ಬಿ.ವೈ.ವಿಜಯೇಂದ್ರ ಮುಂದುವರಿಯವ ವಿಶ್ವಾಸ

halappa (3)
ಹಾಲಪ್ಪ
Published on

ಸಾಗರ: ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಎಲ್ಲರ ಸಹಮತದೊಂದಿಗೆ ನಡೆಯುತ್ತಿದೆ. ನನ್ನ ರಾಜಕೀಯ ಅನುಭವದ ಪ್ರಕಾರ ಬಿ.ವೈ.ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಮುಂದುವರಿಯುವ ಸಾಧ್ಯತೆ ಇದೆ ಎಂದು ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಸಾಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ಚುನಾವಣೆ ಎಂದರೆ ಎಲ್ಲರ ಅಭಿಪ್ರಾಯ ಪಡೆಯುತ್ತಾರೆ. ಜತೆಗೆ ಪಕ್ಷದ ಹೈಕಮಾಂಡ್ ಅಭಿಪ್ರಾಯ ಸಂಗ್ರಹಿಸಿ, ಯಾರ ಬಗ್ಗೆ ಹೆಚ್ಚು ಒಲವು ಇದೆಯೋ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಿದೆ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷರು ಯಾರಾಗಬೇಕು ಎಂದು ಹೈಕಮಾಂಡ್ ತೀರ್ಮಾನಿಸುತ್ತದೆ. ಅನಗತ್ಯವಾಗಿ ಗೊಂದಲ ಸೃಷ್ಟಿಸುವುದು ಸರಿಯಲ್ಲ. ಜತೆಗೆ ಪಕ್ಷದ ಚುನಾವಣೆ ಬಗ್ಗೆ ಹಾದಿಬೀದಿಯಲ್ಲಿ ಮಾತನಾಡುವುದಕ್ಕಿಂತ ಪಕ್ಷದ ಚೌಕಟ್ಟಿನಲ್ಲಿ ಅಭಿಪ್ರಾಯ ಮಂಡಿಸಬೇಕು. ಯತ್ನಾಳ್ ಅವರ ಭಾಷೆಯೇ ಸರಿಯಿಲ್ಲ. ಏನು ಮಾತನಾಡುತ್ತಿದ್ದಾರೆ ಎನ್ನುವುದು ಅವರಿಗೇ ಅರ್ಥವಾಗುತ್ತದೆಯೋ, ಇಲ್ಲವೋ? ಅವರ ಹೇಳಿಕೆಗಳಿಂದ ಕಾರ್ಯಕರ್ತರು ಮುಜುಗರ ಅನುಭವಿಸುವಂತಾಗಿದೆ ಎಂದು ಹೇಳಿದರು.

ನವದೆಹಲಿಯಲ್ಲಿ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರ ಸರ್ಕಾರಿ ನಿವಾಸದ ಗೃಹಪ್ರವೇಶವಿದ್ದು, ಅದಕ್ಕೆ ಪಕ್ಷದ ಪ್ರಮುಖರ ಜತೆ ಆಪ್ತರನ್ನೂ ಕರೆದಿದ್ದಾರೆ. ಎಲ್ಲರೂ ಅಲ್ಲಿಗೆ ಹೋಗಿದ್ದಾರೆಯೇ ವಿನಃ ಹೈಕಮಾಂಡ್ ಯಾರನ್ನೂ ದೆಹಲಿಗೆ ಕರೆಸಿಕೊಂಡಿಲ್ಲ. ಇದನ್ನೇ ಕೆಲವರು ಬೇರೆ ರೀತಿ ಬಿಂಬಿಸಿಕೊಳ್ಳುತ್ತಿದ್ದಾರೆ. ನನಗೂ ಕರೆಯಿತ್ತು. ಸ್ಥಳೀಯವಾಗಿ ಕಾರ್ಯಕ್ರಮ ಇದ್ದುದರಿಂದ ನಾನು ಹೋಗಿಲ್ಲ. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಹೈಕಮಾಂಡ್ ಬಗೆಹರಿಸುತ್ತದೆ ಎಂದರು.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿಜೆಪಿ 48 ಸ್ಥಾನ ಗೆದ್ದಿರುವುದು ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆಗೆ ಸಾಕ್ಷಿ. 27 ವರ್ಷಗಳ ನಂತರ ದೆಹಲಿ ಆಡಳಿತ ಬಿಜೆಪಿ ತೆಕ್ಕೆಗೆ ಬಂದಿದೆ. ಇದರಿಂದ ಕಾರ್ಯಕರ್ತರಿಗೆ ಹೆಚ್ಚು ಶಕ್ತಿ ಬಂದಿದೆ. ಮುಂದಿನ ದಿನಗಳಲ್ಲಿ ಕರ್ನಾಟಕ ಸೇರಿ ಇತರೆ ಕಡೆಗಳಲ್ಲೂ ಅಧಿಕಾರ ಹಿಡಿಯಲಿದೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಗ್ರಾಮಾಂತರ ಮಂಡಲ ಅಧ್ಯಕ್ಷ ದೇವೇಂದ್ರಪ್ಪ ಯಲಕುಂದ್ಲಿ, ನಗರ ಮಂಡಲ ಅಧ್ಯಕ್ಷ ಕೆ.ಆರ್.ಗಣೇಶಪ್ರಸಾದ್, ಪ್ರಮುಖರಾದ ಬಿ.ಟಿ.ರವೀಂದ್ರ, ವಿನಾಯಕ ರಾವ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net