ಸಾಲ ಪ್ರಮಾಣ ಹೆಚ್ಚಳ ಆರ್ಥಿಕ ಕಳವಳ

Loan
Published on

ಬೆಂಗಳೂರು: ಪ್ರತಿಪಕ್ಷ ಕಾಂಗ್ರೆಸ್ ಕಳವಳ, ತೀವ್ರ ವಿರೋಧ ಹಾಗೂ ಸಭಾತ್ಯಾಗದ ನಡುವೆ 2020ನೇ ಸಾಲಿನ ಕರ್ನಾಟಕ ಆರ್ಥಿಕ ಹೊಣೆಗಾರಿಕೆ (ತಿದ್ದುಪಡಿ) ವಿಧೇಯಕಕ್ಕೆ ವಿಧಾನಸಭೆ ಅನುಮೋದನೆ ನೀಡಿದೆ. ಸಾಲ ಮಾಡುವ ಪ್ರಮಾಣ ಹೆಚ್ಚಿಸಿ ರಾಜ್ಯವನ್ನು ಸಂಕಷ್ಟಕ್ಕೆ ದೂಡಬೇಡಿ ಎಂದು ಪಟ್ಟುಹಿಡಿದ ಪ್ರತಿಪಕ್ಷ,

ಜಿಎಸ್​ಡಿಪಿ ಮೇಲೆ ಶೇ.3ರಿಂದ 5ಕ್ಕೆ ಹೆಚ್ಚಿಸಿಕೊಳ್ಳುವುದರಿಂದ ಆರ್ಥಿಕ ಪರಿಸ್ಥಿತಿ ಬಿಗಡಾಯಿಸಲಿದೆ ಎಂದು ಪಟ್ಟು ಹಿಡಿಯಿತು. ಇದಕ್ಕೆ ಪ್ರತಿಯಾಗಿ ಆಡಳಿತ ಪಕ್ಷದ ಕಡೆಯಿಂದ ಸಾಲ ಹೆಚ್ಚಿಸಿಕೊಳ್ಳುವ ಸಮಜಾಯಿಷಿ ನೀಡುವ ಜತೆಗೆ ಸಾಲ ಮಾಡುವ ಅನಿವಾರ್ಯತೆ ಪ್ರತಿಪಾದನೆಯಾಯಿತು.

ವಿಧೇಯಕದ ಪರ್ಯಾಲೋಚನೆ ಆರಂಭದಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೃಷ್ಣಬೈರೇಗೌಡ ಸಾಲ ಹೆಚ್ಚಿಸಿಕೊಳ್ಳುವುದರಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಮೇಲೆ ಆಗುವ ಗಂಭೀರ ಪರಿಣಾಮವನ್ನು ಎಳೆಎಳೆಯಾಗಿ ವಿವರಿಸಿದರು. ಶೇ.3ರ ಮಿತಿಯಲ್ಲಿದ್ದಾಗ ಹೊಣೆಗಾರಿಕೆ 46 ಸಾವಿರ ಕೋಟಿ ರೂ. ಆಗಲಿದ್ದು, ಶೇ.5 ಆದರೆ 93 ಸಾವಿರ ಕೋಟಿ ರೂ. ತಲುಪಲಿದೆ. ಈಗಿನ ಸಂದರ್ಭದಲ್ಲಿ ಬದ್ಧ ವೆಚ್ಚ ಶೇ.90 ಮುಟ್ಟಿದ್ದು, ಅಭಿವೃದ್ಧಿ ಕಾರ್ಯಕ್ಕೆ ಎಲ್ಲಿದೆ ಹಣ ಎಂದು ಪ್ರಶ್ನಿಸಿದರು.

