ್ನೂ ಹೆಚ್ಚಲಿದೆ
- ಜಾತಿ ಸಮೀಕ್ಷೆ, ಒಳ ಮೀಸಲಾತಿ, ಪಂಚಮಸಾಲಿ ಸಮುದಾಯದ ಬೇಡಿಕೆಗಳ ಬಗ್ಗೆ ನಮ್ಮ ನಿಲುವು ಸ್ಪಷ್ಟವಾಗಿದೆ. ಆಯಾ ಸಮುದಾಯದ ಮುಖಂಡರು ಮತ್ತು ಜನಪ್ರತಿನಿಧಿಗಳ ಜೊತೆ ಸಭೆ ನಡೆಸಿ ನಮ್ಮ ಬೆಂಬಲ ಇರುವುದನ್ನು ಮನದಟ್ಟು ಮಾಡಿಸಿದ್ದೇವೆ
- ಆದರೂ ಬಿಜೆಪಿ ಸರಣಿ ಸುಳ್ಳುಗಳ ಮೂಲಕ ಭಯಾನಕ ಅಪಪ್ರಚಾರ ಮಾಡುತ್ತದೆ. ಸುಳ್ಳುಗಳ ಹೊರತಾಗಿ ಬಿಜೆಪಿಗೆ ಬೇರೆ ಬಂಡವಾಳ ಇಲ್ಲ
- ಮೂರೂ ಕ್ಷೇತ್ರಗಳ ಉಪಚುನಾವಣೆ ಬಹಳ ಮಹತ್ವದ್ದಾಗಿದ್ದು ಮೂರನ್ನೂ ಗೆಲ್ಲಬೇಕು. ಇದಕ್ಕಾಗಿ ಪ್ರತಿಯೊಬ್ಬರೂ ತಾವು ವಹಿಸಿಕೊಂಡ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು