

ಕೋಲಾರ: ಜನರ ಸಮಸ್ಯೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ನಗರಸಭೆ ಅಧಿಕಾರಿಗಳ ವಿರುದ್ಧ ಸೋಮವಾರ ಪ್ರತಿಭಟನೆ ನಡೆಸಿದ್ದ ಸದಸ್ಯರು, ಮಂಗಳವಾರ ಪೌರಾಯುಕ್ತ ಶಿವಾನಂದ ಅವರನ್ನು ಕಚೇರಿಯಲ್ಲಿ ಭೇಟಿ ಮಾಡಿ ಅಧಿಕಾರಿಗಳು, ಸಿಬ್ಬಂದಿ ವರ್ತನೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿ ಹೆಸರಿಗಷ್ಟೆ ನಗರಸಭೆಯಿದೆ, ಸಕಾಲದಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ. ದಲ್ಲಾಳಿಗಳ ಮೂಲಕ ಬಂದರೆ ಮಾತ್ರ ಅರ್ಜಿ ವಿಲೇವಾರಿಯಾಗುತ್ತದೆ ಎಂದು ಸದಸ್ಯರಾದ ಮುರಳಿಗೌಡ, ಪ್ರವಿಣ್ ಗೌಡ ಆರೋಪಿಸಿದರು.
ಈ ವೇಳೆ ಕುಪಿತಗೊಂಡ ಪೌರಾಯುಕ್ತ ಶಿವಾನಂದ, ಕಚೇರಿಯ ಯಾವುದೇ ವಿಭಾಗದಲ್ಲಿ ದಲ್ಲಾಳಿಯನ್ನು ತೋರಿಸಿದರೆ ಕೂಡಲೇ ಅವರ ವಿರುದ್ಧ ದೂರು ದಾಖಲಿಸುತ್ತೆನೆ ಎಂದು ಸದಸ್ಯರೊಡನೆ ಜನನ&ಮರಣ ವಿಭಾಗ, ಕಂದಾಯ ವಿಭಾಗದ ಶಾಖೆಗೆ ಭೇಟಿ ನೀಡಿ ಪರಿಶೀಲಿಸಿದರು.
ಜನನ-ಮರಣ ವಿಭಾಗದಲ್ಲಿ ಪ್ರತಿದಿನ ಒಡಾಡುತ್ತಿದ್ದ ಎಜಾಜ್ಪಾಷಾ ಎಂಬುವವರನ್ನು ವಿಚಾರಿಸಿದಾಗ ಪ್ರಮಾಣ ಪತ್ರ ತೆಗೆದುಕೊಳ್ಳಲು ಬಂದಿದ್ದೇನೆ ಎಂದರು. ಆಗ ವಿಭಾಗದ ಸಿಬ್ಬಂದಿಯನ್ನು ವಿಚಾರಿಸಿದಾಗ ದಿನಕ್ಕೆ ನಾಲ್ಕೆದು ಬಾರಿ ಬರುತ್ತಾರೆ ಎಂದು ಗಮನಕ್ಕೆ ತಂದರು. ಆ ವ್ಯಕ್ತಿಯ ೋಟೋ ಹಿಡಿದುಕೊಳ್ಳಿ ಪೊಲೀಸರಿಗೆ ದೂರು ನೀಡಬೇಕು ಎಂದು ಪೌರಾಯುಕ್ತ ಸೂಚಿಸಿದರು.
ನನ್ನ ಬಳಿಗೆ ಯಾರೇ ಬಂದು ಸಮಸ್ಯೆ ಹೇಳಿಕೊಂಡರೂ ಕೂಡಲೇ ಪರಿಹಾರ ಕಲ್ಪಿಸಲಾಗುವುದು. ದಲ್ಲಾಳಿಗಳು ಯಾರು ಇಲ್ಲ, ಸದಸ್ಯರು ಅಪಾರ್ಥ ಮಾಡಿಕೊಳ್ಳಬಾರದು, ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಪೌರಾಯುಕ್ತರು ಮನವಿ ಮಾಡಿದರು.
ಯಾರೇ ದಲ್ಲಾಳಿಗಳು ಬಂದು ಅರ್ಜಿ ಸಲ್ಲಿಸಿ ಸೌಲಭ್ಯ ಪಡೆದುಕೊಂಡರೆ ಅಂತಹ ಆದೇಶ, ಪ್ರಮಾಣ ಪತ್ರಗಳನ್ನು ರದ್ದುಗೊಳಿಸಲಾಗುವುದು. ದಲ್ಲಾಳಿಗೆ ವಾರದಿಂದ ಎಷ್ಟು ಜನನ&ಮರಣ ಪ್ರಮಾಣ ಪತ್ರ ನೀಡಲಾಗಿದೆ ಎಂಬುದನ್ನು ಮಾಹಿತಿ ಕೊಡಿಸಿ, ಕೂಡಲೇ ರದ್ದುಗೊಳಿಸುತ್ತೇನೆ ಎಂದರು.