ಕುಡಿಯುವ ನೀರು ಯೋಜನೆ ತ್ವರಿತ ಪೂರ್ಣಗೊಳಿಸಿ

byv
ಬಿ.ವೈ.ವಿಜಯೇಂದ್ರ ಹಾಗೂ ಬಿ.ವೈ.ರಾಘವೇಂದ್ರ ಸೋಮವಾರ ಶಿಕಾರಿಪುರ ತಾಲೂಕು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಗುರುದತ್ತ ಹೆಗಡೆ, ಮೋಹನ್ ಕುಮಾರ್, ಎನ್.ಹೇಮಂತ್, ರೂಪ್ಲಾ ನಾಯ್ಕ ಮುಂತಾದವರಿದ್ದರು.
Published on

ಶಿವಮೊಗ್ಗ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಶೇ.50:50 ಅನುದಾನದಲ್ಲಿ ಜಲ ಜೀವನ ಮಿಷನ್ ಯೋಜನೆಯಡಿ ಶಿಕಾರಿಪುರ ತಾಲೂಕು ಅಂಜನಾಪುರ ಡ್ಯಾಂನಿಂದ 199 ಜನವಸತಿ ಪ್ರದೇಶಗಳಿಗೆ ಬಹುಗ್ರಾಮ ಕುಡಿಯುವ ನೀರು ಕಾಮಗಾರಿ ಅನುಷ್ಟಾನವಾಗುತ್ತಿದೆ. ಇದರಲ್ಲಿ ವಿಳಂಬ ಮಾಡದೇ ನಿಗದಿತ ಸಮಯದಲ್ಲಿ ಯೋಜನೆ ಪೂರ್ಣಗೊಳಿಸಬೇಕೆಂುದ ಶಿಕಾರಿಪುರ ಶಾಸಕ ಬಿ.ವೈ.ವಿಜಯೇಂದ್ರ ಅಧಿಕಾರಿಗಳಿಗೆ ಸೂಚಿಸಿದರು.

ಸೋಮವಾರ ಶಿವಮೊಗ್ಗದ ಪ್ರವಾಸಿ ಮಂದಿರದಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಸಭೆಯಲ್ಲಿ ಮಾತನಾಡಿದ ಅವರು, ಈ ಯೋಜನೆಯ ಅನುಷ್ಟಾನದಲ್ಲಿ ಈಗಾಗಲೇ ಸಾಕಷ್ಟು ವಿಳಂಬವಾಗಿದೆ. ಕಾಮಗಾರಿಯ ವೇಗವನ್ನು ಚುರುಕುಗೊಳಿಸುವಂತೆ ತಿಳಿಸಿದರು.

ಈ ಕಾಮಗಾರಿಗೆ ಸಂಬಂಧಿಸಿದಂತೆ 2023 ಮಾರ್ಚ್‌ನಲ್ಲಿ ಗುತ್ತಿಗೆ ಕರಾರಿನ ಒಪ್ಪಂದವಾಗಿತ್ತು. 2024ರ ಸೆಪ್ಟೆಂಬರ್‌ಗೆ ಇದು ಮುಕ್ತಾಯವಾಗಬೇಕಿತ್ತು. ಕೆಲವು ತಾಂತ್ರಿಕ ಕಾರಣಗಳಿಂದ ಮತ್ತು ಅರಣ್ಯ ಇಲಾಖೆ ಅನುಮತಿ ಸಿಗದ ಕಾರಣ ಕಾಮಗಾರಿ ನಿರ್ವಹಣೆ ವಿಳಂಬವಾಗಿತ್ತು. ಈ ವರ್ಷ ಡಿಸೆಂಬರ್ ಅಂತ್ಯದೊಳಗೆ ಸಾರ್ವಜನಿಕರಿಗೆ ನೀರೊದಗಿಸಲು ಕ್ರಮ ಕೈಗೊಳ್ಳಬೇಕೆಂದರು.

ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಪಂ ಸಿಇಒ ಎನ್.ಹೇಮಂತ್, ಸಾಗರ ಉಪ ವಿಭಾಗದ ಡಿಸಿಎಫ್ ಮೋಹನ್ ಕುಮಾರ್, ಗ್ರಾಮೀಣ ಕುಡಿಯುವ ನೀರು ಸರಬರಾಜು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ರೂಪ್ಲಾ ನಾಯ್ಕ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net