ಸರ್ಕಾರಿ ನೌಕರರ ಸಂಬಳ, ಪಿಂಚಣಿ, ಬಡ್ಡಿ ಪಾವತಿ ಮಾಡಿದರೆ ಅಭಿವೃದ್ಧಿ ಕಾರ್ಯಕ್ಕೆ ಶೇ.10 ಹಣ ಸಹ ಉಳಿಯುವುದಿಲ್ಲ. ಬಡವರಿಗೆ ಮನೆ ಕಟ್ಟಲು, ರಸ್ತೆ ಅಭಿವೃದ್ಧಿ, ನೀರಾವರಿ ಯೋಜನೆ, ಕಲ್ಯಾಣ ಕಾರ್ಯಕ್ರಮಗಳು ಹೇಗೆ ನಡೆಸುತ್ತೀರಿ? ಈ ಬಾರಿಯ ಬಜೆಟ್​ನಲ್ಲಿಯೇ 50 ಸಾವಿರ ಕೋಟಿ ರೂ. ಸಾಲ ಪಡೆಯಲು ಯೋಜಿಸಲಾಗಿತ್ತು. ಈ ಹಣ ಎಲ್ಲ ಸಂಬಳ, ಪಿಂಚಣಿ, ಬಡ್ಡಿ ಪಾವತಿಗೆ ಹೋಗಲಿದೆ. ಹೀಗಾದರೆ ಉಳಿಯುವುದೆಲ್ಲಿ. ಇದು ರಾಜ್ಯದ ಪ್ರಶ್ನೆ. ರಾಜ್ಯದ ಆರೂವರೆ ಕೋಟಿ ಜನರ ಪ್ರಶ್ನೆ. ರಾಜ್ಯದ ಜನರು ಮುಖ್ಯ, ಪ್ರತಿಪಕ್ಷವಾಗಿ ಅವರ ರಕ್ಷಣೆ ನಮ್ಮ ಜವಾಬ್ದಾರಿ. ಮುಂದಿನ ವರ್ಷಗಳಲ್ಲಿ ಹೊರೆ ಹೆಚ್ಚಾಗುತ್ತಾ ಹೋಗುತ್ತದೆ. ಹೀಗಾಗಿ ಸರ್ಕಾರವನ್ನು ಎಚ್ಚರಿಸುತ್ತಿದ್ದೇನೆ. ಇದು ರಾಜಕೀಯ ವಿಷಯವಲ್ಲ ಎಂದರು.

ಕೇಂದ್ರವೇ ಸಾಲ ಮಾಡಿ ಕೊಡಲಿ, ರಾಜ್ಯದ ಮೇಲೆ ಏಕೆ ಹೊರೆ. ಕ್ಷಮಿಸಿ, ಇದು ಕೇಂದ್ರದ ಬೇಜವಾಬ್ದಾರಿತನ. ರಾಜ್ಯಗಳ ಮೇಲೆ ಹೊರೆಯನ್ನು ವರ್ಗಾಯಿಸುವ ಕುತಂತ್ರ ಎಂದು ಟೀಕಿಸಿದರಲ್ಲದೆ, ಈ ರೀತಿ ಸಾಲ ಮಾಡಲಿಕ್ಕೆ ನಮ್ಮ ಶಾಸಕರನ್ನು ರಾಜೀನಾಮೆ ಕೊಡಿಸಿ ಅಧಿಕಾರಕ್ಕೆ ಬಂದಿರಾ? ಸಾಲ ಮಾಡುವುದು ಅಭಿವೃದ್ಧಿ ಕಾರ್ಯಕ್ಕೆ ಎನ್ನುತ್ತಿದ್ದೀರಾ, ಅದನ್ನು ಒಪ್ಪಬೇಕಾ? ಎಂದು ಪ್ರಶ್ನಿಸಿದರು.

