ಸರ್ಕಾರಿ ನೌಕರರ ಸಂಘದ ಅಧ್ಯಕ್ಷರ ವಿರುದ್ಧ ದೂರು

klr suresh babu
ಸುರೇಶ್ ​ಬಾಬು
Published on

ಕೋಲಾರ: ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸ್ಥಾನದ ಚುನಾವಣೆಗೆ 2 ದಿನ ಬಾಕಿ ಇರುವಾಗಲೇ ಹಾಲಿ ಅಧ್ಯಕ್ಷ, ಮರು ಆಯ್ಕೆ ಬಯಸಿ ಸ್ಪರ್ಧೆಯಲ್ಲಿರುವ ಜಿ.ಸುರೇಶ್​ಬಾಬು ವಿರುದ್ಧ ಭೂ ದಾಖಲೆ ತಿದ್ದಿದ ಆರೋಪದಡಿ ಮಾಲೂರು ಠಾಣೆಯಲ್ಲಿ ದೂರು ದಾಖಲಾಗಿದೆ.

ಡಿ.4ರಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಹಾಲಿ ಅಧ್ಯಕ್ಷ ಜಿ.ಸುರೇಶ್​ಬಾಬು ಮತ್ತು ಕಂದಾಯ ಇಲಾಖೆಯ ಅಜಯ್​ಕುಮಾರ್​ ಸ್ಪರ್ಧಿಗಳಾಗಿದ್ದಾರೆ.

ಚುನಾವಣೆ ಹೊಸ್ತಿಲಲ್ಲಿ ಸುರೇಶ್​ಬಾಬು ವಿರುದ್ಧ ಜಮೀನು ದಾಖಲೆ ತಿದ್ದುಪಡಿ ಆರೋಪ ಸಂಬಂಧ ವಿವಿಧ ಸಂಟನೆಗಳು ಶುಕ್ರವಾರ ಕೋಲಾರದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದವು. ಈ ಹಿನ್ನೆಲೆಯಲ್ಲಿ

ಕೋಲಾರದ ಭೂದಾಖಲೆಗಳ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಮೇಲ್ವಿಚಾರಕ ಸುರೇಶ್​ಬಾಬು ಮತ್ತು ಪ್ರಸ್ತುತ ಕೋಲಾರದಲ್ಲಿ ಸರ್ವೇಯರ್​, ಮಾಲೂರು ಭೂ ದಾಖಲೆಗಳ ಇಲಾಖೆ ಸಹಾಯಕ ನಿರ್ದೇಶಕರ ಕಚೆೇರಿಯ ಸರ್ವೇಯರ್​ ಬಿ.ನಾಗರಾಜ್​ ವಿರುದ್ಧ ಮಾಲೂರು ತಾಲೂಕು ಭೂದಾಖಲೆಗಳ ಇಲಾಖೆಯ ಸಹಾಯಕ ನಿರ್ದೇಶಕಿ ನಿವೇದಿತಾ ಅವರು ಮಾಲೂರು ಠಾಣೆಯಲ್ಲಿ ಶನಿವಾರ ರಾತ್ರಿ ದೂರು ದಾಖಲಿಸಿದ್ದಾರೆ.

ಸುರೇಶ್​ ಬಾಬು ಎ-2

2024ರ ಜುಲೈ 11ರಿಂದ 2024ರ ನ.21ರವರೆಗೆ ಮಾಲೂರು ಭೂ ದಾಖಲೆಗಳ ಇಲಾಖೆಯಲ್ಲಿ ಅವ್ಯವಹಾರ ನಡೆದಿದೆ ಎನ್ನಲಾಗಿದ್ದು, ಪ್ರಕರಣದಲ್ಲಿ ನಾಗರಾಜ್​ ಅವರನ್ನು ಮೊದಲ ಮತ್ತು ಸುರೇಶ್​ಬಾಬು ಅವರನ್ನು 2ನೇ ಆರೋಪಿ ಎಂದು ಉಲ್ಲೇಖಿಸಿದ್ದು, ಜತೆಗೆ ಇತರರನ್ನು ಆರೋಪ ಪಟ್ಟಿಯಲ್ಲಿ ಹೆಸರಿಸಲಾಗಿದೆ.

ಪ್ರತಿಸ್ಪರ್ಧಿ ಮೇಲೆ ಪತ್ಯಾರೋಪ

ಶತಾಯಗತಾಯ ಸುರೇಶ್​ಬಾಬು ಅವರನ್ನು ಚುನಾವಣೆಯಲ್ಲಿ ಸೋಲಿಸಬೇಕೆಂದು ಅಜಯ್ ​ಕುಮಾರ್​ ತಂಡ ಕಸರತ್ತು ನಡೆಸುತ್ತಿದ್ದು, ಚುನಾವಣೆ ಸಮಯದಲ್ಲಿ ಸುರೇಶ್​ಬಾಬು ವಿರುದ್ಧ ಕೇಸು ದಾಖಲಿಸುವಂತೆ ಮಾಡಿದ್ದಾರೆ ಎಂದು ಸುರೇಶ್​ಬಾಬು ತಂಡ ಆರೋಪಿಸಿದೆ. ಅಜಯ್ ​ಕುಮಾರ್​ ಕಂದಾಯ ಇಲಾಖೆಯ ನೌಕರನಾಗಿದ್ದು, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೆಲಸ ಮಾಡುತ್ತಾರೆ. ಹಾಗಾಗಿ ಜಿಲ್ಲಾಧಿಕಾರಿಗಳಿಗೂ ಆಪ್ತರಾಗಿದ್ದು, ಶಾಸಕ ಕೊತ್ತೂರು ಮಂಜುನಾಥ್​ ಮತ್ತು ಎಂಎಲ್​ಸಿ ಅನಿಲ್​ಕುಮಾರ್​ ಅವರ ಸ್ನೇಹವಿದೆ. ಜಿಲ್ಲಾಡಳಿತದ ಪ್ರಭಾವ ಬಳಸಿಕೊಂಡು ಕೇಸು ದಾಖಲಿಸುವ ಹಾಗೂ ಸಂಘ&ಸಂಸ್ಥೆಗಳ ಮೂಲಕ ಪ್ರತಿಭಟನೆ ನಡೆಸುವ ಕೆಲಸ ಅಜಯ್​ಕುಮಾರ್​ ತಂಡ ಮಾಡುತ್ತಿದೆ ಎಂಬ ಸುರೇಶ್​ಬಾಬು ಬಣ ಆರೋಪಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net