

ಶಿವಮೊಗ್ಗ: ಅಕ್ಷರ ದಾಸೋಹ ಸಿಬ್ಬಂದಿಗೆ ಸರ್ಕಾರ ಇಡುಗಂಟು ನೀಡಲು ತೀರ್ಮಾನಿಸಿರುವ ಹಿನ್ನೆಲೆಯಲ್ಲಿ ಸೋಮವಾರ ಸಿಐಟಿಯು ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಅಕ್ಷರ ದಾಸೋಹ ನೌಕರರು ಸಂಭ್ರಮಾಚರಣೆ ನಡೆಸಿದರು.
ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಹನುಮಮ್ಮ ಮಾತನಾಡಿ, ನಮ್ಮ ಸಂಘಟಿತ ಹೋರಾಟಕ್ಕೆ ಜಯ ಸಿಕ್ಕಿದೆ. ಸೇವಾ ಹಿರಿತನದ ಆಧಾರದಲ್ಲಿ ನಿವೃತ್ತ ನೌಕರರಿಗೆ ಸೌಲಭ್ಯ ಕೊಡಬೇಕು ಎಂದು ಹಲವು ವರ್ಷಗಳಿಂದ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದೆವು. ನಮ್ಮ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ, ಅಡುಗೆ ಸಿಬ್ಬಂದಿ 15 ವರ್ಷ ಹಾಗೂ ಅದಕ್ಕೂ ಹೆಚ್ಚು ವರ್ಷ ಕಾರ್ಯ ನಿರ್ವಹಿಸಿ 60ನೇ ವರ್ಷದಲ್ಲಿ ನಿವೃತ್ತರಾಗುವವರಿಗೆ 40 ಸಾವಿರ ರೂ. ಹಾಗೂ 5 ವರ್ಷ ಮೇಲ್ಪಟ್ಟು 15 ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸಿ ನಿವೃತ್ತರಾದವರಿಗೆ 30 ಸಾವಿರ ಇಡುಗಂಟು ನೀಡಲು ಒಪ್ಪಿಗೆ ಸೂಚಿಸಿದೆ ಎಂದು ತಿಳಿಸಿದರು.
ನಮ್ಮ ಹೋರಾಟದ ಪ್ರತಿಫಲ ಮತ್ತು ಸರ್ಕಾರದ ತೀರ್ಮಾನದಿಂದ ರಾಜ್ಯದ 5 ಸಾವಿರ ಮಂದಿಗೆ ಅನುಕೂಲವಾಗಲಿದೆ. ನಮ್ಮ ಸಂಘಟನೆಯ ಕೆಲವು ಬೇಡಿಕೆಗಳು ಸರ್ಕಾರದ ಮುಂದಿವೆ. ಭವಿಷ್ಯದಲ್ಲಿ ಈಡೇರುವ ವಿಶ್ವಾಸವಿದೆ ಎಂದರು.
ಸಂಘಟನೆಯ ಪ್ರಮುಖರಾದ ಸುನಂದಾ, ಸುನೀತಾ, ಗೌರಮ್ಮ, ಪದ್ಮಾವತಿ, ಆರತಿ, ಬಿ.ಪಿ.ಸವಿತಾ, ಶಕುಂತಲಾ, ಕೆ.ಚಂದ್ರಮ್ಮ ಇತರರಿದ್ದರು.