ದುಡ್ಡು ಸಿಗುತ್ತೆ ಎಂದು ಸಾಲ ತೆಗೆದುಕೊಳ್ಳುವುದಲ್ಲ. ಅವಶ್ಯಕತೆ, ಸಾಮರ್ಥ್ಯ ಇದ್ದರಷ್ಟೇ ಮಾಡಬೇಕು. ವೆಚ್ಚ ಕಡಿಮೆ ಮಾಡುವ ನಿರ್ಧಾರ ತೆಗೆದುಕೊಳ್ಳಲು ಸರಿಯಾದ ಸಮಯ. ಕ್ರಮಕೈಗೊಳ್ಳಿ, ನಾವು ನೀವು ಶಾಶ್ವತ ಅಲ್ಲ. | ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ

ಸರ್ಕಾರದ ಸಮಜಾಯಿಷಿ

ಪ್ರತಿಪಕ್ಷ ನಾಯಕರ ಎಲ್ಲ ಅಭಿಪ್ರಾಯಕ್ಕೆ ಸಹಮತ ಇದೆ. ವೆಚ್ಚ ಕಡಿತ ಮಾಡಬೇಕಾಗುತ್ತದೆ. ಈ ನಡುವೆ ಕರೊನಾದಿಂದ ಆಕಸ್ಮಿಕ ಸಂದರ್ಭ ಎದುರಾಗಿದೆ, ಒಂದು ವರ್ಷಕ್ಕೆ ಸೀಮಿತವಾಗಿ ಸಾಲ ಮಾಡಿ ಕೊಳ್ಳಲು ಅವಕಾಶ ಮಾಡಕೊಡಲಾಗುತ್ತಿದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಸಮಜಾಯಿಷಿ ನೀಡಿದರು. ಸುಭೀಕ್ಷ ಕಾಲದಲ್ಲಿ ಸಾಲ ಮಾಡಲಾಗಿದೆ. ಈಗ ಸಂಕಷ್ಟ ಪರಿಸ್ಥಿತಿ ಇದೆ. ಜಿಎಸ್​ಟಿ ನಿರೀಕ್ಷಿತ ಮಟ್ಟದಲ್ಲಿ ಬರುತ್ತಿಲ್ಲ. ಹಾಗೆಂದು ನಿಂತಲ್ಲೇ ನಿಲ್ಲಲು ಆಗಲ್ಲ. ಅಭಿವೃದ್ಧಿ ಕೆಲಸ ಆಗಬೇಕು. ಸರ್ಕಾರ ನಡೆಸಲೇ ಬೇಕು. ಎಲ್ಲರ ಸಲಹೆ ತೆಗೆದುಕೊಳ್ಳುತ್ತೇವೆ. ಪ್ರಕೃತಿ ನಮಗೆ ಸಹಕಾರ ಕೊಡುತ್ತಿಲ್ಲ ಎಂಬ ಬೇಸರವಿದೆ. ಸಾಲ ಮಾಡುವ ಚಟವಿಲ್ಲ. ಜನರ ಮೇಲೆ ತಲೆ ಕಂದಾಯ ಹೆಚ್ಚಿಸಿ ತುಘಲಕ್ ಸರ್ಕಾರ ಮಾಡಬೇಕೆಂದೂ ಇಲ್ಲ ಎಂದರು.

ಸಿದ್ದರಾಮಯ್ಯ ಚುಚ್ಚುಮದ್ದು

  1. ಬದ್ಧತಾ ವೆಚ್ಚ ಕಡಿಮೆ ಮಾಡಲೇಬೇಕು. ಇಲ್ಲವಾದರೆ ಮುಂದೆ ಬಹಳ ಕಷ್ಟವಾಗಲಿದೆ. ಈಗಲಾದರೂ ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಿ.

2. ತೆರಿಗೆಯೇತರ ಆದಾಯ ಹೆಚ್ಚಿಸಲು ಕ್ರಮಕೈಗೊಳ್ಳಬೇಕು. ಅನಗತ್ಯ ಹುದ್ದೆ ರದ್ದು ಮಾಡಿ. ಜಿಲ್ಲೆಗಳಲ್ಲಿ ಕ್ಲಾಸ್ ಒನ್ ಅಧಿಕಾರಿ ಗಳಾದ ಜಂಟಿ ನಿರ್ದೇಶಕ, ಉಪ ನಿರ್ದೇಶಕ ಎರಡು ಹುದ್ದೆ ಏಕೆ ಬೇಕು? ವಿಭಾಗೀಯ ಆಯುಕ್ತರು ಏಕೆ ಬೇಕು? ಫೈಲ್​ಗಳ ನಿರ್ವಹಣಾ ವ್ಯವಸ್ಥೆಯಲ್ಲಿ ಬದಲಾವಣೆ ತಂದು ಜಂಪ್ ಮಾಡಿಸಿ.

