

ಬಿಡದಿ: 2023ರ ವಿಧಾನಸಭಾ ಚುನಾವಣೆಯನ್ನು ಗಮದಲ್ಲಿರಿಸಿಕೊಂಡು ಬಿಡದಿ ಪುರಸಭೆ ಚುನಾವಣೆಯನ್ನು ಶಾಸಕ ಎ.ಮಂಜುನಾಥ್ ಮತ್ತು ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಪ್ರತಿಷ್ಠೆಯಾಗಿಸಿಕೊಂಡಿರುವುದರಿಂದ ಚುನಾವಣಾ ಕಣ ರಂಗೇರಿದೆ.
ಪುರಸಭೆಯ 23 ಸದಸ್ಯ ಸ್ಥಾನಗಳಿಗೆ ಡಿ.27ರಂದು ಚುನಾವಣೆ ನಡೆಯಲಿದ್ದು, ಜೆಡಿಎಸ್, ಕಾಂಗ್ರೆಸ್ ನಾಯಕರು ಮತ್ತು ಅಭ್ಯರ್ಥಿಗಳು ಮತದಾರರ ಮನವೊಲಿಸುವ ಕಸರತ್ತು ಆರಂಭಿಸಿದ್ದಾರೆ. ಗ್ರಾಮ ಪಂಚಾಯಿತಿಯಾಗಿದ್ದ ಬಿಡದಿ ಪುರಸಭೆಯಾಗಿ ರಚನೆಯಾದ ನಂತರ ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಎ.ಮಂಜುನಾಥ್ ಜೆಡಿಎಸ್ ಸೇರ್ಪಡೆಯಾಗಿ ಶಾಸಕರಾಗಿದ್ದಾರೆ.
ಎಚ್.ಸಿ. ಬಾಲಕೃಷ್ಣ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಪರಾಭವ ಗೊಂಡಿದ್ದರು. ವಿಧಾನಸಭೆ ಚುನಾವಣೆ ಸಮಯದಲ್ಲಿ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದ್ದ ಬಹುಪಾಲು ಪುರಸಭೆ ಸದಸ್ಯರು ಪಕ್ಷಾಂತರ ಕಾಯ್ದೆ ಅನ್ವಯವಾಗದಂತೆ ಜೆಡಿಎಸ್ ಜತೆ ಗುರುತಿಸಿಕೊಂಡರು. ಇದರ ಪರಿಣಾಮ ಜೆಡಿಎಸ್ 5 ವರ್ಷ ಬಿಡದಿ ಪುರಸಭೆಯಲ್ಲಿ ಅಧಿಕಾರ ನಡೆಸಿದೆ.
ಆರೋಪ -ಪ್ರತ್ಯಾರೋಪ: ಇದೀಗ ಪ್ರಚಾರ ಬಿರುಸಾಗಿದ್ದು, ಎ.ಮಂಜುನಾಥ್ ಅವರು ವಾರ್ಡ್‌ಗಳಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಹಾಗೂ ಶಾಸಕರಾದ ನಂತರ ಸರ್ಕಾರದಿಂದ ಅನುಷ್ಠಾನವಾದ ಕಾರ್ಯಕ್ರಮ, ಅನುದಾನಗಳನ್ನು ಮುಂದಿಟ್ಟುಕೊಂಡು ಮತದಾರರ ಮನ ಗೆಲ್ಲುವ ಕೆಲಸ ವಾಡುತ್ತಿದ್ದಾರೆ.
