ಭವಿಷ್ಯವಿಲ್ಲದ ಕಾಂಗ್ರೆಸ್‌ನಿಂದ ಬ್ಲ್ಯಾಕ್ ಮೇಲ್ ಪ್ರಯತ್ನ: ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ವಾಗ್ದಾಳಿ

AshwathNarayan
Published on

ಬೆಂಗಳೂರು: ಲೋಕಸಭೆ ಚುನಾವಣೆ ಭೀತಿಯಲ್ಲಿರುವ ಕಾಂಗ್ರೆಸ್ ಬ್ಲ್ಯಾಕ್‌ಮೇಲ್ ಮಾಡಿ ಬೇರೆ ಪಕ್ಷಗಳವರನ್ನು ಸೆಳೆಯುವ ತಂತ್ರ ಹೂಡಿದ್ದು, ಇಂತಹ ತಂತ್ರಗಳು ಲಿಸುವುದಿಲ್ಲ ಎಂದು ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ವಾಗ್ದಾಳಿ ಮಾಡಿದರು.

ಯಶವಂತಪುರದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರಿಗೆ ಭಾನುವಾರ ಪ್ರತಿಕ್ರಿಯಿಸಿದ ಅವರು, ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡಿ ಗ್ಯಾರಂಟಿಗಳನ್ನು ನೀಡಿದ ಅಧಿಕಾರಕ್ಕೆ ಬಂದಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿದ್ದು ಹೇಗೆಂದು ಗೊತ್ತಿರುವ ಕಾರಣ ಲೋಕಸಭೆ ಚುನಾವಣೆ ಎದುರಿಸಲು ಭಯಬಿದ್ದಿದೆ.

ಪಕ್ಷದ ದೌರ್ಬಲ್ಯವನ್ನು ಮುಚ್ಚಿಕೊಳ್ಳಲು ಬ್ಲ್ಯಾಕ್‌ಮೇಲ್‌ಗೆ ಮುಂದಾಗಿದ್ದಾರೆ. ಈ ಪ್ರಯತ್ನಗಳಿಗೆ ಯಾರೂ ಸೊಪ್ಪು ಹಾಕುವುದಿಲ್ಲ. ಕಾಂಗ್ರೆಸ್‌ಗೆ ಭವಿಷ್ಯವಿಲ್ಲವೆಂದು ಗೊತ್ತಿರುವ ಯಾರೂ ಕೂಡ ಆ ಪಕ್ಷಕ್ಕೆ ಹೋಗುವ ದುಃಸಾಹಸ ಮಾಡುವುದಿಲ್ಲ ಎಂದು ಡಾ..ಸಿ.ಎನ್.ಅಶ್ವತ್ಥ ನಾರಾಯಣ ಕುಟುಕಿದರು.

ಪಕ್ಷ ರಾಜಕಾರಣ ಬೇರೆ, ವೈಯಕ್ತಿಕ ಸ್ನೇಹ ಬೇರೆ. ರಾಜಕೀಯ ಕ್ಷೇತ್ರದಲ್ಲಿ ಒಬ್ಬರಿಗೊಬ್ಬರು ಪರಿಚಯ, ಗೆಳೆತನ ಇರುವುದು ಸಹಜ. ಆಡಳಿತ, ಪ್ರತಿಪಕ್ಷದವರು ಪರಸ್ಪರ ಭೇಟಿ, ಚರ್ಚೆ ಮಾಡಬೇಕಾಗುತ್ತದೆ. ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಮಾಜಿ ಸಚಿವರಾದ ಬಿ.ಸಿ.ಪಾಟೀಲ್ ಹಾಗೂ ರಾಜೂಗೌಡ ಭೇಟಿ ಮಾಡಿರುವುದಕ್ಕೆ ಬೇರೆ ಅರ್ಥ ಕಲ್ಪಿಸಬೇಕಾಗಿಲ್ಲ ಎಂದು ತಳ್ಳಿಹಾಕಿದರು.

ನಾಳೆಯೇ ಚುನಾವಣೆ ಬರದು

‘ಒಂದು ದೇಶ, ಒಂದು ಚುನಾವಣೆ ನಾಳೆಯೇ ಬಂದು ಬಿಡುತ್ತದೆಂದಲ್ಲ. ಕೇಂದ್ರ ಸರ್ಕಾರದ ಎಲ್ಲ ಕ್ರಮ ವಿರೋಧಿಸುವುದು, ಟೀಕಿಸುವುದಷ್ಟೇ ಪ್ರತಿಪಕ್ಷಗಳ ಕೆಲಸವೆಂದು ಕಾಂಗ್ರೆಸ್ ತಿಳಿದುಬಿಟ್ಟಿದೆ.

ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಿದೆ. ಒಂದು ದೇಶ, ಒಂದು ಚುನಾವಣೆ ಬಗ್ಗೆ ವಿಸ್ತೃತ ಚರ್ಚೆ, ಅಭಿಪ್ರಾಯ ಸಂಗ್ರಹಿಸಲು ಬಯಸಿ ಸರ್ಕಾರ ಈ ಸಮಿತಿ ರಚಿಸಿದೆ.

ಕಾಂಗ್ರೆಸ್ ಮತ್ತದರ ಮಿತ್ರಪಕ್ಷಗಳ ಒಕ್ಕೂಟ ವಿರೋಧಿಸಿರುವುದು ಸರಿಯಲ್ಲ. ವಿಚಾರ ವಿನಿಮಯ, ಅಭಿಪ್ರಾಯ ಸಂಗ್ರಹದಲ್ಲಿ ಪಾಲ್ಗೊಳ್ಳಬೇಕು. ಪ್ರತಿಯೊಂದರಲ್ಲೂ ರಾಜಕಾರಣ ಮಾಡಲು ಹೊರಟಿದೆ ಎಂದು ಡಾ.ಸಿ.ಎನ್.ಅಶ್ವತ್ಥ ನಾರಾಯಣ ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net