3. ಕೇಂದ್ರದಿಂದ ಜಿಎಸ್​ಟಿ ನಷ್ಟ ಪರಿಹಾರ ಬಾಕಿ ಕೇಳದೆ ಏಕೆ ಸುಮ್ಮನಿ ದ್ದೀರಾ? ಹಣಕಾಸು ಆಯೋಗದ ಸಲಹೆಯಂತೆ 5495 ಕೋಟಿ ರೂ. ವಿಶೇಷ ನಷ್ಟ ಪರಿಹಾರ ಸಣ್ಣ ಮೊತ್ತವಲ್ಲ.

4. ಕೇಂದ್ರದ ಜತೆ ಗುದ್ದಾಡಲೇಬೇಕು. ಯಾವುದೇ ಪಕ್ಷ ಇರಲಿ. ಇಲ್ಲಿ ರಾಜಕೀಯ ಬಣ್ಣ, ರಾಜಕೀಯ ದೃಷ್ಟಿಕೋನ ಬೇಡ. ನೀವು ಪತ್ರ ಬರೆದಿರಬಹುದು, ಅಷ್ಟು ಸಾಕೇ? ನಮ್ಮನ್ನೂ ಕರೆಯಿರಿ ನಿಯೋಗ ಹೋಗೋಣ. 15ನೇ ಹಣಕಾಸು ಆಯೋಗದ ಶಿಫಾರಸಿನಂತೆ ಏಕೆ ನೆರವು ಕೊಡಲಿಲ್ಲ ಎಂದು ಕೇಳೋಣ.

5. ಪೊಲೀಸ್ ಅಧಿಕಾರಿಗಳು ಎಷ್ಟು ಸಿಬ್ಬಂದಿಯನ್ನು ಆರ್ಡರ್ಲಿ ಪದ್ಧತಿಯಲ್ಲಿ ಬಳಸುತ್ತಿದ್ದಾರೆ, ಕೆಲವರು 8-9 ಮಂದಿ ಬಳಸು ತ್ತಿದ್ದಾರೆ. ಕನಿಕರ ರಹಿತವಾಗಿ ಅವರನ್ನು ವಾಪಸ್ ಪಡೆಯಿರಿ.

6. ಇಲಾಖೆ ಮುಖ್ಯಸ್ಥರೊಬ್ಬರು ಕಳಿಸಿದ ಕಡತವನ್ನು ಅಧೀನ ಕಾರ್ಯದರ್ಶಿ, ಉಪ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಕಾರ್ಯದರ್ಶಿ, ಹೆಚ್ಚುವರಿ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿವರೆಗೆ ಒಂದೇ ಕಡತವನ್ನು ಪಾಸ್ ಮಾಡುವುದೇಕೆ. ಇದೆಲ್ಲವನ್ನೂ ತೆಗೆದು ಹಾಕಿ.

7. ಆರ್ಥಿಕವಾಗಿ ಬಹಳ ಕೆಟ್ಟ ಪರಿಸ್ಥಿತಿಯಲ್ಲಿದ್ದೇವೆ. ಅಭಿವೃದ್ಧಿ ಕಾರ್ಯಗಳನ್ನು ಒಂದು ವರ್ಷಕ್ಕೆ ನಿಲ್ಲಿಸಿ. ಈಗಾಗಲೇ ಶಾಸಕರು ಸರ್ಕಾರ ಹಣ ಕೊಟ್ಟಿಲ್ಲ ಎಂದು ಎಲ್ಲಕಡೆ ಹೇಳಿಕೊಂಡು ಬಂದಿದ್ದಾರೆ.

