

ಬೆಂಗಳೂರು: ನಮ್ಮ ಪಕ್ಷದ ಹಿರಿಯರಾದ ಛಲವಾದಿ ನಾರಾಯಣಸ್ವಾಮಿ ಅವರ ಬಗ್ಗೆ ಕಾಂಗ್ರೆಸ್ ಮುಖಂಡರು ಮತ್ತು ಶಾಸಕರು ಕೆಟ್ಟ ಶಬ್ದಗಳಿಂದ ಮಾತನಾಡುತ್ತಿರುವುದು ಖಂಡನೀಯ. ಇದರ ವಿರುದ್ಧ ಎಸ್.ಸಿ. ಮೋರ್ಚಾವು ರಾಜ್ಯಾದ್ಯಂತ ಹೋರಾಟ ಮಾಡಲಿದೆ ಎಂದು ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ಶಾಸಕ ಸಿಮೆಂಟ್ ಮಂಜುನಾಥ ಎಚ್ಚರಿಸಿದರು.
ಪಕ್ಷದ ರಾಜ್ಯ ಕಚೇರಿಯಲ್ಲಿ ಮಂಗಳವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು, ಕಾಂಗ್ರೆಸ್ ಪಕ್ಷದ ಮುಖಂಡರ ಅಕ್ರಮಗಳ ವಿರುದ್ಧ ಮಾತನಾಡಿದ್ದಾರೆ. ಅಲ್ಲದೆ, ತನಿಖೆಗೆ ಕೋರಿದ್ದಾರೆ.
ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆಯವರ ಕುರಿತು ಅಪಾರವಾದ ಗೌರವವಿದೆ. ಆದರೆ, ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಕಾಂಗ್ರೆಸ್ಸಿಗರ ಅಧಿಕಾರ ದುರ್ಬಳಕೆ ಕುರಿತು ಮಾತನಾಡಿ ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ಸಮರ್ಥಿಸಿಕೊಂಡರು.
ನಾರಾಯಣಸ್ವಾಮಿಯವರ ಕುರಿತು ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಯು.ಬಿ.ವೆಂಕಟೇಶ್ ಅವರು ಇಲ್ಲಸಲ್ಲದ ಮಾತನಾಡಿದ್ದಾರೆ. ನಾರಾಯಣಸ್ವಾಮಿಯವರು ಕಳೆದ 45 ವರ್ಷಗಳಿಂದ ದಲಿತರಿಗಾಗಿ ಹೋರಾಟ ಮಾಡಿದವರು. ನಮ್ಮ ಪಕ್ಷವು ಅವರನ್ನು ಗುರುತಿಸಿ ಎಂಎಲ್‍ಸಿ ಮಾಡಿದೆ. ವಿಪಕ್ಷ ನಾಯಕನ ಸ್ಥಾನವನ್ನೂ ಕೊಟ್ಟಿದೆ . ಈ ಮೂಲಕ ನಮ್ಮ ಸಮಾಜಕ್ಕೆ ಸಾಮಾಜಿಕ ನ್ಯಾಯವನ್ನು ಕೊಟ್ಟಿದೆ ಎಂದರು.
ದಲಿತ ನಾಯಕರು ಅಧಿಕಾರ ದುರ್ಬಳಕೆ ಮಾಡಿದಾಗ ಅದರ ಕುರಿತು ಮಾತನಾಡುವುದು ತಪ್ಪಲ್ಲ. ತಮ್ಮ ಮೇಲಿನ ಆರೋಪ ಸರಿಯಲ್ಲ ಎಂದು ಕಾಂಗ್ರೆಸ್ಸಿಗರು ಸಾಬೀತು ಪಡಿಸುವಂತೆ ಅವರು ಸವಾಲು ಹಾಕಿದರು. ಇಂಥ ದೂರು ಬಂದಾಗ ಅದರ ವಿರುದ್ಧ ಧ್ವನಿ ಎತ್ತುವ ಉದ್ದೇಶದಿಂದಲೇ ಛಲವಾದಿ ನಾರಾಯಣಸ್ವಾಮಿ ಅವರಿಗೆ ಈ ಹುದ್ದೆ ಕೊಡಲಾಗಿದೆ ಎಂದು ಹೇಳಿದರು.
ಪ್ರಿಯಾಂಕ್ ಖರ್ಗೆಯವರು ಛಲವಾದಿಯವರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ್ದು ಸರಿಯಲ್ಲ. ಇದು ಒಳ್ಳೆಯ ಬೆಳವಣಿಗೆಯಲ್ಲ. ಖರ್ಗೆಯವರ ಕುಟುಂಬ ಅಕ್ರಮವಾಗಿ ನಿವೇಶನ ಪಡೆಯದೆ ಇದ್ದಲ್ಲಿ ಅದನ್ನು ಸಾಬೀತುಪಡಿಸಲು ಪ್ರಿಯಾಂಕ್ ಖರ್ಗೆಯವರು ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕು ಎಂದು ಸಿಮೆಂಟ್ ಮಂಜುನಾಥ ಒತ್ತಾಯಿಸಿದರು. ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಕೌತಾಳ, ಪ್ರಮುಖರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.