ಕಿಡಿಗೇಡಿಗಳಿಂದ ಹಲ್ಲೆ ಯತ್ನ ಆರೋಪ: ಹರ್ಷಿಕಾ ಪೂಣಚ್ಚ ದಂಪತಿಯಿಂದ ದೂರು

Crime Logo
Published on

ಬೆಂಗಳೂರು: ಪುಲಕೇಶಿನಗರದಲ್ಲಿ ಕಾರು ಪಾರ್ಕಿಂಗ್ ವಿಚಾರಕ್ಕೆ ನಟ ಭುವನ್ ಪೊನ್ನಣ್ಣ, ನಟಿ ಹರ್ಷಿಕಾ ಪೂಣಚ್ಚ ದಂಪತಿ ಮೇಲೆ ಪುಂಡರ ಗುಂಪೊಂದು ಹಲ್ಲೆಗೆ ಮುಂದಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಪತಿ ಕಿಡಿಗೇಡಿಗಳ ವಿರುದ್ಧ ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ರಮಣ್ ಗುಪ್ತಾ ಅವರಿಗೆ ದೂರು ನೀಡಿದ್ದಾರೆ.

ಏ.೨ ರಂದು ಪುಲಕೇಶಿನಗರ ಸಮೀಪದ ರೆಸ್ಟೋರೆಂಟ್‌ನಲ್ಲಿ ಊಟ ಮುಗಿಸಿ ಪಾರ್ಕಿಂಗ್‌ನಲ್ಲಿದ್ದ ಕಾರು ರಿವರ್ಸ್ ತೆಗೆದುಕೊಳ್ಳುವಾಗ ವ್ಯಕ್ತಿಯೊಬ್ಬ ಸುಖಾಸುಮ್ಮನೆ ಬಂದು ವಾಗ್ವಾದಕ್ಕೆ ಇಳಿದಿದ್ದ. ಕ್ಷಣಾರ್ಧದಲ್ಲಿ ಹೆಚ್ಚಿನ ಜನರ ಜಮಾವಣೆಗೊಂಡು ಕನ್ನಡ ಮಾತನಾಡುವ ವಿಚಾರವಾಗಿ ನಿಂದಿಸಿದ್ದರು. ಈ ಸಂಬಂಧ ನಟಿ ಹರ್ಷಿಕಾ ಸಾಮಾಜಿಕ ಜಾಲತಾಣದಲ್ಲಿ ತಮ್ಮಗಾಗಿರುವ ಕಹಿ ಅನುಭವವನ್ನು ಬರೆದು ಪೋಸ್ಟ್ ಮಾಡಿದ್ದರು. ಪಾಕಿಸ್ತಾನ ಅಥವಾ ಅ್ಘಾನಿಸ್ತಾನದಲ್ಲಿ ವಾಸ ಮಾಡುತ್ತಿದ್ದೇವಾ ? ಬೆಂಗಳೂರು ಎಷ್ಟು ಸುರಕ್ಷಿತ ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದರು. ಈ ಸಂಬಂಧ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ಕ್ರಮ ತೆಗೆದುಕೊಳ್ಳುವ ಭರವಸೆ:
ದೂರು ನೀಡಿದ ಬಳಿಕ ಭುವನ್ ಮಾತನಾಡಿ, ಪೊಲೀಸ್ ಕಮೀಷನರ್ ಇಲ್ಲದ ಕಾರಣ ಪೂರ್ವ ವಿಭಾಗದ ಹೆಚ್ಚುವರಿ ಆಯುಕ್ತರನ್ನು ಭೇಟಿಯಾಗಿ ದೂರು ನೀಡಿದ್ದೇವೆ. ಎಫ್‌ಐಆರ್ ದಾಖಲಿಸಿ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ. ಘಟನೆ ನಡೆದಾಗ ದೂರು ಕೊಡುವುದರಿಂದ ಬೇರೆ ರೂಪ ಪಡೆದುಕೊಳ್ಳಲಿದೆ ಎಂಬ ಕಾರಣಕ್ಕಾಗಿ ದೂರು ಕೊಟ್ಟಿರಲಿಲ್ಲ. ಈ ಬಗ್ಗೆ ಸಂಬಂಧಿಕರು ಹಾಗೂ ಹಿತೈಷಿಗಳು ನೀಡಿದ ಸಲಹೆ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ ಶುಕ್ರವಾರ ಪೊಲೀಸರಿಗೆ ದೂರು ಕೊಡಲಾಗಿದೆ ಎಂದರು.

ಯಾವುದೇ ರಾಜಕೀಯ ಅಜೆಂಡಾವಿಲ್ಲ:
ಹರ್ಷಿಕಾ ಪೂರ್ಣಚ್ಚ ಮಾತನಾಡಿ, ತಮ್ಮಗಾಗಿರುವ ಕಹಿ ಅನುಭವನವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದೇನೆ. ಘಟನೆ ನಡೆದಾಗ ನಾವು ದೂರು ಕೊಡುವ ಮನಸ್ಥಿತಿಯಲ್ಲಿ ಇರಲಿಲ್ಲ. ಹಿತೈಷಿಗಳ ಸಲಹೆ ಮೇರೆಗೆ ಪೊಲೀಸರಿಗೆ ದೂರು ನೀಡಿದ್ದೇವೆ. ದೂರಿನ ಹಿಂದೆ ಯಾವುದೇ ರಾಜಕೀಯ ಅಜೆಂಡಾವಿಲ್ಲ. ಅಲ್ಲದೇ ದೂರು ಯಾರು ನಮಗೆ ಬರೆದುಕೊಟ್ಟಿಲ್ಲ. ಇಲ್ಲಿ ಹುಟ್ಟಿಬೆಳೆದ ನಾನು ಕನ್ನಡ ಮಾತನಾಡಬಾರದೆ ಎಂದು ಅಸಮಾಧಾನದಲ್ಲಿ ಪಾಕಿಸ್ತಾನದಲ್ಲಿ ಇದ್ದೇವಾ ಎಂಬ ರೀತಿಯಲ್ಲಿ ಪೋಸ್ಟ್ ಮಾಡಿದ್ದೇ ವಿನಾಹ ಬೆಂಗಳೂರು ಹಾಗೂ ಇಲ್ಲಿನ ಕಾನೂನು ಸುವ್ಯವಸ್ಥೆ ದೂಷಣೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net