ಅಂಗೀಕಾರವಾದ ವಿಧೇಯಕಗಳು

-ಠಿ;ಬಿ ಕರಾಬು ಒತ್ತುವರಿದಾರರಿಗೆ ಸಕ್ರಮ. ನಗರ ಪ್ರದೇಶಕ್ಕೆ ಸೀಮಿತಗೊಳಿಸುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ವಿಧೇಯಕ -ಠಿ;ಡೀಮ್ಡ್ ಅರಣ್ಯವನ್ನು ಕಂದಾಯ ಭೂಮಿಯಾಗಿ ಪರಿವರ್ತನೆ ವಿಧೇಯಕ -ಠಿ;ಎಲೆಕ್ಟ್ರಿಕ್ ವಾಹನಗಳ ಸ್ಟಾ್ಯಂಪ್ ಡ್ಯೂಟಿ ರಿಯಾಯಿತಿಗೆ ವಿಧೇಯಕ -ಠಿ;ಎಪಿಎಂಸಿ ತಿದ್ದುಪಡಿ ವಿಧೇಯಕ -ಠಿ;ಘನತ್ಯಾಜ್ಯ ವಿಲೇವಾರಿಯಲ್ಲಿ ಲೋಪವಾದರೆ 2 ಲಕ್ಷ ದಂಡ ವಿಧಿಸುವ ಪೌರಸಂಸ್ಥೆಗಳ ವಿಧೇಯಕ -ಠಿ;ಸಾಲದ ಪ್ರಮಾಣ ಹೆಚ್ಚಳ ಮಾಡಿಕೊಳ್ಳುವ ವಿತ್ತೀಯ ಹೊಣೆಗಾರಿಕೆ ತಿದ್ದುಪಡಿ ವಿಧೆಯಕ

ಪಂಚಾಯತ್​ರಾಜ್ ತಿದ್ದುಪಡಿಗೆ ದಳ ಬೆಂಬಲ

ಪಂಚಾಯತ್​ರಾಜ್ ಸಂಸ್ಥೆಗಳಲ್ಲಿ ಮೀಸಲಾತಿ ಅವಧಿ ಕಡಿಮೆ ಮಾಡುವ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕಕ್ಕೆ ಕಾಂಗ್ರೆಸ್ ವಿರೋಧದ ನಡುವೆಯೂ ಜೆಡಿಎಸ್ ಬೆಂಬಲದೊಂದಿಗೆ ವಿಧಾನಸಭೆಯಲ್ಲಿ ಅಂಗೀಕಾರಗೊಂಡಿತು. ಗ್ರಾಪಂ, ತಾಪಂ, ಜಿಪಂಗಳ ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿ 5 ವರ್ಷದ ಬದಲಿಗೆ ಎರಡೂವರೆ ವರ್ಷಕ್ಕೆ (30 ತಿಂಗಳು) ಸೀಮಿತ ಮಾಡಲಾಗಿದೆ. ಕ್ಷೇತ್ರಗಳ 10 ವರ್ಷದ ಮೀಸಲಾತಿ ಅವಧಿಯನ್ನು 5 ವರ್ಷಕ್ಕೆ ಇಳಿಸಲಾಗಿದೆ.

ಕೈಗಾರಿಕಾ ವಿವಾದ ಕಾಯ್ದೆಗೆ ಒಪ್ಪಿಗೆ: ಕೈಗಾರಿಕಾ ವಿವಾದಗಳ ತಿದ್ದುಪಡಿ ಕಾಯಿದೆಗೆ ವಿಧಾನಸಭೆ ಒಪ್ಪಿಗೆ ನೀಡಿದ್ದು, ಇದರಿಂದ ಕಾರ್ವಿುಕರಿಗೆ ಕೆಲಸದ ಅವಧಿ ಹೆಚ್ಚಿಸಲಾಗಿದೆ. ಉದ್ಯೋಗ ಮಾಡುವವರು ಇಚ್ಛಿಸಿದಲ್ಲಿ ಹೆಚ್ಚುವರಿ ಕೆಲಸಕ್ಕೆ ಈ ಕಾಯಿದೆ ಅವಕಾಶ ಮಾಡಿಕೊಡಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net