ಫಲಾನುಭವಿಗಳಿಂದ ಸೌರ ವಿದ್ಯುತ್ ಖರೀದಿ ಕಡ್ಡಾಯ ಕಾಯ್ದೆ: ಸಚಿವ ಪ್ರಲ್ಹಾದ ಜೋಶಿ

Pralhad Joshi program
Published on

ಬೆಂಗಳೂರು: ಪಿಎಂ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆ (ಪಿಎಸ್‌ಜಿಎಂಬಿವೈ)ಯಡಿ ಮನೆ ಚಾವಣಿ ಮೇಲೆ ಸೌರ ಲಕ ಅಳವಡಿಸಿಕೊಂಡ ಫಲಾನುಭವಿಗಳಿಗೆ ಉತ್ತೇಜಿಸಲು ಕೇಂದ್ರ ಸರ್ಕಾರ ಇನ್ನೊಂದು ದಿಟ್ಟ ಹೆಜ್ಜೆಯಿಡುತ್ತಿದೆ.

ಸೂರಿನ ಮೇಲೆ ಸೌರಶಕ್ತಿಯಿಂದ ಉತ್ಪಾದಿತ ಮನೆಗೆ ಬಳಸಿಕೊಂಡ ನಂತರವೂ ಹೆಚ್ಚುವರಿಯಾಗಿ ಲಭ್ಯ ವಿದ್ಯುತ್‌ನ್ನು ಎಸ್ಕಾಂಗಳು ಖರೀದಿಸುವುದು ಶೀಘ್ರ ಕಡ್ಡಾಯವಾಗಲಿದೆ. ಇದಕ್ಕಾಗಿ ಅಧಿಕಾರಿ ವರ್ಗದಮಟ್ಟದಲ್ಲಿ ಚರ್ಚೆಗಳು ನಡೆದಿವೆ.

ಫಲಾನುಭವಿಗಳಿಗೆ ಅನುಕೂಲ ಮಾಡಿಕೊಡಲು ಸಂಬಂಧಿಸಿದ ಕಾಯ್ದೆಗೆ ತಿದ್ದುಪಡಿ ಕರಡು ಸಿದ್ಧವಾಗುತ್ತಿದೆ. ಇಷ್ಟರಲ್ಲೇ ಅಂತಿಮವಾಗಲಿದೆ ಎಂದು ಕೇಂದ್ರ ಹೊಸ, ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಮಾಹಿತಿ ನೀಡಿದರು.

ಸ್ಥಳೀಯ ಖಾಸಗಿ ಹೋಟೆಲ್‌ನಲ್ಲಿ ರಾಜ್ಯದ ನವೀಕರಿಸಬಹುದಾದ ಇಂಧನ ಉತ್ಪಾದಕರ ಸಂಘ ಮತ್ತು ಬಿಜೆಪಿ ವಾಣಿಜ್ಯ-ವ್ಯಾಪಾರ ಪ್ರಕೋಷ್ಠ ಜಂಟಿಯಾಗಿ ಪಿಎಸ್‌ಜಿಎಂಬಿವೈ ಜಾಗೃತಿ ಮತ್ತು ಸಂವಾದ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

ತಾಂತ್ರಿಕ ಅಡಚಣೆ ನಿವಾರಣೆ

ಸೂರ್ಯಘರ್ ಯೋಜನೆಯಡಿ ಅರ್ಜಿ ಸಲ್ಲಿಸಿದ ಅರ್ಹ ಲಾನುಭವಿಗಳಿಗೆ ಸೌರ ಘಟಕವನ್ನು ತ್ವರಿತವಾಗಿ ಅಳವಡಿಸಲು ಒತ್ತು ನೀಡಲಾಗುತ್ತಿದೆ. ಕ್ಷೇತ್ರ ಕಾರ್ಯದ ಆಡಳಿತಾತ್ಮಕ, ತಾಂತ್ರಿಕ ಅಡಚಣೆ ನಿವಾರಿಸಿ ಎಸ್ಕಾಂಗಳಿಗೆ ಸ್ಪಷ್ಟ ಜವಾಬ್ದಾರಿ ಗೊತ್ತುಪಡಿಸಲಾಗುವುದು ಎಂದರು.

ಎಲ್ಲ ವರ್ಗದವರು ಸೂರ್ಯಘರ್ ಉಚಿತ ವಿದ್ಯುತ್ ಯೋಜನೆ ಲಾಭ ಪಡೆಯಲು ಅವಕಾಶವಿದೆ. ಬಡವರು, ಕೆಳ ಹಾಗೂ ಮಧ್ಯಮ ವರ್ಗದವರು ಸೂರಿನ ಮೇಲೆ ಸೌರ ಲಕ ಅಳವಡಿಸಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಸಾಧ್ಯವಿದೆ.

