

ಕೋಲಾರ: ಪಾನ್ ಬ್ರೋಕರ್ ಮತ್ತು ಮೈಕ್ರೋ ಫೈನಾನ್ಸ್ನವರು ಗ್ರಾಹಕ ಸ್ನೇಹಿ ವಹಿವಾಟು ನಡೆಸಬೇಕು, ಅದ್ಯಾದೇಶ ನಿಯಮ ಉಲ್ಲಂಘಿಸಿದರೆ ಅಪಾಯ ತಪ್ಪಿದ್ದಲ್ಲ ಎಂದು ಸಹಕಾರ ಇಲಾಖೆಯ ಉಪ ನಿಬಂಧಕ ಕಿಶೋರ್ ಕುಮಾರ್ ಹೇಳಿದರು.
ನಗರದ ಸಹಕಾರ ಒಕ್ಕೂಟದ ಸಭಾಂಗಣದಲ್ಲಿ ಸಹಕಾರ ಇಲಾಖೆಯಿಂದ ಸೋಮವಾರ ಹಮ್ಮಿಕೊಂಡಿದ್ದ ಪಾನ್ ಬ್ರೋಕರ್ ಮತ್ತು ಮೈಕ್ರೋ ಫೈನಾನ್ಸ್ ಮುಖ್ಯಸ್ಥರ ಸಭೆಯಲ್ಲಿ ಮಾತನಾಡಿ, ವಿವಿಧ ಸಂಸ್ಥೆಗಳಿಂದ ವಿತರಣೆ ಮಾಡಲಾಗಿರುವ ಸಾಲ ವಸೂಲಿ ವೇಳೆ ಕಿರುಕುಳ ನೀಡುತ್ತಿರುವ ಬಗ್ಗೆ ಸರ್ಕಾರಕ್ಕೆ ದೂರುಗಳು ಸಲ್ಲಿಕೆಯಾಗಿದ್ದು, ಆದರ ಹಿನ್ನೆಲೆಯಲ್ಲಿ ಕಠಿಣ ಕಾಯ್ದೆ ಜಾರಿಗೆ ಮುಂದಾಗಿದೆ, ಎಲ್ಲರೂ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಸೂಚಿಸಿದರು.
ಇಲಾಖೆಯಡಿ ನೋಂದಣಿ ಮಾಡಿಕೊಂಡಿರುವ ಸಂಸ್ಥೆಯವರು ಕೂಡಲೇ ಜಿಲ್ಲಾಧಿಕಾರಿ ಬಳಿ ನೋಂದಣಿ ಮಾಡಿಸಿಕೊಳ್ಳಬೇಕು, ಯಾರಾದರೂ ಅನಧಿಕೃತವಾಗಿ ಸಾಲ ನೀಡುವುದು, ವಸೂಲಿ ಮಾಡುವುದು ಕಂಡು ಬಂದರೆ ಗಮನಕ್ಕೆ ತರಬೇಕು, ಪ್ರತಿ ತಿಗಳಿಗೊಮ್ಮೆ ವಹಿವಾಟಿನ ಮಾಹಿತಿ ನೀಡಬೇಕು, ಜತೆಗೆ ಬಡ್ಡಿ ದರ ಕುರಿತು ನೋಟಿಸ್ ಬೋರ್ಡ್ನಲ್ಲಿ ಪ್ರಕಟಿಸಬೇಕು ಎಂದು ಸಲಹೆ ನೀಡಿದರು.
ಸಾರ್ವಜನಿಕರಿಗೆ ಸಾಲ ನೀಡಿರುವ ಸಂಸ್ಥೆಗಳವರು ಕಾನೂನು ಮೀರಿ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಸಲ್ಲಿಕೆಯಾಗಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರವು ಕಾಯ್ದೆಯಲ್ಲಿ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಇದರ ಅರಿವು ಪಡೆದುಕೊಂಡು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲನೆ ಮಾಡಬೇಕು. ಅದು ಬಿಟ್ಟು ಏನಾದರು ಉಲ್ಲಂಘಿಸಲು ಪ್ರಯತ್ನಿಸಿದರೆ ಯಾರು ನಿಮ್ಮನ್ನು ರಕ್ಷಣೆ ಮಾಡಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.
* ಖಾಸಗಿ ವ್ಯಕ್ತಿಗಳನ್ನ ನೇಮಿಸಿಕೊಳ್ಳುವಂತಿಲ್ಲ
ಸಹಕಾರ ಇಲಾಖೆಯ ಸಹಾಯಕ ನಿಬಂಧಕ ನವೀನ್ ಕುಮಾರ್ ಮಾತನಾಡಿ, ಮೈಕ್ರೋ ಫೈನಾನ್ಸ್ ಸಂಬಂಧಿಸಿದ ಗ್ರಾಹಕರು ಯಾರು ಎಂಬುದು ಗೊತ್ತಿರುತ್ತದೆ, ವಸೂಲಿಗೆ ಖಾಸಗಿ ವ್ಯಕ್ತಿಗಳನ್ನು ನೇಮಕ ಮಾಡಿಕೊಳ್ಳವಂತಿಲ್ಲ ಎಂದು ತಿಳಿಸಿದರು.
ಪರವಾನಗಿ ಪಡೆದುಕೊಂಡಿರುವವರು ಡಿಸಿ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. ನೋಂದಣಿ ಇಲ್ಲದೆ ಸಾಲ ವಸೂಲಿಗೆ ಹೋದಾಗ ದೂರು ನೀಡದರೆ ಶಿಕ್ಷೆಗೆ ಒಳಗಾಗಬೇಕಾಗುತ್ತದೆ. ಆಗ ಕೊಟ್ಟಿರುವ ಸಾಲವು ಸಹ ವಾಪಸ್ ಬರುವುದಿಲ್ಲ. ಮೈಕ್ರೋಫೈನಾನ್ಸ್ಗಳ ಹಾವಳಿ ತಪ್ಪಿಸಲು ಜಿಲ್ಲಾಮಟ್ಟದಲ್ಲಿ ಸಮಿತಿ ರಚನೆ ಮಾಡಲಾಗಿದೆ ಎಂದು ತಿಳಿಸಿದರು.
ಪ್ರತಿ ವರ್ಷ ಎಷ್ಟರಮಟ್ಟಿಗೆ ವಹಿವಾಟು ನಡೆಸುತ್ತೀರಾ ಎಂಬುದರ ಬಗ್ಗೆ ಖಾತರಿಪಡಿಸಿಕೊಳ್ಳಬೇಕು. ಕಿರುಕುಳ ಬೀಡುವವರ ಬಗ್ಗೆ ದೂರು ನೀಡಲು ಈಗಾಗಲೇ ಆನ್ಲೈನ್ನಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಅದು ನೇರವಾಗಿ ರಾಜ್ಯಮಟ್ಟದ ಅಧಿಕಾರಿಗಳ ಗಮನಕ್ಕೆ ಹೋಗುತ್ತದೆ, ಅಲ್ಲಿಂದ ಕ್ರಮಕೈಗೊಳ್ಳಲು ನಮಗೆ ಸೂಚನೆ ಬರುತ್ತದೆ. ಆದ ಕಾರಣ ಪ್ರತಿಯೊಬ್ಬರೂ ಪಾರದರ್ಶಕವಾಗಿ ವಹಿವಾಟು ನಡೆಸಬೇಕು ಎಂದು ಸಲಹೆ ನೀಡಿದರು.
ಕೆಜಿಎಫ್, ಮುಳಬಾಗಿಲು ತಾಲೂಕು ವ್ಯಾಪ್ತಿಯಲ್ಲಿ ವಾಹನ ಸಾಲ ವಸೂಲಿಯಲ್ಲಿ ನಿಯಮ ಉಲ್ಲಂಘನೆ ಮಾಡಿತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮವಹಿಸಲಾಗಿದೆ. ಇನ್ನಾದರೂ ಜಾಗೃತರಾಗಬೇಕು. ಸಾಲ ಪಡೆದುಕೊಂಡವರು ಸುಸ್ತಿ ಆದಾಗ ಮೊದಲು ನೋಟಿಸ್ ಕೊಡಬೇಕು, ಆನಂತರ ಸಾಲ ವಸೂಲಿಗೆ ನಿಗದಿತ ಅವಧಿಯಲ್ಲೇ ಮನೆ ಬಳಿಗೆ ಹೋಗಬೇಕು ಎಂದು ತಿಳಿಸಿದರು.
ಚಿನ್ನ, ಬೆಳ್ಳಿ ಅಡಮಾನ ಇಟ್ಟುಕೊಂಡು ಸಾಲ ಪಡೆದುಕೊಂಡಿರುವವರು ಲೈಸನ್ಸ್ ದಾರರಿಗೆನೇ ಹರಾಜು ಮಾಡಬೇಕು. ಗ್ರಾಹಕರು ಅಡಮಾನ ಇಟ್ಟ ವಸ್ತುವಿಗೆ ನವೀಕರಣ ಮಾಡಿಕೊಳ್ಳದಿದ್ದರೆ ನಿಗದಿತ ವರ್ಷದೊಳಗೆ ಬಿಡಿಕೊಳ್ಳದಿದ್ದರೆ ದಿನಪತ್ರಿಕೆಯಲ್ಲಿ ಪ್ರಕಟಣೆ ಹೊರಡಿಸಿ ಗ್ರಾಹಕರ ಗಮನಕ್ಕೆ ತರಬೇಕು, ಇದಕ್ಕೂ ಮೊದಲು ನೋಟಿಸ್ ಸಹ ನೀಡಬೇಕು ಎಂದರು.
ಗ್ರಾಹಕರ ಜತೆ ಸೌಜನ್ಯದಿಂದ ನಡೆದುಕೊಳ್ಳಬೇಕು, ಸಂಸ್ಥೆಗಳವರು ಬಹಳ ಜಾಗ್ರತೆಯಿಂದ ವಹಿವಾಟು ನಡೆಸಬೇಕು, ಅದು ಬಿಟ್ಟು ಉದಾಸೀನ ತೋರಿದರೆ ಕ್ರಮ ತಪ್ಪಿದಲ್ಲ ಎಂದು ಎಚ್ಚರಿಕೆ ನೀಡಿದರು.