

ವಿಜಯಪುರ: ಕಬ್ಬಿನ ದರ ನಿಗದಿಪಡಿಸುವುದರಲ್ಲಿ ಕೇಂದ್ರ ಸರ್ಕಾರದ ಪಾತ್ರವೇ ಮಹತ್ವದ್ದು, ರಾಜ್ಯ ಸರ್ಕಾರ ಕೇವಲ ಮಾರ್ಗಸೂಚಿ ಪಾಲಿಸಲಿ. ಹೀಗಾಗಿ ರೈತರು ಸಂಘರ್ಷಕ್ಕಿಳಿಯುವ ಬದಲು ಸಾಮರಸ್ಯದಿಂದ ಸಮಸ್ಯೆ ಬಗೆ ಹರಿಸಿಕೊಳ್ಳಬೇಕೆಂದು ಸಕ್ಕರೆ ಹಾಗೂ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಮನವಿ ಮಾಡಿದರು.
ಕೇಂದ್ರ ಸರ್ಕಾರ ನಿಗದಿ ಮಾಡಿದ ದರ ಕೊಡಿಸುವ ಪ್ರಾಮಾಣಿಕ ಪ್ರಯತ್ನ ರಾಜ್ಯ ಸರ್ಕಾರ ಮಾಡಲಿದೆ. ಈಗಾಗಲೇ ಜಿಲ್ಲಾಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ರೈತರು ಮತ್ತು ಕಾರ್ಖಾನೆಗಳ ಮಾಲೀಕರ ಸಭೆ ನಡೆಸಲಾಗಿದೆ. ಆದರೆ, ಬಾಗಲಕೋಟೆ ಮತ್ತು ಬೆಳಗಾವಿಯಲ್ಲಿ ಮಾತ್ರ ಸ್ವಲ್ಪ ಗೊಂದಲ ಉಂಟಾಗಿದೆ. ಆ ಸಮಸ್ಯೆಯನ್ನು ನಾಲ್ಕುಗೋಡೆಗಳ ಮಧ್ಯೆ ಕುಳಿತು ಬಗೆ ಹರಿಸಿಕೊಳ್ಳಬೇಕು ವಿನಃ ಬೀದಿಗಿಳಿಯುವುದರಿಂದ ಪ್ರಯೋಜನವಿಲ್ಲವೆಂದು ಮಂಗಳವಾರ ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.
ಈಗಾಗಲೇ ದಕ್ಷಿಣ ಕರ್ನಾಟಕದಲ್ಲಿ ಕಬ್ಬು ನುರಿಸುವ ಕಾರ್ಯ ಪ್ರಾರಂಭವಾಗಿದೆ. ನೆರೆಯ ಬಾಗಲಕೋಟೆಯಲ್ಲೇ ಕಾರ್ಖಾನೆಗಳು ಕಾರ್ಯಾರಂಭಗೊಳ್ಳುತ್ತಿವೆ. ಬೆಳಗಾವಿಯಲ್ಲಿ ಜಿಲ್ಲಾಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ನಡೆದ ಸಭೆ ಒಂದು ಹಂತಕ್ಕೆ ಸಂಪನ್ನಗೊಂಡಿತ್ತು. ಆದರೆ, ಕೆಲವು ನಾಯಕರು ಹೆಚ್ಚಿಗೆ ದರ ಕೊಡಿಸುವ ಭರವಸೆ ನೀಡಿದ್ದರಿಂದ ರೈತರು ಅದನ್ನೇ ತಲೆಯಲ್ಲಿ ಇರಿಸಿಕೊಂಡಿದ್ದಾರೆ.
