

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ನಿವೇಶನ ಹಂಚಿಕೆ ಹಗರಣ ಸಂಬಂಧ ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ರಾಜ್ಯಪಾಲರ ಕ್ರಮ ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯನ್ನು ಹೈ ಕೋರ್ಟ್ ತಿರಸ್ಕರಿಸಿದ ಬೆನ್ನಲ್ಲೆ ಅವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಒತ್ತಾಯಿಸಿ ದೂರುದಾರರಲ್ಲಿ ಒಬ್ಬರಾದ ಬೆಂಗಳೂರಿನ ಎಸ್.ಪಿ. ಪ್ರದೀಪ್‌ಕುಮಾರ್ ಲೋಕಾಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ನಗರದ ಲೋಕಾಯುಕ್ತ ಕಚೇರಿಗೆ ಬುಧವಾರ ಜೆಡಿಎಸ್ ಮುಖಂಡರೊಂದಿಗೆ ಆಗಮಿಸಿದ ಎಸ್.ಪಿ. ಪ್ರದೀಪ್‌ಕುಮಾರ್ ‘ನ್ಯಾಯಾಲಯ ಕೂಡ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅಸ್ತು ಎಂದಿರುವುದರಿಂದ ಕೂಡಲೇ ಎಫ್‌ಐಆರ್ ದಾಖಲಿಸಿ, ನ್ಯಾಯಯುತವಾಗಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ ಅವರು, ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ಪ್ರಕಟಿಸಿದ ತೀರ್ಪಿನ ಪ್ರತಿಯೊಂದಿಗೆ ಎಂದು ಎಸ್ಪಿ ಟಿ.ಜೆ.ಉದೇಶ್ ಅವರಿಗೆ ದೂರು ಸಲ್ಲಿಸಿದರು. ಪ್ರತಿಯಾಗಿ ಸ್ವೀಕೃತಿ ನೀಡಲಾಯಿತು.
ಜೆಡಿಎಸ್ ರಾಜ್ಯ ಘಟಕದ ವಕ್ತಾರ ರವಿಚಂದ್ರೇಗೌಡ, ಮಾಜಿ ಮೇಯರ್ ಎಂ.ಜೆ.ರವಿಕುಮಾರ್, ನಗರಪಾಲಿಕೆ ಮಾಜಿ ಸದಸ್ಯ ಎಸ್‌ಬಿಎಂ ಮಂಜು ಸೇರಿದಂತೆ ಜೆಡಿಎಸ್ ಮುಖಂಡರು ಅವರಿಗೆ ಸಾಥ್ ನೀಡಿದರು.