

ತೀರ್ಥಹಳ್ಳಿ: ಸ್ಪರ್ಧಾತ್ಮಕ ದಿನಗಳಲ್ಲಿ ಶಿಕ್ಷಣದ ಜತೆಗೆ ಸಂವಹನ ಕೌಶಲ ಕೂಡ ಮುಖ್ಯ ಎಂದು ರಿಪ್ಪನ್‌ಪೇಟೆ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಕೆ.ಸಿ.ರಾಕೇಶ್ ಹೇಳಿದರು.
ತುಂಗಾ ಮಹಾವಿದ್ಯಾಲಯದ ಪಿಜಿ ಸ್ಟಡಿ ಸೆಂಟರ್ ವಿಭಾಗದಿಂದ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಎಂಕಾಂ ಪದವಿ ಪ್ರದಾನ ಹಾಗೂ ಫೇರ್‌ವೆಲ್ ಕಾರ್ಯಕ್ರಮದಲ್ಲಿ 2022-23ನೇ ಸಾಲಿನಲ್ಲಿ ಕುವೆಂಪು ವಿವಿ ಮಟ್ಟದಲ್ಲಿ ರ‌್ಯಾಂಕ್ ಗಳಿಸಿದವರನ್ನು ಸನ್ಮಾನಿಸಿ ಮಾತನಾಡಿದರು.
ಎಂಕಾಂ ವಿಭಾಗದಲ್ಲಿ ಪ್ರಥಮ ರ‌್ಯಾಂಕ್ ಸೇರಿ ಆರು ರ‌್ಯಾಂಕ್ ಗಳಿಸಿರುವ ತುಂಗಾ ಮಹಾವಿದ್ಯಾಲಯದ ಶೈಕ್ಷಣಿಕ ಸಾಧನೆ ಪ್ರಶಂಸನೀಯ. ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಕಾಲೇಜುಗಳಿಗೂ ತುಂಗಾ ಕಾಲೇಜಿನ ಸಾಧನೆ ಪ್ರೇರಣೆ ನೀಡಲಿದೆ. ವಿದ್ಯಾರ್ಥಿಗಳು ಉನ್ನತ ಸಾಧನೆ ಕಡೆಗೆ ಆದ್ಯತೆ ನೀಡಬೇಕು. ಉದ್ಯೋಗ ಆಕಾಂಕ್ಷಿಗಳು ನ್ಯಾಷನಲ್ ಕರಿಯರ್ ಸರ್ವಿಸ್‌ನಂತಹ ಪೋರ್ಟಲ್ ಮಾಹಿತಿ ಮೂಲಕ ಉದ್ಯೋಗ ದೊರಕಿಸಿಕೊಳ್ಳಬಹುದು ಎಂದು ತಿಳಿಸಿದರು.
ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಪಿ.ವಿ.ಮಹಾಬಲೇಶ್ ಮಾತನಾಡಿ, ಸತತವಾಗಿ ರ‌್ಯಾಂಕ್ ಗಳಿಸುತ್ತಿರುವ ಎಂಕಾಂ ವಿಭಾಗದಲ್ಲಿ ಈವರೆಗೆ ಮೂರು ಪ್ರಥಮ ರ‌್ಯಾಂಕ್ ಸೇರಿ ಒಟ್ಟು 17 ರ‌್ಯಾಂಕ್ ಬಂದಿದೆ. ಉತ್ತಮ ಫಲಿತಾಂಶಕ್ಕೆ ಕಾಲೇಜಿನ ಭೋದಕ ವರ್ಗದವರ ಬದ್ಧತೆ ಮತ್ತು ಕಾಳಜಿ ಕಾರಣ ಎಂದರು. ಕಾಲೇಜು ಆಡಳಿತ ಮಂಡಳಿ ಕಾರ್ಯದರ್ಶಿ ಡಾನ್ ರಾಮಣ್ಣ, ಎಂಕಾಂ ವಿಭಾಗದ ಮುಖ್ಯಸ್ಥೆ ಡಾ. ವಿಮಲಾ, ಕಾಲೇಜಿನ ಪ್ರಾಚಾರ್ಯ ಆರ್.ಕುಮಾರಸ್ವಾಮಿ ಉಪಸ್ಥಿತರಿದ್ದರು.