ರೈತರು 3400 ರೂಪಾಯಿ ಕೇಳಿದರೆ ಕಾರ್ಖಾನೆಗಳು 3200 ರೂಪಾಯಿ ಕೊಡುವುದಾಗಿ ಭರವಸೆ ನೀಡಿವೆ. ಹೀಗಾಗಿ ಹೊಂದಾಣಿಕೆ ಸೂತ್ರದಡಿ ಸಮಸ್ಯೆ ಬಗೆ ಹರಿಸಿಕೊಳ್ಳಬೇಕು. ಇಲ್ಲವಾದರೆ ಸ್ವಲ್ಪ ದಿನ ದೂಡಿದರೆ ಸಂಪೂರ್ಣ ಇಳುವರಿ ಕಡಿಮೆಯಾಗುತ್ತದೆ. ಇದರಿಂದ ರೈತರಿಗೇ ಸಮಸ್ಯೆಯಾಗಲಿದೆ. ಹೀಗಾಗಿ ಸಹಕರಿಸಬೇಕು ಎಂದು ಮನವಿ ಮಾಡಿದರು.
ಕಾರ್ಖಾನೆಗಳು ಮತ್ತು ರೈತರು ಇಬ್ಬರ ಹಿತವೂ ಮುಖ್ಯ. ರೈತರೇ ನಮ್ಮ ಮೊದಲ ಆದ್ಯತೆಯಾದರೂ ಕಾರ್ಖಾನೆಗಳ ಸ್ಥಿತಿಗತಿ, ಕೇಂದ್ರ ಸರ್ಕಾರದ ನೀತಿ, ಪ್ರಸಕ್ತ ಮಾರುಕಟ್ಟೆ ವ್ಯವಸ್ಥೆಯನ್ನೂ ಗಮನದಲ್ಲಿರಿಸಿಕೊಳ್ಳಬೇಕಿದೆ. ಜಿಲ್ಲೆಯಿಂದ ಜಿಲ್ಲೆಗೆ ಕಬ್ಬಿನ ದರ ಏರಿಳಿತವಾಗಲಿದೆ. ಕಾರಣ ಇಳುವರಿಯಲ್ಲಿ ಹೆಚ್ಚು-ಕಡಿಮೆಯಾಗಲಿದೆ. ಭೀಮಾ ನದಿ ಪಾತ್ರದಲ್ಲಿ ಇಳುವರಿ ಕಡಿಮೆಯಾಗಿದ್ದರೆ, ಕೃಷ್ಣಾ ಕಣಿವೆಯಲ್ಲಿ ಸ್ವಲ್ಪ ಇಳುವರಿ ಹೆಚ್ಚು. ಕಾವೇರಿ ಭಾಗದಲ್ಲಿಯೇ ಇಳುವರಿ ಪ್ರಮಾಣ ವಿಭಿನ್ನ. ಹೀಗಾಗಿ ರೈತರು ಮತ್ತು ಕಾರ್ಖಾನೆಗಳ ಮಾಲೀಕರು ಸಹಕಾರದ ಮೇರೆಗೆ ದರ ನಿಗದಿಯಾಗಬೇಕು ಎಂದರು.
ಒಂದು ಕಾಲದಲ್ಲಿ ಟನ್ ಕಬ್ಬಿಗೆ 700 ರೂಪಾಯಿ ಕೂಡ ದರ ಇರಲಿಲ್ಲ. ಈಗ ಟನ್ ಕಬ್ಬಿಗೆ ಕನಿಷ್ಠ 3000 ರೂಪಾಯಿಯಾದರೂ ಸಿಗುತ್ತಿದೆ. ಬಹಳಷ್ಟು ಬೆಳೆಗೆ ಸೂಕ್ತ ಬೆಲೆ ಇಲ್ಲ. ಇರುವುದು ಕಬ್ಬಿಗೆ ಮಾತ್ರ. ಅದನ್ನು ಕಾಯ್ದುಕೊಂಡು ಹೋಗಬೇಕಿದೆ ಎಂದರು.
ಸಾಲ ತೆಗೆದುಕೊಂಡು ಕಾರ್ಖಾನೆ ನಡೆಸುವವರಿಗೂ ಸಂಕಷ್ಟಗಳಿವೆ. ಈಗಾಗಲೇ ಕಬ್ಬು ಕಡಿಯುವ ಗ್ಯಾಂಗ್ ರಾಜ್ಯಕ್ಕೆ ಬಂದು ಹತ್ತು ದಿನ ಆಯಿತು. ಆ ಕಾರ್ಮಿಕರ ಹಿತವೂ ಮುಖ್ಯ ಎಂದರು.
