ಜನರ ದಿಕ್ಕು ತಪ್ಪಿಸಲು ಪ್ರಧಾನಿಗೆ ಕಾಂಗ್ರೆಸ್ ಸರ್ಕಾರ ಪತ್ರ: ಮಾಳವಿಕಾ ಅವಿನಾಶ್ ಟೀಕೆ

Malavaika Avinash
Published on

ಬೆಂಗಳೂರು: ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ರಾಜ್ಯ ಸರ್ಕಾರ ತನ್ನ ಲೋಪ ಮರೆಮಾಚಲು, ಜನರ ದಿಕ್ಕು ತಪ್ಪಿಸಲು ಪ್ರಧಾನಮಂತ್ರಿಗೆ ಪತ್ರ ಬರೆದಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಮಾಳವಿಕಾ ಅವಿನಾಶ ಟೀಕಿಸಿದರು.

ಪಕ್ಷದ ರಾಜ್ಯ ಕಚೇರಿಯಲ್ಲಿ ಗುರುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇರೆ ದೇಶಕ್ಕೆ ಪ್ರಜ್ವಲ್ ಹೋಗಲು ಬಿಟ್ಟಿದ್ದೇ ಕಾಂಗ್ರೆಸ್ ಸರ್ಕಾರ. ಪ್ರಾಥಮಿಕ ಹಂತದ ಜವಾಬ್ದಾರಿ ಯಾರು ನಿರ್ವಹಿಸಬೇಕು ಎನ್ನುವುದು ಅವರಿಗೂ ಗೊತ್ತಿದೆ ಎಂದರು.

ಪ್ರಜ್ವಲ್ ಬೇರೆ ದೇಶಕ್ಕೆ ಹೋಗಲು ಅವಕಾಶ ಮಾಡಿಕೊಟ್ಟ ಕಾಂಗ್ರೆಸ್, ನಂತರ ಪ್ರಕರಣ ದಾಖಲಿಸಿಕೊಂಡು ಕೇಂದ್ರದತ್ತ ಬೊಟ್ಟು ಮಾಡುತ್ತಿದೆ. ಮುಂಚೆಯೇ ಮಾಹಿತಿಯಿದ್ದಾಗ ರಾಜ್ಯ ಸರ್ಕಾರದ ಗುಪ್ತಚರ ಇಲಾಖೆ ಏನು ಮಾಡುತ್ತಿತ್ತು ?. ನಿಗಾವಹಿಸುವುದು ಯಾರ ಜವಾಬ್ದಾರಿ ? ಎಂದು ಮಾಳವಿಕಾ ಅವಿನಾಶ್ ಕೇಳಿದರು.

ಈ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ಬಿಜೆಪಿ ಬೆಂಬಲಿತ ಜೆಡಿಎಸ್ ಅಭ್ಯರ್ಥಿ. ಆದರೆ ಅವರ ಸಂಸದರ ಅವಧಿ ಇನ್ನೂ ಮುಗಿದಿಲ್ಲ. ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ಸಂಸದರಾಗಿದ್ದು, ಬಿಜೆಪಿ ಮೇಲೆ ಗೂಬೆ ಕೂರಿಸಲು ಕಾಂಗ್ರೆಸ್ ವ್ಯರ್ಥ ಪ್ರಯತ್ನ ಮಾಡುತ್ತಿದೆ ಎಂದು ಕುಟುಕಿದರು.

ತನಿಖೆಯಲ್ಲಿ ನಂಬಿಕೆ

ಪ್ರಕರಣದ ತನಿಖೆ ಚಾಲ್ತಿಯಲ್ಲಿರುವಾಗ ಆರೋಪದ ಬಗ್ಗೆ ಯಾವುದೇ ಹೇಳಿಕೆ ನೀಡಲು ಬರುವುದಿಲ್ಲ. ಎಸ್‌ಐಟಿ ತನಿಖೆ ಕೈಗೆತ್ತಿಕೊಂಡಿದ್ದು, ಈ ತಂಡದ ಮೇಲೆ ನಂಬಿಕೆಯಿದೆ. ಸಿಬಿಐ ಅಥವಾ ಇನ್ನೊಂದು ತಂಡದಿಂದ ತನಿಖೆಗೆ ಒತ್ತಾಯಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು.

ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣದಲ್ಲಿ ತನಿಖೆ ಶುರುವಾಗಿದ್ದಿಲ್ಲ. ಆದರೆ ಗೃಹ ಸಚಿವರು ವೈಯಕ್ತಿಕವೆಂಬ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅನುಮಾನ ಉಂಟಾಗಿ ಸಿಬಿಐ ತನಿಖೆಗೆ ಒತ್ತಾಯಿಸಬೇಕಾಯಿತು ಎಂದು ಮಾಳವಿಕಾ ಅವಿನಾಶ್ ಸಮರ್ಥಿಸಿಕೊಂಡರು.

ಅಪರಾಧ, ಅಮಾನವೀಯ

ಲೈಂಗಿಕ ದೌರ್ಜನ್ಯಕ್ಕೆ ಸೇರಿದ್ದೆನ್ನಲಾದ ವಿಡಿಯೋ ತುಣುಕು, ಪೆನ್‌ಡ್ರೈವ್‌ಗಳನ್ನು ಯಥಾವತ್ ಹರಿಬಿಟ್ಟಿರುವುದು ತೀರಾ ನೋವು, ಬೇಸರದ ಸಂಗತಿ. ಕಾನೂನು ಪ್ರಕಾರ ಅಕ್ಷಮ್ಯ ಅಪರಾಧವಾಗಿದೆ ಎಂದು ದೂರಿದರು.

ಹಂಚಿಕೆಯಾದ ವಿಡಿಯೋ ತುಣುಕಿನಲ್ಲಿ ಭಾವಚಿತ್ರ, ಹೆಸರು ಬಹಿರಂಗಪಡಿಸಲಾಗಿದೆ. ಆ ಹೆಣ್ಣುಮಕ್ಕಳ ಭವಿಷ್ಯದ ಜೀವನ, ಕುಟುಂಬದವರ ಗತಿ ಏನು ?. ಯಾವುದೇ ಕಾರಣಕ್ಕೂ ವಿವರ ಬಯಲು ಮಾಡುವಂತಿಲ್ಲವೆಂಬ ಕಠಿಣ ಕಾನೂನಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net