

ಬೆಂಗಳೂರು: ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್‌ರನ್ನು ‘ಪಾಕಿಸ್ತಾನಿ’ ಎಂದಿರುವ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ‘ನಾಯಿಗೆ’ ಹೋಲಿಸಿದ ಮೇಲ್ಮನೆ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ನಿಯೋಗ ರಾಜ್ಯಪಾಲರನ್ನು ಒತ್ತಾಯಿಸಿದೆ.
ವಿಧಾನ ಪರಿಷತ್ ಆಡಳಿತ ಪಕ್ಷದ ನಾಯಕ ಎನ್.ಎಸ್. ಬೋಸರಾಜು ಹಾಗೂ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ನೇತೃತ್ವದ ನಿಯೋಗ ಗುರುವಾರ ರಾಜ್ಯಪಾಲರನ್ನು ಭೇಟಿಯಾಗಿ ದೂರು ಸಲ್ಲಿಸಿತು.
ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಚಿವ ಎನ್.ಎಸ್.ಬೋಸರಾಜು, ವಿಪಕ್ಷದ ನಾಯಕರಾಗಿ ಬೇಜವಾಬ್ದಾರಿ ಹೇಳಿಕೆ ನೀಡಿರುವ ಛಲವಾದಿ ನಾರಾಯಣ ಸ್ವಾಮಿ ಹಾಗೂ ಐಎಎಸ್ ಅಧಿಕಾರಿ ತೇಜೋವಧೆ ಮಾಡಿರುವ ರವಿಕುಮಾರ್‌ರನ್ನು ಅಮಾನತುಗೊಳಿಸಬೇಕು ಎಂದು ದೂರು ಸಲ್ಲಿಸಿದ್ದೇವೆ. ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ರಾಜ್ಯಪಾಲರು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ನಿಯೋಗದಲ್ಲಿ ವಿಧಾನ ಪರಿಷತ್ ಸದಸ್ಯಗಳಾದ ವಸಂತ್‌ಕುಮಾರ್, ಅನಿಲ್ ಕುಮಾರ್ ಎಂ. ಎಲ್. ಜಗದೇವ ಗುತ್ತೇದಾರ್, ಎಸ್.ರವಿ, ದಿನೇಶ್ ಗೂಳಿಗೌಡ್, ಪುಟ್ಟಣ್ಣ, ನಾಗರಾಜ್ ಯಾದವ್, ಮಂಜುನಾಥ್ ಭಂಡಾರಿ ಇತರರಿದ್ದರು.