ಕೇಂದ್ರ ಸರ್ಕಾರದ ಎಂಎಸ್‌ಪಿ ನೀತಿ ಪರಿಷ್ಕರಣೆಯಾಗಬೇಕಿದೆ. ವಾಣಿಜ್ಯ ಬಳಕೆಗೆ ಖರೀದಿಯಾಗುವ ಸಕ್ಕರೆ ದರ ಹಾಗೂ ಗ್ರಾಹಕರು ಖರೀದಿಸುವ ದರ ಒಂದೇ ಇದ್ದು, ಅದಕ್ಕೆ ಬೇರೆ ಬೇರೆ ದರ ನಿಗದಿಗೊಳಿಸಿದರೆ ಕಾರ್ಖಾನೆಗಳು ರೈತರಿಗೆ ಹೆಚ್ಚಿನ ದರ ನೀಡಲು ಅನುಕೂಲವಾಗಲಿದೆ. ಕೇಂದ್ರ ಸರ್ಕಾರದಿಂದ ಏನೆಲ್ಲಾ ಕಾರ್ಯಗಳಾಗಿಲ್ಲ ಎಂಬುದರ ಬಗ್ಗೆ ಸ್ವತಃ ಬಿಜೆಪಿಯ ಮುರುಗೇಶ ನಿರಾಣಿ ಅವರೇ ಅಮಿತ್ ಷಾ ಅವರಿಗೆ ಪತ್ರ ಬರೆದಿದ್ದಾರೆ. ಇಥೆನಾಲ್ ತಯಾರಿಕೆಗೆ ಉತ್ತೇಜನ ನೀಡಿದ್ದೇ ಕೇಂದ್ರ ಸರ್ಕಾರ. ಈದ ಇಥೆನಾಲ್ ಖರೀದಿ ಪ್ರಮಾಣವನ್ನೇ ಕಡಿಮೆ ಮಾಡಿದರೆ ಕಾರ್ಖಾನೆಯವರು ಕಬ್ಬಿಗೆ ಹೆಚ್ಚಿನ ಬೆಲೆ ಕೊಡುವುದು ಕಷ್ಟವಾಗಲಿದೆ. ಇಥೆನಾಲ್‌ಗೆ ಹೆಚ್ಚಿನ ದರ ಕೊಡಿ ಎಂಬ ಬೇಡಿಕೆಯೂ ಇದೆ ಎಂದರು.
ಬೆಳಗಾವಿ ಮತ್ತು ಬಾಗಲಕೋಟೆಯಲ್ಲಿ ಕೆಲವು ತಪ್ಪು ಕಲ್ಪನೆಯಿಂದ ಸ್ವಲ್ಪ ಸಮಸ್ಯೆಯಾಗಿದ್ದು ನಿಜ. ಇದೀಗೆ ಅಲ್ಲಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಬರುತ್ತಿದ್ದು ಅವರಿಗೂ ವಾಸ್ತವ ಗೊತ್ತಾಗಲಿದೆ. ಅವರೂ ಕೇಂದ್ರಕ್ಕೆ ಮನವಿ ಕೊಡಲಿ ಎಂದರು.
ವಿಜಯಪುರ ಜಿಲ್ಲೆಯ ಸಮಸ್ಯೆ ಜಿಲ್ಲಾ ಉಸ್ತುವಾರಿ ಸಚಿವರು ಬಗೆ ಹರಿಸಿಕೊಂಡರೆ ನಿಧಾನವಾಗಿ ವಾತಾವರಣ ತಿಳಿಯಾಗಲಿದೆ. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾಧಿಕಾರಿಯನ್ನೇ ಸಮಸ್ಯೆ ಬಗೆ ಹರಿಸಲು ಕಳುಹಿಸಿದ್ದಾರೆ. ಜಿಲ್ಲಾಧಿಕಾರಿಗಳೂ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದು, ರೈತರು ಸಹ ಹೋರಾಟ ನಿಲ್ಲಿಸಬೇಕೆಂದು ವೈಯಕ್ತಿಕವಾಗಿಯೂ ಮನವಿ ಮಾಡುವುದಾಗಿ ತಿಳಿಸಿದರು.