ಬೆಂಗಳೂರು: ಶಾಸನ ಸಭೆಯಲ್ಲಿ ಮಹಿಳಾ ಮೀಸಲು ತರುವ ಮಸೂದೆ ಲೋಕಸಭೆಯಲ್ಲಿ ಮಂಡನೆಯಾಗುತ್ತಿದ್ದಂತೆ ಕ್ರೆಡಿಟ್ ವಾರ್ ಆರಂಭವಾಗಿದೆ. ಬಿಜೆಪಿ ನಾಯಕರು ಪ್ರಧಾನಿಗೆ ಜೈಕಾರ ಹಾಕಿದರೆ ಕಾಂಗ್ರೆಸ್ ನಾಯಕರು ತಮ್ಮ ಪಕ್ಷದ ನಾಯಕರ ಪ್ರಯತ್ನದಿಂದ ಇದು ಸಾಕಾರವಾಗಿದೆ ಎಂದು ಸಂಭ್ರಮಿಸಿದ್ದು, ಪರಸ್ಪರ ಟೀಕೆಯನ್ನೂ ಮಾಡಿಕೊಂಡಿದ್ದಾರೆ.
ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿಯವರು ‘ಇದು ನಮ್ಮ ಬಿಲ್’ ಎಂದು ಮಾಧ್ಯಮಕ್ಕೆ ಹೇಳಿಕೆ ಕೊಟ್ಟಿದ್ದು, ಈ ಅಭಿಪ್ರಾಯಕ್ಕೆ ಬಿಜೆಪಿ ಮುಖಂಡ ಸಿ.ಟಿ.ರವಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ‘ಮುಂದೇನು? ಸೂರ್ಯ, ಚಂದ್ರ, ನಕ್ಷತ್ರಗಳೇ’ ಎಂದು ವ್ಯಂಗ್ಯವಾಡಿದ್ದಾರೆ.
ಮಾಜಿ ಸಚಿವೆ ಜಯಲಲಿತಾ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಮೂರು ದಶಕಗಳಿಂದ ಮಹಿಳಾ ಮೀಸಲಾತಿ ಮಸೂದೆ ಮಂಡನೆ ಆಗಲಿ ಎಂದು ಕಾಯುತ್ತಿದ್ದೇವೆ. ಇದು ಸೋನಿಯಾ ಗಾಂಧಿ, ರಾಜೀವ್ ಗಾಂಧಿಯವರ ಪ್ರಯತ್ನದ ಫಲ ಎಂದು ಹೇಳಿದ್ದಾರೆ.
ಸಂಕಲ್ಪ ಯಾರದ್ದೋ, ಒಳ್ಳೆಯದು. ಬಿಜೆಪಿ- ಕಾಂಗ್ರೆಸ್ ಎಂದು ಬೊಟ್ಟು ಮಾಡೋದಿಲ್ಲ. ಕಾಂಗ್ರೆಸ್ ಈ ಕಾಯ್ದೆ ತರಲು ಹೊರಟಾಗ, ಬಿಜೆಪಿ ವಿರೋಧಿಸಿತ್ತು. ಅವರು ಮಾಡಿದ ತಪ್ಪನ್ನು ಸರಿಪಡಿಸಿಕೊಳ್ಳಲಿ. ಅಂದು ಯಾರು ವಿರೋಧಿಸಿದ್ದರೋ ಅವರೆ ಮಂಡನೆ ಮಾಡುತ್ತಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ಇದು ಮಹಿಳೆಯರಿಗೆ ಅವಕಾಶ ಮಾಡಿಕೊಡುವ ವಿಧೇಯಕ. ವಿಧೇಯಕ ಮಂಡನೆಯನ್ನು ಸ್ವಾಗತಿಸುತ್ತೇನೆ. ಇದರಿಂದ ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ಸಿಗುತ್ತೆ. 1996ರಿಂದ ಇಂದಿನವರೆಗೆ ಹೋರಾಟಗಳು ನಡೆದಿವೆ. ಬಹಳ ಹಿಂದೆಯೇ ಈ ವಿಧೇಯಕವನ್ನ ಕಾಂಗ್ರೆಸ್ ಮಂಡಿಸಿತ್ತು ಎಂದಿದ್ದಾರೆ.
ರಾಜ್ಯಸಭೆಯಲ್ಲಿ ಈ ಬಿಲ್ ಪಾಸ್ ಆಗಿತ್ತು. ಆದರೆ, ಲೋಕಸಭೆಯಲ್ಲಿ ಆಗಿರಲಿಲ್ಲ. ಈಗ ರಾಜಕೀಯ ಕಾರಣಕ್ಕೆ ಬಿಲ್ ಪಾಸ್ ಮಾಡುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಈ ಬಿಲ್ ಪಾಸ್ ಮಾಡುತ್ತಿದ್ದಾರೆ. ಈ ಬಿಲ್ ಪಾಸ್ ಆದರೆ ಬಿಜೆಪಿಗೆ ಕ್ರೆಡಿಟ್ ಸಿಗಲ್ಲ. ಕಾಂಗ್ರೆಸ್ ಮಾಡಿದ್ದನ್ನು ಮೊದಲು ಟೀಕೆ ಮಾಡುತ್ತಾರೆ, ಆಡಳಿತಕ್ಕೆ ಬಂದಾಗ ಕಾಂಗ್ರೆಸ್ ಕೆಲಸವನ್ನು ಒಪ್ಪಿಕೊಳ್ಳುತ್ತಾರೆ ಎಂದರು.