

ನವದೆಹಲಿ: ಈಶಾನ್ಯ ದಿಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕನ್ಹಯ್ಯಾ ಕುಮಾರ್ ಅವರ ಮೇಲೆ ದಾಳಿ ನಡೆದಿದೆ. ರಾಷ್ಟ್ರ ರಾಜಧಾನಿಯಲ್ಲಿ ನಡೆದಿರುವ ಆಘಾತಕಾರಿ ಘಟನೆಯಲ್ಲಿ, ಲೋಕಸಭಾ ಚುನಾವಣೆ ಪ್ರಚಾರ ನಡೆಸುತ್ತಿದ್ದ ಕನ್ಹಯ್ಯಾ ಅವರ ಮೇಲೆ ಏಳರಿಂದ ಎಂಟು ಜನರು ಹಲ್ಲೆ ನಡೆಸಿದ್ದಾರೆ. ಅವರ ಮೇಲೆ ಕಪ್ಪು ಇಂಕ್ ಎರಚಿ ಅಮಾನವೀಯವಾಗಿ ವರ್ತಿಸಿದ್ದಾರೆ.
ಪೂರ್ವ ದಿಲ್ಲಿಯ ನ್ಯೂ ಉಸ್ಮಾನ್ಪುರ ಪ್ರದೇಶದಲ್ಲಿ ಶುಕ್ರವಾರ ಈ ಹಲ್ಲೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದಾಳಿಕೋರರ ಪೈಕಿ ಇಬ್ಬರು ಸಹ ವಿಡಿಯೋಗಳನ್ನು ಬಿಡುಗಡೆ ಮಾಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕನ್ಹಯ್ಯಾ ಅವರ ಮೇಲೆ ತಾವೇ ದಾಳಿ ನಡೆದಿರುವುದಾಗಿ ಪ್ರತಿಪಾದಿಸಿದ್ದಾರೆ. ಅವರು ದೇಶವನ್ನು ವಿಭಜಿಸುವ ಘೋಷಣೆಗಳನ್ನು ಕೂಗಿದ್ದು, ಭಾರತೀಯ ಸೇನೆಯ ವಿರುದ್ಧ ಮಾತನಾಡಿದ್ದಕ್ಕಾಗಿ ಈ ದಾಳಿ ನಡೆಸಿರುವುದಾಗಿ ಹೇಳಿಕೊಂಡಿದ್ದಾರೆ.
ಈ ಬಗ್ಗೆ ಬ್ರಹ್ಮಪುರಿಯ ಎಎಪಿ ಕೌನ್ಸಿಲರ್ ಛಾಯಾ ಗೌರವ್ ಶರ್ಮಾ ದೂರು ನೀಡಿದ್ದಾರೆ. ಕರ್ತಾರ್ ನಗರದಲ್ಲಿನ ಪಕ್ಷದ ಕಚೇರಿಯಿಂದ ತಾವು ಮತ್ತು ಕನ್ಹಯ್ಯಾ ಕುಮಾರ್ ಅವರು ಹೊರಗೆ ಹೋಗುತ್ತಿದ್ದಾಗ ಏಳರಿಂದ ಎಂಟು ಮಂದಿ ಬಂದು ಕನ್ಹಯ್ಯಾ ಅವರಿಗೆ ಹೂವಿನ ಹಾರ ಹಾಕಿದ್ದರು. ಬಳಿಕ ಅವರ ಮೇಲೆ ಕಪ್ಪು ಮಸಿ ಎರಚಿ, ಹಲ್ಲೆ ನಡೆಸಿದರು ಎಂದು ಆಪ್ ಕೌನ್ಸಿಲರ್ ತಿಳಿಸಿದ್ದಾರೆ. ಘಟನೆಯಲ್ಲಿ ನಾಲ್ವರು ಮಹಿಳೆಯರು ಸೇರಿ ಪತ್ರಕರ್ತೆಯೊಬ್ಬರು ಚರಂಡಿಗೆ ಬಿದ್ದು ಗಾಯಗೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಈ ನಡುವೆ ದಾಳಿಕೋರರ ವಿಡಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಂಡಿರುವ ದುಷ್ಕರ್ಮಿಗಳ ಪೈಕಿ ಇಬ್ಬರು ವ್ಯಕ್ತಿಗಳು ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದಾರೆ. ಕನ್ಹಯ್ಯಾ ಕುಮಾರ್ ಅವರು ದೇಶವನ್ನು ವಿಭಜಿಸುವ ಬಗ್ಗೆ, ಭಾರತೀಯ ಸೇನೆಯ ವಿರುದ್ಧ ಮಾತನಾಡುತ್ತಾರೆ. ಅವರಿಗೆ ಇಂದು ನಾವು ಚಿಕಿತ್ಸೆ ನೀಡಿದ್ದೇವೆ ಎಂದು ದುಷ್ಕರ್ಮಿಗಳು ಹೇಳಿಕೊಂಡಿದ್ದಾರೆ. ಈ ಕುರಿತು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು ತನಿಖೆ ಆರಂಭಿಸಿದ್ದಾರೆ.