ಈ ಹಿನ್ನೆಲೆಯಲ್ಲಿ ನರೇಂದ್ರ ಮೋದಿಯವರು ಹಸಿರು ಇಂಧನ ಕ್ರಾಂತಿ ಭಾಗವಾಗಿ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆಗೆ ಹೆಚ್ಚು ಆದ್ಯತೆ ನೀಡಿದ್ದಾರೆ. ಫಲಾನುಭವಿಗಳು ತಮಗೆ ಬೇಕಾದಷ್ಟು ವಿದ್ಯುತ್ ಬಳಸಿಕೊಂಡು ಹೆಚ್ಚುವರಿಯಾದದ್ದನ್ನು ಎಸ್ಕಾಂಗಳಿಗೆ ಮಾರಾಟ ಮಾಡಿ ಹಣ ಗಳಿಸಲು ಅವಕಾಶವಿದೆ ಎಂದು ಪ್ರಲ್ಹಾದ ಜೋಶಿ ತಿಳಿಸಿದರು.

ಭಾರತೀಯ ಸಂಸ್ಕೃತಿಯಲ್ಲಿ ಸೂರ್ಯ ಆರಾಧ್ಯ ದೈವ. ಹಾಗೆಯೇ ಸೂರ್ಯನಲ್ಲಿರುವ ಶಕ್ತಿ ಬಳಕೆ ಮಾಡಿಕೊಂಡು ಸಬಲರಾಗಲು ಯೋಜನೆ ರಹದಾರಿಯಾಗಿದೆ. ಸ್ವಾವಲಂಬಿ, ಆರ್ಥಿಕವಾಗಿ ಸದೃಢ, ನೆಮ್ದಿ ಜೀವನಕ್ಕೆ ಉಪಯುಕ್ತವಾಗಿದೆ ಎಂದರು.

ಸಂವಾದದ ವೇಳೆ ಆಯೋಜಕರ ಹಲವು ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಅನುಷ್ಠಾನ ಸಂದರ್ಭದ ಅಡೆತಡೆ, ಓರೆಕೋರೆಗಳನ್ನು ತಿದ್ದಲು ಕೇಂದ್ರ ಸರ್ಕಾರ ಮುಕ್ತ ಮನಸ್ಸು ಹೊಂದಿದೆ.

ಕಾಲಾವಕಾಶ ಪಡೆದುಕೊಂಡು ಚರ್ಚಿಸಿ, ಪರಿಹಾರ ಕಂಡುಕೊಳ್ಳಲು ದೆಹಲಿಗೆ ಬರುವಂತೆಯೂ ಪ್ರಲ್ಹಾದ ಜೋಶಿ ಆಹ್ವಾನ ನೀಡಿದರು.

ರಾಜ್ಯದ ಎಸ್ಕಾಂಗಳು ಹಿಂದೇಟು ?

ಸೂರ್ಯಘರ್ ಉಚಿತ ವಿದ್ಯುತ್ ಯೋಜನೆಯಡಿ ರಾಜ್ಯದಲ್ಲಿ ಎರಡೂವರೆ ಲಕ್ಷಕ್ಕೂ ಅಧಿಕ ಜನರು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಆದರೆ ಎಸ್ಕಾಂಗಳು ಈವರೆಗೆ 3,500 ಸಾವಿರ ಫಲಾನುಭವಿಗಳನ್ನು ಆಯ್ಕೆ ಮಾಡಿಕೊಂಡಿವೆ.

ಎಸ್ಕಾಂಗಳು ತಮಗೆ ಬರುವ ಆದಾಯಕ್ಕೆ ಖೋತಾ ಆಗಲಿದೆ ಎಂಬ ಕಾರಣಕ್ಕೆ ಆಮೆಗತಿ ಅನುಷ್ಠಾನ, ಫಲಾನುಭವಿಗಳ ಆಯ್ಕೆಗೆ ಹಿಂದೇಟು ಹಾಕುತ್ತಿರಬಹುದೆ ? ಎಂದು ಪ್ರಲ್ಜಾದ ಜೋಶಿ ನಗುತ್ತಲೇ ಗಂಭೀರ ಪ್ರಶ್ನೆಯನ್ನೆತ್ತಿದರು.

ಬಿಜೆಪಿ ಪ್ರಕೋಷ್ಠಗಳ ರಾಜ್ಯ ಸಂಯೋಜಕ ಎಸ್.ದತ್ತಾತ್ರಿ, ರಾಜ್ಯ ನವೀಕರಿಸಬಹುದಾದ ಇಂಧನ ಉತ್ಪಾದಕರ ಸಂಘದ ಅಧ್ಯಕ್ಷ ಸುರೇಂದ್ರಕುಮಾರ್, ವಾಣಿಜ್ಯ-ವ್ಯಾಪಾರ ಪ್ರಕೋಷ್ಠದ ವಿಜಯಕುಮಾರ್ ಕುಡಿಗನೂರು, ಭವಾನಿರಾವ್ ಮೋರೆ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net