

ಬೆಂಗಳೂರು: ಮೊದಲು ಅಮೂಲ್ ಜೊತೆ KMF ವಿಲೀನದ ಪ್ರಸ್ತಾಪ ಮಾಡಲಾಗಿತ್ತು. ಬಳಿಕ ನಂದಿನಿ ಮೊಸರಿನ ಪಾಕೆಟ್ ಮೇಲೆ ದಹಿ ಹೆಸರು ಉಲ್ಲೇಖವಾಗಿತ್ತು ಎನ್ನುತ್ತಾ ತೀವ್ರ ವಾಗ್ದಾಳಿ ನಡೆಸುತ್ತಾ ರಾಜ್ಯ ಕಾಂಗ್ರೆಸ್, ಚುನಾವಣಾ ಹೊಸ್ತಿಲಲ್ಲೇ ಬಿಜೆಪಿ ಮೇಲೆ ಗಂಭೀರ ವಾಗ್ದಾಳಿ ನಡೆಸಿದೆ.
ಗುಜರಾತ್ ಮೂಲದ ಅಮುಲ್ ಸಂಸ್ಥೆಯ ಹಾಲು ಹಾಗೂ ಹಾಲಿನ ಉತ್ಪನ್ನಗಳ ಮಾರಾಟಕ್ಕೆ ಕರ್ನಾಟಕದಲ್ಲಿ ವಿರೋಧ ವ್ಯಕ್ತವಾಗಿದೆ. ನಂದಿನಿ ಉಳಿಸಿ, ಅಮೂಲ್ ಓಡಿಸಿ ಅಭಿಯಾನ ಜೋರಾಗಿದ್ದು ಇದೀಗ ಕಾಂಗ್ರೆಸ್ ಕೂಡ ಅಖಾಡಕ್ಕೆ ಇಳಿದು ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದೆ.
ಈ ಬಗ್ಗೆ ಕಾಂಗ್ರೆಸ್ ಟ್ವೀಟ್ ಮಾಡಿದ್ದು ಯಾವಾಗೆಲ್ಲ ಏನೇನಾಯ್ತು ಎಂದು ಅದರಲ್ಲಿ ಬರೆದಿದ್ದಾರೆ. ಮೊದಲ ಟ್ವೀಟ್ನಲ್ಲಿ
* ಅಮುಲ್ + ನಂದಿನಿ ವಿಲೀನ ಎಂದರು
* ಮೊಸರಿಗೆ ಹಿಂದಿಯ 'ದಹಿ' ಇರಲೇಬೇಕು ಎಂದರು
* KMFಗೆ ಹಾಲು ನೀಡುವ ರೈತರಿಗೆ 5,6 ತಿಂಗಳಿಂದ ಸಹಾಯಧನ ನಿಲ್ಲಿಸಿದರು
* ಉದ್ದೇಶಪೂರ್ವಕವಾಗಿ 'ನಂದಿನಿ' ಉತ್ಪನ್ನಗಳ ಕೊರತೆ ಸೃಷ್ಟಿಸಿದರು
* ಈಗ ಅಮೂಲ್ನ್ನು ಕರ್ನಾಟಕಕ್ಕೆ ತಂದುಬಿಟ್ಟರು
* ನಂದಿನಿಯ ಕೆಚ್ಚಲು ಕೊಯ್ಯುತ್ತಿದೆ ಬಿಜೆಪಿ.
ಎಂದು ಬರೆಯಲಾಗಿದೆ.
ನಂತರ ಎರಡನೇ ಟ್ವೀಟ್ನಲ್ಲಿ ಬಿಜೆಪಿಯ ವಿರುದ್ಧ ಹರಿಹಾಯ್ದಿರುವ ಕಾಂಗ್ರೆಸ್ "ನಂದಿನಿ ಎಂಬ ಕನ್ನಡ ಕಾಮಧೇನುವಿನ ಕೆಚ್ಚಲು ಕೊಯ್ಯಲು ಹೊರಟಿದೆ ಬಿಜೆಪಿ" ಎಂದು ಆರೋಪಿಸಲಾಗಿದೆ.
ಅದಲ್ಲದೇ ಅಮುಲ್ + ನಂದಿನಿ ವಿಲೀನ ಎಂದ ಅಮಿತ್ ಶಾ ಮೊಸರಿಗೆ ದಹಿ ಹೆಸರು ಕಡ್ಡಾಯಗೊಳಿಸಿದರು ಎಂದೂ ಆರೋಪಿಸಿದ್ದು KMF ಹಾಲು ಪೂರೈಕೆಯಲ್ಲಿ ಉದ್ದೇಶಪೂರ್ವಕ ವ್ಯತ್ಯಯ ಸೃಷ್ಟಿ ಮಾಡಲಾಗಿದೆ ಎಂದೂ ಹೇಳಿದ್ದಾರೆ.
ಹೀಗೆ ಈಗ ಅಮೂಲ್ ಮೂಲಕ ನಂದಿನಿಯನ್ನು ನಂಬಿದ ರಾಜ್ಯದ ರೈತರನ್ನು #ರ್ನಾಟಕ ವಿರೋಧಿ ಬಿಜೆಪಿ ಸರ್ವನಾಶ ಮಾಡುತ್ತಿದೆ ಎಂದು ಆರೋಪಿಸಲಾಗಿದೆ.