

ಬೆಂಗಳೂರು: ದಸ್ತಾವೇಜು ನೋಂದಣಿ ವೇಳೆ ರಾಜಸ್ವ ಸಂಗ್ರಹದಲ್ಲಿ ಲೋಪ ಎಸಗಿ ಬೊಕ್ಕಸಕ್ಕೆ 11.41 ಕೋಟಿ ರೂ. ನಷ್ಟ ಉಂಟು ಮಾಡಿದ ಆರೋಪದಡಿ ಸಬ್ ರಿಜಿಸ್ಟ್ರಾರ್ ರಾಘವೇಂದ್ರ ಒಡೆಯರ್‌ನ್ನು ಸೇವೆಯಿಂದ ಕಡ್ಡಾಯ ನಿವೃತ್ತಿಗೊಳಿಸಿ ಸರ್ಕಾರ ಆದೇಶಿಸಿದೆ.
ತುಮಕೂರಿನ ಚಿಕ್ಕನಾಯಕನಹಳ್ಳಿ ಉಪ ನೋಂದಣಿ ಕಚೇರಿ ಸಬ್ ರಿಜಿಸ್ಟ್ರಾರ್ ರಾಘವೇಂದ್ರ ಒಡೆಯರ್, ಈ ಹಿಂದೆ ಕಾಚರಕನಹಳ್ಳಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. 2022ರ ನ.10ರಂದು ನೋಂದಣಿಯಾದ ಕ್ರಯಪತ್ರ ರದ್ದುಪಡಿಸಿರುವುದಾಗಿ ನಮೂದಿಸಿದ್ದರು. ಮುದ್ರಾಂಕ ಕಾಯ್ದೆ 1957ರ ಅನುಚ್ಛೇದ 14ರ ಅನ್ವಯ ಸ್ವತ್ತಿನ ಮಾರುಕಟ್ಟೆ ಮೌಲ್ಯಕ್ಕೆ ಶೇ.5.6 ಮುದ್ರಾಂಕ ಶುಲ್ಕ ಮತ್ತು ಶೇ.1 ನೋಂದಣಿ ಶುಲ್ಕ ಸ್ವೀಕರಿಸಬೇಕು. ಕ್ರಯ ಪತ್ರದಲ್ಲಿ ನಮೂದಿಸಿದಂತೆ 4 ಕೋಟಿ ರೂ. ಮಾರುಕಟ್ಟೆ ಮೌಲ್ಯಕ್ಕೆ 22.40 ಲಕ್ಷ ರೂ. ಮುದ್ರಾಂಕ ಮತ್ತು 4 ಲಕ್ಷ ರೂ. ನೋಂದಣಿ ಶುಲ್ಕ ವಸೂಲಿ ಮಾಡಬೇಕಿತ್ತು. ಆದರೆ, ಮುದ್ರಾಂಕ ಶುಲ್ಕ 500 ರೂ. ಮತ್ತು ನೋಂದಣಿ ಶುಲ್ಕ 200 ರೂ. ಮಾತ್ರ ಸ್ವೀಕರಿಸಿದ್ದಾರೆ. ಇದರಿಂದ 26.39 ಲಕ್ಷ ರೂ. ರಾಜಸ್ವ ನಷ್ಟ ಉಂಟಾಗಿದೆ. ನೋಂದಣಿ ವೇಳೆ ಪಕ್ಷಕಾರರ ಭಾವಚಿತ್ರ, ಹೆಬ್ಬೆಟ್ಟಿನ ಗುರುತು ಮತ್ತು ಸಹಿಯನ್ನು ದಸ್ತಾವೇಜಿನ ಹಿಂಬರಹದಲ್ಲಿ ಕಾವೇರಿ ತಂತ್ರಾಶದಿಂದ ಪಡೆದಿಲ್ಲ. ಬದಲಿಗೆ ನಕಲಿ ವ್ಯಕ್ತಿಗಳನ್ನು ಸೃಷ್ಟಿಸಿ ನೋಂದಾಯಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಐದು ಸ್ವತ್ತಿನ ಸಂಬಂಧ ಸ್ವಾಧೀನ ಸಹಿತ ಕ್ರಯದ ಕರಾರು ಪತ್ರಗಳಿಗೆ ತಿದ್ದುಪಡಿ ಪತ್ರವನ್ನು ಮಾಡಿದ್ದಾರೆ. ಅಂತರ್ಜಾಲದ ಮೂಲಕ ಪಡೆದ ಆರ್‌ಟಿಸಿಗೂ ಮತ್ತು ನೋಂದಣಿ ಮಾಡಿದ ಪತ್ರದಲ್ಲಿನ ಹೆಸರಿಗೂ ತಾಳೆ ಆಗುತ್ತಿಲ್ಲ. ತಿದ್ದುಪಡಿ ಪತ್ರಗಳನ್ನು ಸ್ಪೆಷಲ್ ಪವರ್ ಆ್ ಅಟಾರ್ನಿ ಮುಖಾಂತರ ನೋಂದಾಯಿಸಿದ್ದು, ಅಧಿಕಾರ ಪತ್ರಗಳ ಕೆನಡಾ ರಾಯಭಾರಿ ಕಚೇರಿಯ ಮುದ್ರೆ ಇದೆ. ಹೊರದೇಶದಲ್ಲಿ ಎಕ್ಸಿಕ್ಯೂಟ್ ಆಗಿದ್ದು, ಜಿಪಿಎ ಪತ್ರಗಳಿಗೆ ಮುದ್ರಾಂಕ ಕಾಯ್ದೆ ಅನ್ವಯ ಅಡ್ಜುಡಿಕೇಷನ್ ಮಾಡಿರುವುದಿಲ್ಲ. ಆದರಿಂದ ಅಧಿಕೃತ ನೋಂದಣಿಗೆ ಪರಿಗಣಿಸಲು ಅವಕಾಶ ಇರುವುದಿಲ್ಲ.
ಜಿಪಿಎ ಪತ್ರಗಳಲ್ಲಿ ಕುಟುಂಬದ ಹೊರಗಿನ ವ್ಯಕ್ತಿಗಳಿಗೆ ಕೊಟ್ಟಿರುವ ಕಾರಣಕ್ಕೆ ಸರ್ಕಾರಕ್ಕೆ ಮುದ್ರಾಂಕ ಮತ್ತು ನೋಂದಣಿ ಶುಲ್ಕ 11.15 ಕೋಟಿ ರೂ. ನಷ್ಟ ಉಂಟಾಗಿದೆ. ಈ ಕುರಿತು ಸಬ್ ರಿಜಿಸ್ಟ್ರಾರ್ ರಾಘವೇಂದ್ರ ಒಡೆಯರ್‌ಗೆ ಸಮಜಾಯಿಷಿ ಕೋರಿ ನೋಟಿಸ್ ನೀಡಲಾಗಿತ್ತು. ಆರೋಪಿತ ಅಧಿಕಾರಿ ನೀಡಿದ ಉತ್ತರ ಸಮಪರ್ಕವಾಗಿಲ್ಲ. ಎರಡು ಗಂಭೀರ ಪ್ರಕರಣಗಳಲ್ಲಿ ಕಾನೂನು ಬಾಹಿರವಾಗಿ ದಸ್ತಾವೇಜುಗಳನ್ನು ನೋಂದಾಯಿಸಿ ಸರ್ಕಾರಕ್ಕೆ ರಾಜಸ್ವ ನಷ್ಟ ಉಂಟು ಮಾಡಿದ ಆರೋಪದ ಮೇಲೆ ರಾಘವೇಂದ್ರ ಒಡೆಯರ್‌ಗೆ ಸೇವೆಯಿಂದ ಕಡ್ಡಾಯ ನಿವೃತ್ತಿಗೊಳಿಸಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತ ಕೆ.ಎ. ದಯಾನಂದ್ ಆದೇಶಿಸಿದ್ದಾರೆ.