ಶಾಹೆನ್‌ಶಾ ಪರಿಕಲ್ಪನೆ… ರಾಷ್ಟ್ರಪತಿ ಭವನದ ನಡೆಗೆ ಪ್ರಿಯಾಂಕಾ ಗಾಂಧಿ ವ್ಯಂಗ್ಯ

Untitled-design-83
Published on

ನವದೆಹಲಿ: ರಾಷ್ಟ್ರಪತಿ ಭವನವು ದರ್ಬಾರ್ ಹಾಲ್ ಮತ್ತು ಅಶೋಕ ಹಾಲ್ ಹೆಸರನ್ನು ಬದಲಾಯಿಸಿರುವುದಾಗಿ ಗುರುವಾರ (ಜುಲೈ 25) ತಿಳಿಸಿದೆ. ಇನ್ನು ಮುಂದೆ ದರ್ಬಾರ್ ಹಾಲ್ ಅನ್ನು ಗಣತಂತ್ರ ಮಂಟಪ ಎಂದೂ ಅಶೋಕ ಹಾಲ್ ಅನ್ನು ಅಶೋಕ ಮಂಟಪ ಎಂದು ಕರೆಯಲಾಗುವುದು. ಈ ಬಗ್ಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಗುರುವಾರ(ಜುಲೈ 25) ವಾಗ್ದಾಳಿ ನಡೆಸಿದರು.

ದೇಶದಲ್ಲಿ ಶಾಹೆನ್‌ಶಾ (ರಾಜ) ಪರಿಕಲ್ಪನೆಯು ಇನ್ನೂ ಅಸ್ತಿತ್ವದಲ್ಲಿದೆ. ದರ್ಬಾರ್ ಪರಿಕಲ್ಪನೆ ಇಲ್ಲ ಆದರೆ ಶಾಹೆನ್‌ಶಾ ಪರಿಕಲ್ಪನೆ ಇದೆ ವ್ಯಂಗ್ಯ ಮಾಡಿದ್ದಾರೆ. ಅವರು ಕೋಟೆಗಳಲ್ಲಿ ವಾಸಿಸುತ್ತಾರೆ ಮತ್ತು ಸಾಮಾನ್ಯ ಜನರ ಕಷ್ಟವನ್ನು ಎಂದಿಗೂ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಟೀಕಿಸಿದ್ದಾರೆ.

ರಾಷ್ಟ್ರಪತಿ ಭವನದ ಎರಡು ಪ್ರಮುಖ ಸಭಾಂಗಣಗಳಾದ ದರ್ಬಾರ್ ಹಾಲ್ ಮತ್ತು ಅಶೋಕ್ ಹಾಲ್ ಅನ್ನು ಕ್ರಮವಾಗಿ ಗಣತಂತ್ರ ಮಂಟಪ ಮತ್ತು ಅಶೋಕ ಮಂಟಪ ಎಂದು ಮರುನಾಮಕರಣ ಮಾಡಲಾಗಿದೆ. ಮರುನಾಮಕರಣವು ರಾಷ್ಟ್ರಪತಿ ಭವನದ ವಾತಾವರಣವನ್ನು ಭಾರತೀಯ ಸಾಂಸ್ಕೃತಿಕ ಮೌಲ್ಯಗಳು ಮತ್ತು ನೈತಿಕತೆಯನ್ನು ಪ್ರತಿಬಿಂಬಿಸುವ ನಿರಂತರ ಪ್ರಯತ್ನದ ಭಾಗವಾಗಿದೆ ಎಂದು ಅಧ್ಯಕ್ಷರ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಪ್ರಾಚೀನ ಕಾಲದಿಂದಲೂ ಭಾರತೀಯ ಸಮಾಜದಲ್ಲಿ ಆಳವಾಗಿ ಬೇರೂರಿರುವ ಗಣತಂತ್ರ ಪರಿಕಲ್ಪನೆಯ ಮೂಲಕ ರಾಷ್ಟ್ರೀಯ ಪ್ರಶಸ್ತಿ ಪ್ರದಾನದಂತಹ ಪ್ರಮುಖ ಸಮಾರಂಭಗಳು ಮತ್ತು ಆಚರಣೆಗಳನ್ನು ನಡೆಸುವ ಸ್ಥಳವಾದ ದರ್ಬಾರ್ ಹಾಲ್ ಅನ್ನು ಗಣತಂತ್ರ ಮಂಟಪ ಎಂದು ಮರುನಾಮಕರಣ ಮಾಡಲಾಗಿದೆ ಎಂದು ರಾಷ್ಟ್ರಪತಿ ಭವನದ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಕಳೆದ ವರ್ಷವಷ್ಟೇ ಕೇಂದ್ರದ ಮೋದಿ ಸರ್ಕಾರ ರಾಜಪಥದ ಹೆಸರನ್ನು ಕರ್ತವ್ಯಪಥ ಎಂದು ಬದಲಾಯಿಸಿತ್ತು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net