ಅನ್ನದಾತರ ಮೇಲೆ ಕಲ್ಲು ಎಳೆದ ಸರ್ಕಾರ: ಅಶೋಕ್ ಆಕ್ರೋಶ

IMG-20241104-WA0018
Published on

ಬೆಂಗಳೂರು: ವಕ್ಫ್ ಆಸ್ತಿ ಎಂದು ನೋಟಿಸ್ ಕೊಟ್ಟು ಅನ್ನದಾತರ ಮೇಲೆ ರಾಜ್ಯ ಸರ್ಕಾರ ಕಲ್ಲು ಎಳೆದಿದೆ. ವಕ್ಫ್ ಬೋರ್ಡ್ ಹೆಸರಿನಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ರೈತರ ಜಮೀನು ಕಬಳಿಸಲು ಹುನ್ನಾರ ಹೂಡಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ‌ ವ್ಯಕ್ತಪಡಿಸಿದರು‌.

ಕೆ.ಆರ್.ಪುರ ಬಿಬಿಎಂಪಿ ಕಚೇರಿ ಎದುರು ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆ ನೇತೃತ್ವವಹಿಸಿ ಮಾತನಾಡಿದ ಅವರು, ಲವ್ ಜಿಹಾದ್ ಮೂಲಕ ಹಿಂದು ಹೆಣ್ಣುಮಕ್ಕಳನ್ನು ಮತಾಂತರ ಮಾಡಲಾಗುತ್ತಿತ್ತು. ಇದೀಗ ಲ್ಯಾಂಡ್ ಜಿಹಾದ್ ಮುಖೇನ ರೈತರ ಜಮೀನು ಪರಿವರ್ತಿಸಲು ಹೊರಟಿದ್ದು, ಕಾಂಗ್ರೆಸ್ ಸರ್ಕಾರ ಕುಮ್ಮಕ್ಕು ನೀಡುತ್ತಿದೆ ಎಂದು ಕಿಡಿಕಾರಿದರು.

ವಕ್ಫ್ ಬೋರ್ಡ್ ಈಗ ಸಾಬರ ಬೋರ್ಡ್ ಆಗಿಬಿಟ್ಟಿದೆ. ಮಹ್ಮದ್ ಘೋರಿ, ಆದಿಲ್ ಶಾಹಿ ಬೋರ್ಡ್ ಆಗಿದ್ದು, ವೋಟ್ ಬ್ಯಾಂಕ್ ಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಜವನ್ನೇ ಹಾಳು ಮಾಡಲು ಹೊರಟಿದ್ದಾರೆ ಎಂದು ಆರ್‌.ಅಶೋಕ್ ಚಾಟಿ ಬೀಸಿದರು‌.

ಆರಾಮಗಿರುವ ತಾಣ

ಮತಾಂಧರು, ಭಯೋತ್ಪಾದಕರು ಹಾಗೂ ಸಮಾಜಘಾತುಕ ಶಕ್ತಿಗಳಿಗೆ ಕರ್ನಾಟಕ ಆರಾಮವಾಗಿರುವ ತಾಣವಾಗಿ ಮಾರ್ಪಟ್ಟಿದೆ. ಮಗುವಿನಂತೆ ನೆಮ್ಮದಿಯಿಂದ ನಿದ್ದೆ ಮಾಡಬಹುದು ಬನ್ನಿ ಎಂದು ಸಿಎಂ ಸಿದ್ದರಾಮಯ್ಯ ಕೈಬೀಸಿ ಕರೆಯುತ್ತಿದ್ದಾರೆ. ಮುಡಾ ಅಕ್ರಮ ಹೊರ ಬಿದ್ದ ನಂತರ ಹಣೆಗೆ ಬೊಟ್ಟು ಇಡಲಾರಂಭಿಸಿದ್ದು, ಮತ್ತೆ ಯಾವಾಗ ಮಸೀದಿಗೆ ಹೋಗಿ ಟೋಪಿ ಹಾಕಿಕೊಳ್ಳುತ್ತಾರೋ ಗೊತ್ತಿಲ್ಲ ಎಂದು ಛೇಡಿಸಿದರು‌.

ರೈತರಿಗೆ ನೀಡಿದ ವಾಪಸ್ ಪಡೆದರಷ್ಟು ಸಾಲದು. ಇದಕ್ಕೆ ಕಾರಣವಾಗಿರುವ 1974ರ ಗೆಜೆಟ್ ಅಧಿಸೂಚನೆಯನ್ನೂ ರದ್ದುಪಡಿಸಬೇಕು. ರೈತರ ಜಮೀನಿ‌ನ ಜತೆಗೆ ಮಠಗಳು, ಶಾಲೆ, ಐತಿಹಾಸಿಕ ಸ್ಮಾರಕಗಳನ್ನೂ ವಕ್ಫ್ ಎಂದು ತಿದ್ದಿರುವ ಪಹಣಿ‌ಪತ್ರ ರದ್ದುಪಡಿಸಬೇಕು. ತುಘಲಕ್ ರೀತಿಯಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುತ್ತಿದೆ ಎಂದು ಕಿಡಿಕಾರಿದರು.

ಕಾಂಗ್ರೆಸ್, ಸಚಿವ ಜಮೀರ್ ಅಹ್ಮದ್ ಖಾನ್ ಸಂಚು ಫಲಿಸಲು ಬಿಡುವುದಿಲ್ಲ. ಬಿಜೆಪಿ ಮೇಲೆ ಗೂಬೆ ಕೂರಿಸಿ ದಾರಿ ತಪ್ಪಿಸುವ ಪ್ರಯತ್ನವೆಂಬುದು ಜನರಿಗೆ ಚೆನ್ನಾಗಿ ಗೊತ್ತಾಗಿದೆ. ನೊಂದವರ ಪರವಾಗಿ ಪ್ರತಿಪಕ್ಷದ ಹೊಣೆಗಾರಿಕೆ ಬಿಜೆಪಿ ನಿಭಾಯಿಸುತ್ತಿದೆ. ಗೆಜೆಟ್ ನಲ್ಲಿ ಪ್ರಕಟಿತ ಅಧಿಸೂಚನೆ ರದ್ದು ಮಾಡುವ ತನಕ ಹೋರಾಟ ಮುಂದುವರಿಯಲಿದ್ದು, ನ.7ರಂದು ಶ್ರೀರಂಗಪಟ್ಟಣದಲ್ಲಿ ಚಳವಳಿ ನಡೆಸಲಿದ್ದೇವೆ ಎಂದು ಆರ್.ಅಶೋಕ್ ತಿಳಿಸಿದರು.

ಪ್ರತಿಭಟನೆಯಲ್ಲಿ ಶಾಸಕ ಬೈರತಿ ಬಸವರಾಜ, ಪಕ್ಷದ ಬೆಂಗಳೂರು ಕೇಂದ್ರ ಜಿಲ್ಲಾ ಅಧ್ಯಕ್ಷ ಸಪ್ತಗಿರಿಗೌಡ, ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿ ಪ್ರತಿಭಟನಾ ಫಲಕ ಪ್ರದರ್ಶಿಸುವ ಜತೆಗೆ ಸರ್ಕಾರದ ವಿರುದ್ಧ ಧಿಕ್ಕಾರದ‌ ಘೋಷಣೆಗಳನ್ನು ಮೊಳಗಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net