

ಬೆಂಗಳೂರು: ಕಾವೇರಿ ವ್ಯಾಜ್ಯ ನಿರ್ವಹಣೆಯಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ಜನರಿಗೆ ಮನವರಿಕೆ ಮಾಡಿಕೊಡಲು ಪ್ರತಿಪಕ್ಷ ಪಣತೊಟ್ಟಿದೆ. ತಮಿಳುನಾಡಿಗೆ ಕಾವೇರಿ ನೀರು ಪೂರೈಕೆ ನಿಲ್ಲಿಸಲು ಒತ್ತಾಯಿಸಿ ವಿವಿಧ ಸ್ತರದ ಹೋರಾಟವನ್ನು ಮುಂದುವರಿಸಿದೆ.
ಪಕ್ಷದ ಏಳು ಮೋರ್ಚಾಗಳು ಸೇರಿಕೊಂಡು ಬೆಂಗಳೂರಿನ ‘ಕಾವೇರಿ ಭವನಕ್ಕೆ ಸೋಮವಾರ ಮುತ್ತಿಗೆ ಹಾಕಲಿವೆ. ಮುಂದಿನ ಹಂತದಲ್ಲಿ ನಗರದ ಮೇಲ್ಸೇತುವೆಗಳ ಸಂಚಾರ ಬಂದ್, ರೈತ ಮೋರ್ಚಾ ನೇತೃತ್ವದಲ್ಲಿ ಘೇರಾವ್ ಚಳವಳಿ ನಡೆಸಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಕಾವೇರಿ ಕಾನೂನು ಹೋರಾಟದಲ್ಲಿ ವಿಲವಾಗಿದೆ. ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಬದಲಿಗೆ ಡಿಎಂಕೆಯನ್ನು ತೃಪ್ತಿಪಡಿಸುವುದಕ್ಕಾಗಿ ರಾಜ್ಯದ ಹಿತ ಕಡೆಗಣಿಸಿದೆ ಆರೋಪವನ್ನು ಮತ್ತೆ ಮತ್ತೆ ಬಿಂಬಿಸಲು ಉತ್ಸುಕವಾಗಿದೆ.
ನೀರಿಲ್ಲದೆ ನಾಶವಾದ ಬೆಳೆಗಳಿಗೆ ಎಕರೆಗೆ ತಲಾ 25 ಸಾವಿರ ರೂ ಪರಿಹಾರ ವಿತರಣೆ, ಕುಡಿಯುವ ನೀರಿನ ಸಂಭಾವ್ಯ ಕೊರತೆ ನಿವಾರಿಸಲು ಪರ್ಯಾಯ ವ್ಯವಸ್ಥೆ ಮಾಡಬೇಕು ಎಂಬ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ನಿರಂತರ ಹೋರಾಟಕ್ಕೆ ನಿರ್ಧರಿಸಿದೆ.
ರಾಜ್ಯದ 28 ಲೋಕಸಭೆ ಕ್ಷೇತ್ರಗಳು, ಬೆಂಗಳೂರಿನ ಎಲ್ಲ ವಾರ್ಡ್‌ಗಳಲ್ಲಿ ಆಂದೋಲನ, ಕಾವೇರಿ ಜಲಾನಯನ ಪ್ರದೇಶದ ಜಿಲ್ಲೆಗಳಲ್ಲಿ ವಿವಿಧ ಹಂತದ ಹೋರಾಟ ಹಮ್ಮಿಕೊಳ್ಳಲಿದೆ.
ಕಾವೇರಿ ನ್ಯಾಯಕ್ಕಾಗಿ ವಿವಿಧ ಸಂಘಟನೆಗಳ ‘ಬೆಂಗಳೂರು ಬಂದ್’ ಚಳವಳಿಗೆ ಬೆಂಬಲಿಸಲು ತೀರ್ಮಾನಿಸಿ, ರಾಜ್ಯದ ಹಿತರಕ್ಷಣೆಯಲ್ಲಿ ಬಿಜೆಪಿ ಸದಾ ಮುಂದೆ ಎಂಬ ಸಂದೇಶ ರವಾನೆಗೆ ಒತ್ತು ನೀಡಿದೆ.
ಕಾವೇರಿ, ಮೇಕೆದಾಟು ವಿಚಾರವಾಗಿ ಪ್ರತಿಪಕ್ಷದಲ್ಲಿದ್ದಾಗ ಪಾದಯಾತ್ರೆ ನಡೆಸಿದ್ದ ಡಿ.ಕೆ.ಶಿವಕುಮಾರ್, ಆಗಿನ ಬಿಜೆಪಿ ಸರ್ಕಾರದ ವಿರುದ್ಧ ದೊಡ್ಡ ಧ್ವನಿಯಲ್ಲಿ ಗುಡುಗಿದ್ದರು. ಅಧಿಕಾರದ ಗದ್ದುಗೆ ಏರಿದ ತಕ್ಷಣವೇ ಧ್ವನಿ ಬದಲಾಯಿಸಿದ್ದಾರೆ. ಕಾವೇರಿ ನ್ಯಾಯಕ್ಕಾಗಿ ಪ್ರತಿಭಟನೆ ನಡೆಸುತ್ತಿರುವ ರಾಜಕೀಯ ಪಕ್ಷಗಳು, ಸಂಘಟನೆಗಳ ವಿರುದ್ಧವೇ ಹರಿಹಾಯುತ್ತಿದ್ದಾರೆ.
ಈ ವಿಷಯದಲ್ಲಿ ಡಿ.ಕೆ.ಶಿವಕುಮಾರ್ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಮೇಕೆದಾಟು ಯೋಜನೆಗೆ ಯಾರದೇ ಅನುಮತಿ ಬೇಕಿಲ್ಲ ಎಂದವರು ಈಗ ರಾಗ ಬದಲಾಯಿಸಿದ್ದೇಕೆ ? ಉತ್ತರಿಸಲು ಆಗ್ರಹಿಸಿ ಮಹಿಳಾ ಮೋರ್ಚಾದಿಂದ ಪತ್ರ ಚಳವಳಿ ನಡೆಯಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ.