

ವಿಜಯಪುರ: ರಾಜ್ಯದಲ್ಲಿ ಶೋಚನೀಯ ಸ್ಥಿತಿಯಲ್ಲಿರುವ ವಿಶ್ವ ವಿದ್ಯಾಲಯಗಳಿಗೆ ಕಾಯಕಲ್ಪ ನೀಡುವುದನ್ನು ಬಿಟ್ಟು ಗದಗನ ಆರ್‌ಡಿಪಿಆರ್ ವಿವಿ ಕಾಯ್ದೆಗೆ ತಿದ್ದು ಪಡಿ ತಂದು ರಾಜ್ಯಪಾಲರಿಗೆ ಸಂವಿಧಾನದತ್ತವಾಗಿರುವ ಕುಲಾಧಿಪತಿ ಹುದ್ದೆಯನ್ನು ಕಿತ್ತುಕೊಳ್ಳಲು ಹೊರಟಿರುವ ರಾಜ್ಯ ಸರ್ಕಾರದ ನಡೆ ಖಂಡನೀಯ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ ಹೇಳಿದರು.
ಕರ್ನಾಟಕ ಸರ್ಕಾರ ಗದಗನ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ವಿವಿಯ ಕಾಯ್ದೆಗೆ ತಿದ್ದುಪಡಿ ತರುವ ಪ್ರಸ್ತಾವನೆಗೆ ಅನುಮೋದನೆ ನೀಡಿದೆ. ರಾಜ್ಯಪಾಲರಿಗೆ ನೀಡಿದ ಅಧಿಕಾರವನ್ನು ಮುಖ್ಯಮಂತ್ರಿಗೆ ಕೊಡಬೇಕು ಮತ್ತು ಕುಲಾಧಿಪತಿಯಾಗಿ ಮುಖ್ಯಮಂತ್ರಿಗೆ ಅಧಿಕಾರ ನೀಡಲು ಹೊರಟಿರುವುದು ಸಂವಿಧಾನ ವಿರೋಧಿ ನಡೆಯಲ್ಲದೆ ಮತ್ತೇನು ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದ್ದಾರೆ.
ಕುಲಾಧಿಪತಿಯಾಗಿರುವ ರಾಜ್ಯಪಾಲರಿಗೆ ಘಟಿಕೋತ್ಸವದಲ್ಲಿ ಭಾಗಿಯಾಗುವುದು ಬಿಟ್ಟು ಬೇರೆ ಯಾವುದೇ ಮಹತ್ವದ ಅಧಿಕಾರಿಗಳಿಲ್ಲ. ಅದನ್ನೂ ಈ ಸರ್ಕಾರ ಕಿತ್ತುಕೊಳ್ಳಲು ಹೊರಟಿದೆ. ಅಷ್ಟಕ್ಕೂ ಸಹ ಕುಲಾಧಿಪತಿಯಾಗಿ ಪಂಚಾಯಿತ್ ರಾಜ್ ಸಚಿವರಿದ್ದರೂ ತೃಪ್ತಗೊಳ್ಳದ ಈ ಸರ್ಕಾರ ಕುಲಾಧಿಪತಿ ಹುದ್ದೆಯನ್ನೂ ಕಿತ್ತುಕೊಂಡು ಸಿಎಂಗೆ ಕೊಡಲು ಮುಂದಾಗಿರುವುದು ಅಧಿಕಾರದ ಲಾಲಸೆ ಹಾಗೂ ಹಪಾಹಪಿತನಕ್ಕೆ ಹಿಡಿದ ಕೈಗನ್ನಡಿ ಎಂದರು.
ಸದ್ಯ ಆರ್‌ಡಿಪಿಆರ್ ವಿವಿ ಕಾಯ್ದೆಗೆ ತರುವ ಈ ತಿದ್ದುಪಡಿ ಮುಂದೆ ಸಾಂಕ್ರಮಿಕ ರೋಗವಾಗಿ ಹರಡುವ ಮೂಲಕ ಎಲ್ಲ ವಿಶ್ವ ವಿದ್ಯಾಲಯಗಳಿಗೂ ಅನ್ವಯವಾಗಬಹುದಾಗಿದೆ. ಇದರಿಂದ ವಿಶ್ವ ವಿದ್ಯಾಲಯಗಳಲ್ಲಿ ರಾಜಕೀಯ ಬೆರೆತು ಬೆಳವಣಿಗೆಗೆ ಮಾರಕವಾಗಲಿದೆ. ಹೀಗಾಗಿ ರಾಜ್ಯ ಸರ್ಕಾರದ ವಿರುದ್ಧ ಈಗಾಗಲೇ ಎಬಿವಿಪಿ ಹೋರಾಟ ಆರಂಭಿಸಿದ್ದು ಅದಕ್ಕೆ ಬೆಂಬಲ ವ್ಯಕ್ತಪಡಿಸುವುದಾಗಿ ಹೇಳಿದರು.
ರಾಜ್ಯದಲ್ಲಿ ವಿಶ್ವ ವಿದ್ಯಾಲಯಗಳ ಸ್ಥಿತಿ ಶೋಚನೀಯವಾಗಿದೆ. ಅನುದಾನದ ಕೊರತೆ ಎದುರಿಸುತ್ತಿವೆ. ಅಕ್ಕಮಹಾದೇವಿ ಮಹಿಳಾ ವಿವಿ ಬಗ್ಗೆ ಸದನದಲ್ಲಿ ಕಳಕಳಿ ವ್ಯಕ್ತಪಡಿಸುವ ಕಾಂಗ್ರೆಸ್ ಶಾಸಕರುಗಳು ಈವರೆಗೆ ಎಷ್ಟು ಅನುದಾನ ಕೊಡಿಸಿದ್ದಾರೆ? 2003-04ರಲ್ಲಿ 5 ಕೋಟಿ ಅನುದಾನದೊಂದಿಗೆ ಆರಂಭಗೊಂಡ ಅಕ್ಕಮಹಾದೇವಿ ಮಹಿಳಾ ವಿವಿಗೆ ಈವರೆಗೆ ಸಮರ್ಪಕವಾಗಿ ಅನುದಾನ ಸಿಕ್ಕಿಲ್ಲ. ಅನುದಾನದ ಒಟ್ಟು ಕೋರಿಕೆ 1694 ಕೋಟಿ ರೂ. ಇದ್ದರೆ ಈವರೆಗೆ ಬಂದಿದ್ದು ಕೇವಲ 282.68 ಕೋಟಿ ಮಾತ್ರ.ಹೀಗೆ ಒಂದೊಂದು ವಿವಿಯೂ ಆರ್ಥಿಕವಾಗಿ ಸಂಕಷ್ಟದಲ್ಲಿವೆ. ಬೋಧಕ ಸಿಬ್ಬಂದಿಯೂ ಇಲ್ಲ. ಮಹಿಳಾ ವಿವಿ ಸ್ಥಾಪನೆಯಾಗಿ 22 ವರ್ಷವಾದರೂ ಬೋಧಕೇತರ ಸಿಬ್ಬಂದಿಯೇ ನೇಮಕವಾಗಿಲ್ಲ. ಹೀಗಾಗಿ ವಿಶ್ವ ವಿದ್ಯಾಲಯಗಳಿಗೆ ಕಾಯಕಲ್ಪ ಕೊಡಬೇಕೇ ವಿನಃ ಸಿಎಂಗೆ ಕುಲಾಧಿಪತಿ ಹುದ್ದೆ ಕೊಡುವುದರಿಂದ ಆಗುವುದೇನು? ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತೆಗೆದು ರಾಜ್ಯ ಶಿಕ್ಷಣ ನೀತಿ ತರಲು ಹೊರಟ ಪರಿಣಾಮ 5000 ಅತಿಥಿ ಶಿಕ್ಷಕರು ಕೆಲಸ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಹೀಗಾಗಿ ಅವರಿಗೆ ಭದ್ರತೆ ಕೊಡಬೇಕೆಂಬ ಬೇಡಿಕೆ ಇತ್ತು. ಸಿಎಂ-ಡಿಸಿಎಂ ಕೂಡ ಉದ್ಯೋಗ ಭದ್ರತೆ ಕಲ್ಪಿಸುವುದಾಗಿ ಹೇಳಿದ್ದರು. ಈವರೆಗೂ ಬೇಡಿಕೆ ಈಡೇರಿಲ್ಲ. ಹೀಗಾಗಿ ಬರುವ ವಿಧಾನ ಮಂಡಲ ಅಧಿವೇಶನದಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಿ ಎಂದರು.
ಮುಖಂಡ ಮಂಜು ಮೀಶಿ ಹಾಗೂ ವಿಜಯಕುಮಾರ ಜೋಷಿ ಇದ್ದರು.