

ಶಿಕಾರಿಪುರ: ತಾಲೂಕಿನ ಕಾಳೇನಹಳ್ಳಿ ಕ್ರಾಸ್‌ನಲ್ಲಿ ಒಣಗಲು ಮೆಕ್ಕೆಜೋಳ ಮೊಳಕೆಯೊಡೆದು ಹಾನಿಗೀಡಾದ ಸ್ಥಳಕ್ಕೆ ಸಂಸದ ಬಿ.ವೈ.ರಾಘವೇಂದ್ರ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.
ಎಷ್ಟು ಬಾರಿ ಮನವಿ ಮಾಡಿದರೂ ಗ್ರಾಮ ಲೆಕ್ಕಾಧಿಕಾರಿ, ಕಂದಾಯ ಅಧಿಕಾರಿಗಳು ಇಲ್ಲಿಯವರೆಗೂ ಸ್ಥಳಕ್ಕೆ ಆಗಮಿಸಿಲ್ಲ ಮತ್ತು ನಮ್ಮ ಸಮಸ್ಯೆಯನ್ನು ಕೇಳಿಲ್ಲ ಎಂದು ಸಾಗರ ತಾಲೂಕಿನ ಮಿಡನಾಗರ ರೈತರು ದೂರಿದರು.
ನಂತರ ಮಾತನಾಡಿದ ಬಿವೈಆರ್, ಈ ಬಾರಿ ಅಕಾಲಿಕ ಮಳೆಯಿಂದ ಬೇಸಿಗೆ ಬೆಳೆಗಳಾದ ಮೆಕ್ಕೆಜೋಳ ಮತ್ತು ಭತ್ತ ಸಾಕಷ್ಟು ಹಾಳಾಗಿದೆ. ಕೆಲವೆಡೆ ಕಟಾವು ಮಾಡಲಾಗದೆ ಬೆಳೆಗಳು ಹೊಲಗಳಲ್ಲಿಯೇ ನಷ್ಟವಾಗಿವೆ. ರೈತರು ಒಣಗಲು ಹಾಕಿದ ಮೆಕ್ಕೆಜೋಳ ಮೊಳಕೆಯೊಡೆದಿದೆ. ರೈತರಿಗೆ ಮಳೆಯಿಂದ ತೀವ್ರ ಹಾನಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅಕಾಲಿಕ ಮಳೆಯಿಂದ ಬೇಸಿಗೆ ಬೆಳೆಗಳು ಹಾನಿಗೀಡಾದ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದು ರೈತರಿಗೆ ಪರಿಹಾರ ಹೇಗೆ ಕೊಡಿಸಬಹುದು ಎಂದು ಚರ್ಚಿಸುತ್ತೇನೆ. ಈ ಬಗ್ಗೆ ರಾಜ್ಯ ಸರ್ಕಾರ ಹಾನಿಗೊಳಗಾದ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು. ಕೆಲದಿನಗಳ ಹಿಂದೆ ಬನ್ನೂರಿನಲ್ಲಿ ಸುಮಾರು 400 ಕ್ವಿಂಟಾಲ್ ಮೆಕ್ಕೆಜೋಳ ನೀರಿಗೆ ಸಿಲುಕಿ ಹಾಳಾಗಿದೆ. ಈ ಬಗ್ಗೆ ಅಧಿಕಾರಿಗಳ ಜತೆ ಮಾತನಾಡುತ್ತೇನೆ ಎಂದು ಭರವಸೆ ನೀಡಿದರು.
ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಚನ್ನವೀರಪ್ಪ, ಟಿಎಪಿಸಿಎಂಎಸ್ ಅಧ್ಯಕ್ಷ ಸುಧೀರ್, ಮಧು, ಬೆಣ್ಣೆ ಪ್ರವೀಣ, ಮಲ್ಲಿಕಾರ್ಜುನ ರೆಡ್ಡಿ ಇತರರಿದ್ದರು.