ಹಿಂದು ಮಹಿಳೆಯರಿಗೆ ಅವಮಾನಿಸಿದ ಕಾಂಗ್ರೆಸ್ ಸರ್ಕಾರ: ಎಂಎಲ್‌ಸಿ ಭಾರತಿಶೆಟ್ಟಿ ಆಕ್ರೋಶ

Bharati Shetty
Published on

ಬೆಂಗಳೂರು: ಒಂದೆಡೆ ಮಹಿಳೆಯರ ತಾಳಿಸರ ತೆಗೆಯಿಸಿ, ಮತ್ತೊಂದೆಡೆ ಹಿಜಾಬ್ ಧರಿಸಿ ಕೆಪಿಎಸ್‌ಸಿ ಪರೀಕ್ಷೆ ಬರೆಯಲು ಅವಕಾಶ ಕೊಟ್ಟಿದ್ದಾರೆ. ಹಿಂದು ಮಹಿಳಾ ವಿರೋಧಿ ನಿಲುವನ್ನು ಕಾಂಗ್ರೆಸ್ ತಳೆದಿದೆ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯೆ ಭಾರತಿಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.

ಪಕ್ಷದ ರಾಜ್ಯ ಕಚೇರಿಯಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾದಗಿರಿ ಜಿಲ್ಲೆಯ ಕೆಇಎ ಪರೀಕ್ಷಾ ಕೇಂದ್ರವೊಂದರಲ್ಲಿ ಬ್ಲೂಟೂತ್ ಬಳಕೆ ಪ್ರಕರಣ ನೆಪ ಮಾಡಿಕೊಂಡು ಕಲಬುರಗಿ ಜಿಲ್ಲೆಯ ಕೆಪಿಎಸ್‌ಸಿ ಪರೀಕ್ಷಾ ಕೇಂದ್ರದಲ್ಲಿ ಮಹಿಳೆಯರಿಗೆ ಈ ರೀತಿ ಅವಮಾನಿಸಲಾಗಿದೆ ಎಂದು ಹೇಳಿದರು.

ಹಿಜಾಬ್ ಧರಿಸಿ ಬಂದವರು ಮೋಸ ಮಾಡಲು ಸಾಧ್ಯವಿಲ್ಲ ಎನ್ನುವುದಾದರೆ ತಾಳಿಸರ, ಮೂಗುತಿ, ಕಾಲುಂಗರ ಧರಿಸಿದವರು ಮೋಸ ಮಾಡುತ್ತಾರೆ ಎಂದು ಅರ್ಥವೆ ?. ವಿಶ್ವದ ಯಾವುದೇ ವಿಮಾನ ನಿಲ್ದಾಣಗಳಲ್ಲಿ ಕಂಡಿರದ ಈ ಕ್ರಮಕ್ಕೆ ಅಸಹ್ಯ ಪಡಬೇಕೋ ಬೇಸರಿಸಿಕೊಳ್ಳಬೇಕೋ ಗೊತ್ತಾಗುತ್ತಿಲ್ಲ ಎಂದು ಸಿಡಿಮಿಡಿಗೊಂಡರು.

ಹೋರಾಟಕ್ಕೆ ತೀರ್ಮಾನ

ಪ್ರತಿಯೊಂದರಲ್ಲೂ ಓಲೈಕೆ, ಮತಬ್ಯಾಂಕ್ ರಾಜಕಾರಣವನ್ನು ಮಾಡುತ್ತಿದೆ. ಹಿಂದು ಮಹಿಳೆಯರ ಪಾವಿತ್ರ್ಯ, ಭಾವನೆಗಳ ವಿಚಾರದಲ್ಲೂ ಚೆಲ್ಲಾಟವಾಡಿದೆ. ಮಹಿಳೆಯರ ಬಗ್ಗೆ ಈ ಹಿಂದೆ ಲಘುವಾದ ಹೇಳಿಕೆ ನೀಡಿದ ಮಹಾನ್ ನಾಯಕ ಪ್ರಿಯಾಂಕ್ ಖರ್ಗೆ ತವರು ಜಿಲ್ಲೆಯಲ್ಲಿ ಇಂತಹ ಕೃತ್ಯ ನಡೆದಿದೆ ಎಂದು ಕಿಡಿಕಾರಿದರು.

ಮಹಿಳೆಯರಿಗೆ ತೀವ್ರ ನೋವು ಕೊಟ್ಟಿರುವ ಕಾಂಗ್ರೆಸ್ ಸರ್ಕಾರದ ಧೋರಣೆ ಖಂಡಿಸಿ ಮಹಿಳಾ ಮೋರ್ಚಾದಿಂದ ಹೋರಾಟ ಹಮ್ಮಿಕೊಳ್ಳಲು ತೀರ್ಮಾನಿಸಿದ್ದೇವೆ ಎಂದು ಭಾರತಿಶೆಟ್ಟಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net