ಕಾಂಗ್ರೆಸ್ ನ ಕಲೆಕ್ಷನ್ ವಂಶಾವಳಿ ಬಿಡುಗಡೆ ಮಾಡಿದ ಬಿಜೆಪಿ

IMG-20231020-WA0011
Published on

ಬೆಂಗಳೂರು: ಎಟಿಎಂ ಸರ್ಕಾರದ ಭ್ರಷ್ಟಾಚಾರದ ದರ್ಬಾರ್ ಗೆ ಅಂಕೆಯಿಲ್ಲದಂತಾಗಿದೆ. ಖಜಾನೆ ಲೂಟಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಧ್ಯೆ ಪೈಪೋಟಿ ಏರ್ಪಟ್ಟಿದೆ ಎಂದು ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಆರೋಪಿಸಿ, ಕಾಂಗ್ರೆಸ್ ನ ಕಲೆಕ್ಷನ್ ವಂಶಾವಳಿಯನ್ನು ಶುಕ್ರವಾರ ಬಿಡುಗಡೆ ಮಾಡಿದರು.

ಪಕ್ಷದ ರಾಜ್ಯ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚರಾಜ್ಯಗಳ ಚುನಾವಣೆ ವೆಚ್ಚದ ಜವಾಬ್ದಾರಿ ಹೊತ್ತಿರುವ ರಾಹುಲ್ ಗಾಂಧಿಗೆ ಈ ಹಣ ಸಂದಾಯಕ್ಕೆ ವ್ಯವಸ್ಥಿತವಾದ ಕಾರ್ಯಜಾಲ ಹೆಣೆದುಕೊಂಡಿದ್ದಾರೆ ಎಂದರು.

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಲೆಕ್ಷನ್ ಹಣವು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮುಖೇನ ರಾಹುಲ್ ಗಾಂಧಿಗೆ ತಲುಪುತ್ತದೆ. ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸಂಗ್ರಹಿಸಿದ ಹಣ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮೂಲಕ ರಾಹುಲ್ ಗಾಂಧಿಗೆ ತಲುಪುತ್ತದೆ ಎಂದು ಹೇಳಿದರು.

ಸಿದ್ದರಾಮಯ ತಂಡದಲ್ಲಿ ಅವರ ಪುತ್ರ ಯತೀಂದ್ರ, ನಗರಾಭಿವೃದ್ಧಿ ಸಚಿವ ಬೈರತಿ  ಸುರೇಶ್, ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ, ಇನ್ನೂ 3-4 ಜನರಿದ್ದರೆ, ಡಿ.ಕೆ.ಶಿವಕುಮಾರ್ ತಂಡದಲ್ಲಿ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ, ಪ್ರದೀಪ್ ಇನ್ನೂ ನಾಲ್ಜೈದು ಕಂಪನಿಗಳಿವೆ ಎಂದು ವಿವರಿಸಿದರು

ಭಿತ್ತಿಪತ್ರ ಚಳವಳಿ

ಎಟಿಎಂ ಸರ್ಕಾರದ ವಿರುದ್ಧ ಬೆಂಗಳೂರು ಸೇರಿ 172 ಸ್ಥಳಗಳಲ್ಲಿ ಪ್ರತಿಭಟನೆ ನಡೆಸಲಾಗಿದೆ. ಜ‌ನರಿಂದ ಸಂಗ್ರಹವಾದ ತೆರಿಗೆ ಹಣ ಜನಹಿತಕ್ಕೆ ಬಳಕೆಗೆ ಒತ್ತಡ ಹೇರಲು, ಕಾಂಗ್ರೆಸ್ ಭ್ರಷ್ಟಾಚಾರದ ಬಗ್ಗೆ ಜನರಿಗೆ ತಿಳಿಸಲು ದಸರಾ ಹಬ್ಬದ ನಂತರ ಭಿತ್ತಿಪತ್ರ ಚಳವಳಿ ನಡೆಸುತ್ತೇವೆ ಎಂದು ಮಾಜಿ ಸಿಎಂ ಡಿ.ವಿ.ಸದಾನಂದಗೌಡ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net