ಎಐ ತಂತ್ರಜ್ಞಾನದಿಂದ ಸಂಪೂರ್ಣ ಆಟೋಮೇಷನ್

jnnce National Conference
ಶಿವಮೊಗ್ಗ ಜೆಎನ್‌ಎನ್‌ಇ ಕಾಲೇಜಿನಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಐಒಟಿ ತಂತ್ರಜ್ಞಾನಗಳ ರಾಷ್ಟ್ರೀಯ ಸಮ್ಮೇಳನವನ್ನು ಮೈಸೂರು ವಿವಿ ಪ್ರಾಧ್ಯಾಪಕ ಡಾ. ಡಿ.ಎಸ್.ಗುರು ಮತ್ತು ಮಂಗಳೂರು ವಿವಿ ಪ್ರಾಧ್ಯಾಪಕ ಡಾ. ಬಿ.ಎಚ್.ಶೇಖರ್ ಉದ್ಘಾಟಿಸಿದರು. ಎಸ್.ಎನ್.ನಾಗರಾಜ, ಡಾ. ವೈ.ವಿಜಯಕುಮಾರ್, ಡಾ. ಪಿ.ಮಂಜುನಾಥ, ಡಾ. ಎಸ್.ವಿ.ಸತ್ಯನಾರಾಯಣ, ಡಾ. ಜಿ.ಪಿ.ಸುನೀತಾ, ಸಂಪತ್‌ಕುಮಾರ್ ಇದ್ದರು.
Published on

ಶಿವಮೊಗ್ಗ: ಮಾನವನ ಹಸ್ತಕ್ಷೇಪ ಕಡಿಮೆ ಮಾಡಿ ಸಂಪೂರ್ಣ ವಾತಾವರಣವನ್ನು ಆಟೋಮೇಷನ್ ಮಾಡುವಂತಹ ಶಕ್ತಿ ಕೃತಕ ಬುದ್ಧಿಮತ್ತೆ (ಆರ್ಟಿಫೀಷಿಯಲ್ ಇಂಟಲಿಜೆನ್ಸ್) ತಂತ್ರಜ್ಞಾನಕ್ಕಿದೆ ಎಂದು ಖ್ಯಾತ ಸಂಶೋಧಕ, ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಡಿ.ಎಸ್.ಗುರು ಅಭಿಪ್ರಾಯಪಟ್ಟರು.

