Commonwealth Games: ಬಾಕ್ಸಿಂಗ್​ ಯಶಸ್ಸಿನಲ್ಲಿ ಕನ್ನಡಿಗ ಕುಟ್ಟಪ್ಪ ಪಾತ್ರ

Commonwealth Games: ಬಾಕ್ಸಿಂಗ್​ ಯಶಸ್ಸಿನಲ್ಲಿ ಕನ್ನಡಿಗ ಕುಟ್ಟಪ್ಪ ಪಾತ್ರ
Commonwealth Games: ಬಾಕ್ಸಿಂಗ್​ ಯಶಸ್ಸಿನಲ್ಲಿ ಕನ್ನಡಿಗ ಕುಟ್ಟಪ್ಪ ಪಾತ್ರ
Published on

ಬಾಕ್ಸಿಂಗ್​ನಲ್ಲಿ ಭಾರತ ಒಟ್ಟು 10 ಪದಕ ಜಯಿಸಿತು. ಈ ಪೈಕಿ ತಲಾ 2 ಚಿನ್ನ, 2 ಬೆಳ್ಳಿ ಸಹಿತ 4 ಪದಕಗಳು ಪುರುಷ ಬಾಕ್ಸರ್​ಗಳ ಕೊಡುಗೆಯಾಗಿದೆ. ಭಾರತ ಪುರುಷ ಬಾಕ್ಸಿಂಗ್​ ತಂಡದ ಮುಖ್ಯ ಕೋಚ್​ ಆಗಿರುವ ಕನ್ನಡಿಗ ಕೆ.ಸಿ. ಕುಟ್ಟಪ್ಪ ಅವರ ಪಾತ್ರ ಇದರಲ್ಲಿ ಪ್ರಮುಖವಾದುದು.

ಕೊಡಗು ಮೂಲದ ಕುಟ್ಟಪ್ಪ ಸೈನಿಕರಾಗಿದ್ದು, ಹಾಲಿ ವರ್ಷಾರಂಭದಲ್ಲಿ ಪುರುಷರ ತಂಡದ ಕೋಚ್​ ಆಗಿ 3ನೇ ಅವಧಿಗೆ ಮರುನೇಮಕವಾಗಿದ್ದರು. ಇದಕ್ಕೆ ಮುನ್ನ 2018-2021 ಮತ್ತು 2023-2024ರಲ್ಲಿ ಮೊದಲ 2 ಅವಧಿ ಕಾರ್ಯನಿರ್ವಹಿಸಿದ್ದರು. ಆಗಲೂ ಹಲವು ಬಾಕ್ಸರ್​ಗಳ ಯಶಸ್ಸಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಅವರು, 2008ರ ಬೀಜಿಂಗ್​ ಒಲಿಂಪಿಕ್ಸ್​ನಲ್ಲಿ ವಿಜೇಂದರ್​ ಸಿಂಗ್​ ಕಂಚಿನ ಪದಕ ಗೆದ್ದಾಗಲೂ ಭಾರತ ತಂಡದ ಸಹಾಯಕ ತರಬೇತುದಾರರಾಗಿದ್ದರು. ಕುಟ್ಟಪ್ಪ ದ್ರೋಣಾಚಾರ್ಯ ಪ್ರಶಸ್ತಿ ಪುರಸತರೂ ಆಗಿದ್ದಾರೆ.

ಕರ್ನಾಟಕಕ್ಕೆ ಏಕೈಕ ಪದಕ
ಗ್ಲಾಸ್ಗೋ ಕಾಮನ್ವೆಲ್ತ್​ ಗೇಮ್ಸ್​ನಲ್ಲಿ ಕರ್ನಾಟಕದ ಒಟ್ಟು 8 ಕ್ರೀಡಾಪಟುಗಳು ಭಾಗವಹಿಸಿದ್ದರು. ಈ ಪೈಕಿ ಪ್ಯಾರಾಥ್ಲೀಟ್​ ಶಿಲ್ಪಾ ಕೆ.ಎಸ್​. ಏಕೈಕ ಪದಕ ವಿಜೇತರೆನಿಸಿದರು. ಕೆ.ಆರ್​.ನಗರ ತಾಲೂಕಿನ ಕಂಚುಗಾರಕೊಪ್ಪಲು ಗ್ರಾಮದ ಕೆ.ಜಿ.ಶೈಲ ಮತ್ತು ಶಾಂತಾ ದಂಪತಿಯ ಪುತ್ರಿ ಕೆ.ಎಸ್​.ಶಿಲ್ಪಾ ಮಹಿಳೆಯರ ಎಫ್​-57 ಶಾಟ್​ಪುಟ್​ನಲ್ಲಿ ಕಂಚಿ-ನ ಪದಕ ಗೆದ್ದುಕೊಂಡರು. ಅಪಘಾತಕ್ಕೀಡಾಗಿ ಕಾಲು ಕಳೆದುಕೊಂಡರೂ ಎದೆಗುಂದದೆ ಆತ್ಮ ಸ್ಥೆರ್ಯ, ಸತತ ಪರಿಶ್ರಮದಿಂದ ಅಭ್ಯಾಸ ಮಾಡಿ ಪದಕ ಸಾಧಕಿಯಾಗಿ ಹೊರಹೊಮ್ಮಿದ್ದಾರೆ.
ಹರಿಯಾಣಕ್ಕೆ ಸಪ್ತ ಸ್ವರ್ಣ!
ಗ್ಲಾಸ್ಗೋದಲ್ಲಿ ಭಾರತ ಗೆದ್ದ ಒಟ್ಟು 13 ಚಿನ್ನದ ಪದಕಗಳಲ್ಲಿ 7 ಹರಿಯಾಣ ರಾಜ್ಯದ ಕ್ರೀಡಾಪಟುಗಳ ಸಾಧನೆಯಾಗಿದೆ. ಬಾಕ್ಸಿಂಗ್​ನಲ್ಲಿ ಭಾರತ ಗೆದ್ದ 7 ಚಿನ್ನದ ಪದಕಗಳ ಪೈಕಿ 6 ಹರಿಯಾಣದ ಬಾಕ್ಸರ್​ಗಳು ಗೆದ್ದುಕೊಟ್ಟರು. ಜತೆಗೆ ಹರಿಯಾಣ ಕ್ರೀಡಾಪಟುಗಳು 2 ಬೆಳ್ಳಿ, 2 ಕಂಚಿನ ಪದಕಗಳನ್ನು ಗೆದ್ದಿದ್ದಾರೆ. "ಯುವಕರು ತಮ್ಮ ಶಕ್ತಿಯನ್ನು ಸಕಾರಾತ್ಮಕ ದಿಕ್ಕಿನತ್ತ ಹರಿಸಿದಾಗ ಮತ್ತು ಮಾದಕ ದ್ರವ್ಯಗಳನ್ನು ದೂರವಿಟ್ಟಾಗ ಅವರು ಈ ರೀತಿಯಾಗಿ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕಗಳನ್ನು ಗೆಲ್ಲುವ ಮೂಲಕ ದೇಶಕ್ಕೆ ಕೀರ್ತಿ ತರುತ್ತಾರೆ. ಹರಿಯಾಣದ ಯುವಕರು ಪದಕಗಳ ವ್ಯಸನಿಗಳಾಗಿದ್ದಾರೆ' ಎಂದು ಹರಿಯಾಣ ಮುಖ್ಯಮಂತ್ರಿ ನಯಬ್​ ಸಿಂಗ್​ ಸೈನಿ ಹೇಳಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net