ಮತ್ತೊಂದೆಡೆ ವಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಹಾಲಿ ಶಾಸಕರು ಪಟ್ಟಣ ಅಭಿವೃದ್ಧಿ ಮಾಡುವಲ್ಲಿ ವಿಫಲರಾಗಿದ್ದು, ಕಾಂಗ್ರೆಸ್‌ಗೆ ಅವಕಾಶ ನೀಡಿದರೆ ಬಿಡದಿಯನ್ನು ಮಾದರಿ ಪಟ್ಟಣವಾಗಿ ರೂಪಿಸಲಾಗುವುದು ಎಂದು ಬಾಲಕೃಷ್ಣ ರಾಜಕೀಯ ದಾಳ ಉರುಳಿಸುತ್ತಿದ್ದಾರೆ. ಅಂತಿಮವಾಗಿ ಮತದಾರರ ಮನಸ್ಸು ಗೆಲ್ಲುವಲ್ಲಿ ಯಾರು ಸಫಲರಾಗುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
ಪಕ್ಷಾಂತರ: ಪುರಸಭೆ ಅಧಿಕಾರ ಹಿಡಿದು ಮುಂದಿನ ತಾಪಂ, ಜಿಪಂ ಹಾಗೂ ವಿಧಾನಸಭೆ ಚುನಾವಣೆ ಎದುರಿಸುವ ಚಿಂತನೆ ನಡುವೆಯೇ ತೆರೆಮರೆಯಲ್ಲಿ ಪಕ್ಷಾಂತರ ಪರ್ವ ಆರಂಭವಾಗಿವೆ. ಕಾಂಗ್ರೆಸ್‌ನಿದ ಜೆಡಿಎಸ್‌ಗೆ, ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಪ್ರಮುಖರನ್ನು ಸೆಳೆದು ಪ್ರತಿಸ್ಪರ್ಧೆ ನೀಡಲು ಜೆಡಿಎಸ್ ಮತ್ತು ಕಾಂಗ್ರೆಸ್ ಸಿದ್ಧತೆ ನಡೆಸಿವೆ.
ಬಿಜೆಪಿ ಜಾಣ ನಡೆ: ಬಿಜೆಪಿ ಕಳೆದ ಪುರಸಭೆ ಚುನಾವಣೆಯಲ್ಲಿ ಬೆರಳೆಣಿಕೆಯಷ್ಟು ವಾರ್ಡಿನಿಂದ ಸ್ಪರ್ಧೆ ಮಾಡಿ ಯಶಸ್ಸು ಗಳಿಸುವಲ್ಲಿ ವಿಫಲವಾಗಿತ್ತು. ಈ ಬಾರಿ 12 ವಾರ್ಡ್‌ಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಈ ಪೈಕಿ ಒಂದೆರಡು ವಾರ್ಡ್‌ಗಳಲ್ಲಿ ಖಾತೆ ತೆರೆಯುವ ವಿಶ್ವಾಸವನ್ನು ಕಾರ್ಯಕರ್ತರು ವ್ಯಕ್ತಪಡಿಸುತ್ತಿದ್ದಾರೆ. ಆದರೂ ಕಾರ್ಯಕರ್ತರಿಗೆ ಬೆಂಬಲವಾಗಿ ನಿಲ್ಲುವ ನಾಯಕನ ಕೊರತೆ ಬಗ್ಗೆ ಪಕ್ಷದಲ್ಲಿ ಚರ್ಚೆ ನಡೆಯುತ್ತಿದೆ.
ಒಟ್ಟಾರೆ ಬಿಡದಿ ಪುರಸಭೆ ಚುಕ್ಕಾಣಿಗಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದ್ದರೆ, ಖಾತೆ ತೆರೆಯಬೇಕೆಂಬ ಹಂಬಲದಲ್ಲಿ ಬಿಜೆಪಿ ಸ್ಪರ್ಧೆ ನಡೆಸಿದೆ. ಇವೆಲ್ಲದರ ನಡುವೆ ಪಕ್ಷಾಂತರ, ಆರೋಪ - ಪ್ರತ್ಯಾರೋಪದಂತಹ ಹಲವು ರಾಜಕೀಯ ವಿದ್ಯಮಾನಗಳಿಗೆ ಚುನಾವಣ ಕಣ ಸಾಕ್ಷಿಯಾಗಲಿದೆ.