ನಗರದ ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನ ಎಂಸಿಎ ವಿಭಾಗದಿಂದ ಸೋಮವಾರ ಕಾಲೇಜಿನ ಎಂಬಿಎ-ಎಂಸಿಎ ಸಭಾಂಗಣದಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಐಒಟಿ ತಂತ್ರಜ್ಞಾನಗಳ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಪೂರ್ವಿಕರು ಅತ್ಯದ್ಭುತ ಸಂಶೋಧನಾ ಕೌಶಲ್ಯತೆ ಹೊಂದಿದ್ದರು. ನಾಗರಿಕತೆಯ ಉದಯಕಾಲದ ಸಂದರ್ಭದಲ್ಲಿ ಮನುಷ್ಯ ತನ್ನ ಅನುಕೂಲಕ್ಕೆ ಅನುಗುಣವಾಗಿ ಪಳಗಿಸಬಲ್ಲ ವಿವಿಧ ಪ್ರಾಣಿಗಳನ್ನು ಗುರುತಿಸಿದರು. ಸಾಗಣೆಗೆ ಕುದುರೆ, ಕೃಷಿಗೆ ಎತ್ತು ಸೇರಿ ಅನೇಕ ಪ್ರಾಣಿಗಳನ್ನು ಬಳಸಿಕೊಳ್ಳುತ್ತಾ ಹೆಚ್ಚು ಲಾಭದಾಯಕ ಚಿಂತನೆಗಳತ್ತ ಅನ್ವೇಷಣೆ ನಡೆಸಿದ್ದರು ಎಂದರು.
ಅದರಂತೆ ಆಧುನಿಕತೆಯ ಯುಗದಲ್ಲಿ ಮತ್ತಷ್ಟು ಲಾಭದಾಯಕ ಅನ್ವೇಷಣೆಗಳಿಗೆ ತಂತ್ರಜ್ಞಾನಗಳು ಸ್ಪಂದಿಸುತ್ತಿದ್ದು, ಯಾಂತ್ರೀಕೃತ ವಾತಾವರಣ ನಿರ್ಮಾಣ ಮಾಡಿ ಕಡಿಮೆ ಶ್ರಮದೊಂದಿಗೆ ಹೆಚ್ಚು ಲಾಭ ನೀಡುವಂತಹ ವಿಸ್ಮಯ ಎಐ ತಂತ್ರಜ್ಞಾನದಿಂದ ಸಾಧ್ಯ. ಇಂದು ನಾವು ಬಳಸುವ ಗಣಕಯಂತ್ರಗಳು ಡೀಪ್ ಲರ್ನಿಂಗ್ ಅಳವಡಿಕೊಳ್ಳುವಂತೆ ಪ್ರೇರೆಪಿಸಲಾಗುತ್ತಿದೆ. ಆದರೆ ಯುವ ಸಮೂಹಕ್ಕೆ ಯಾವ ಅಗಾಧ ಕಲಿಕೆಗೂ ಒಳಪಡದೆ ಕೇವಲ ತಂತ್ರಜ್ಞಾನಗಳ ಬಳಕೆಗೆ ಸೀಮಿತಗೊಳಿಸಿ ಕಲಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಯುವ ಸಮೂಹ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಸ್ಮಯ ಸೃಷ್ಟಿಸುವ ಆಳವಾದ ಕಲಿಕೆ ಮತ್ತು ಕೌಶಲ್ಯಗಳ ಅಳವಡಿಕೆಯತ್ತ ಕೇಂದ್ರಿಕರಿಸಬೇಕಿದೆ. ಡೀಪ್ ಫೇಕ್‌ನಂತಹ ತಂತ್ರಜ್ಞಾನಗಳ ದುರುಪಯೋಗ ಪ್ರಕರಣಗಳು ತಡೆಯುವಲ್ಲಿ ಶ್ರಮಿಸಬೇಕಿದೆ. ಸಮಾಜಮುಖಿ ಯೋಚನೆಗಳಿಂದ ತಾಂತ್ರಿಕ ಸಾಧನೆಗಳನ್ನು ಮತ್ತಷ್ಟು ಸ್ಮಾರ್ಟ್ ಮಾಡಲು ಪ್ರಯತ್ನಿಸಿ. ಸಂಶೋಧನಾ ಲೇಖನಗಳು ಪ್ರಸ್ತುತತೆಗೆ ಸೀಮಿತವಾಗದೆ, ಭವಿಷ್ಯದ ಉನ್ನತಿಕರಣಕ್ಕೆ ಅನುಗುಣವಾಗಿ ಮಾರ್ಪಾಟು ಮಾಡಲು ಪ್ರಯತ್ನಿಸಿ ಎಂದು ಸಲಹೆ ನೀಡಿದರು.
ಎನ್‌ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಐಒಟಿ ಮತ್ತು ಕೃತಕ ಬುದ್ಧಿಮತ್ತೆ ತಂತ್ರಜ್ಞಾನಗಳು ಪರಸ್ಪರ ಕಾರ್ಯನಿರ್ವಹಿಸುವ ಮೂಲಕ ಅಗಾಧವಾದ ಫಲಿತಾಂಶಗಳನ್ನು ನೀಡಲಿದೆ. ಅಂತಹ ತಾಂತ್ರಿಕತೆಯನ್ನು ಬಳಸುವ ವಿದ್ಯಾರ್ಥಿಗಳು ನೈತಿಕತೆ ಮತ್ತು ಸದಾಚಾರಗಳೊಂದಿಗೆ ಮೌಲ್ಯಾಧಾರಿತ ತಾಂತ್ರಿಕ ವ್ಯವಸ್ಥೆ ರೂಪಿಸುವತ್ತ ಚಿತ್ತ ಹರಸಿ ಎಂದು ಹೇಳಿದರು.
ಖ್ಯಾತ ಸಂಶೋಧಕ, ಮಂಗಳೂರು ವಿವಿ ಪ್ರಾಧ್ಯಾಪಕ ಡಾ. ಬಿ.ಎಚ್.ಶೇಖರ್ ಮಾತನಾಡಿದರು. ಪ್ರಾಚಾರ್ಯ ಡಾ. ವೈ.ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಶೈಕ್ಷಣಿಕ ಡೀನ್ ಡಾ. ಪಿ.ಮಂಜುನಾಥ, ಸಂಶೋಧನಾ ಡೀನ್ ಡಾ. ಎಸ್.ವಿ.ಸತ್ಯನಾರಾಯಣ, ಎಂಸಿಎ ವಿಭಾಗದ ನಿರ್ದೇಶಕಿ ಡಾ. ಜಿ.ಪಿ.ಸುನೀತಾ, ಕಾರ್ಯಕ್ರಮ ಸಂಯೋಜಕ ಸಂಪತ್‌ಕುಮಾರ್ ಸೇರಿ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ಸಮ್ಮೇಳನದ ಸ್ಮರಣ ಸಂಚಿಕೆಯನ್ನು ಅತಿಥಿಗಳು ಬಿಡುಗಡೆಗೊಳಿಸಿದರು. 80ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಸಂಶೋಧನಾರ್ಥಿಗಳು ಮಂಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net