ಅಕ್ರಮ ಭೂ ಮಂಜೂರಾತಿ ತನಿಖೆಗೆ ಸಮಿತಿ

mdg
Published on

ಚಿಕ್ಕಮಗಳೂರು: ಜಿಲ್ಲೆಯ ಕಡೂರು ಮತ್ತು ಮೂಡಿಗೆರೆಯಲ್ಲಿ ನಡೆದಿರುವ ಅಕ್ರಮ ಭೂ ಮಂಜೂರಾತಿ ಪ್ರಕರಣದ ತನಿಖೆಗೆ ತಹಸೀಲ್ದಾರ್ ಗ್ರೇಡ್1, ಮತ್ತು ಗ್ರೇಡ್ 2 ಶ್ರೇಣಿಯ ಒಟ್ಟು 15 ಅಧಿಕಾರಿಗಳ ತಂಡವನ್ನು ನೇಮಿಸಲಾಗಿದೆ.
ಕಡೂರು ಮತ್ತು ಮೂಡಿಗೆರೆ ತಾಲೂಕುಗಳಲ್ಲಿ ಫಾರ್ಮ್ ನಂ.50, 53ರಲ್ಲಿ ನಿಯಮ ಮೀರಿ ಸರ್ಕಾರಿ ಭೂಮಿಯನ್ನು ಮಂಜೂರು ಮಾಡಿರುವುದು ಬೆಳಕಿಗೆ ಬಂದಿದೆ. ಗೋಮಾಳ ಸೇರಿದಂತೆ ನೂರಾರು ಎಕರೆ ಭೂಮಿಯನ್ನು ಭೂ ಮಂಜೂರಾತಿ ನಿಯಮಗಳನ್ನು ಉಲ್ಲಂಘಿಸಿ, ಕೆಲವೊಮ್ಮೆ ಸಮಿತಿ ಒಪ್ಪಿಗೆಯನ್ನು ಪಡೆಯದೆ ಅಕ್ರಮವಾಗಿ ಮಂಜೂರು ಮಾಡಿರುವುದು ದೃಢಪಟ್ಟಿದೆ.
ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ಕಂದಾಯ ಇಲಾಖೆ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಟಾರಿಯ ಅಕ್ರಮವಾಗಿ ಭೂ ಮಂಜೂರಾತಿ ಆಗಿರುವ ಬಗ್ಗೆ ತಿಳಿಸಿದ್ದರು. ಕಡೂರು ಮತ್ತು ಮೂಡಿಗೆರೆ ತಾಲೂಕಿಗೆ ಪ್ರತ್ಯೇಕ ತಂಡಗಳನ್ನು ರಚಿಸಲಾಗುವುದು. ಒಂದು ತಂಡದಲ್ಲಿ ಆರು ತಹಸೀಲ್ದಾರರನ್ನು ನಿಯೋಜಿಸಲಾಗಿದೆ. ನಿಯೋಜಿತ ಅಧಿಕಾರಿಗಳು ಅಪರ ಜಿಲ್ಲಾಧಿಕಾರಿ ಬಳಿ ಕರ್ತವ್ಯಕ್ಕೆ ಹಾಜರಾಗಿದ್ದು, ತನಿಖಾ ವರದಿ ನೀಡುವವರೆಗೆ ಜಿಲ್ಲಾಧಿಕಾರಿಗೆ ಕಚೇರಿಗೆ ನಿಯೋಜನೆಗೊಂಡಿದ್ದಾರೆ.
ನಿಯೋಜನೆಗೊಂಡ ಅಧಿಕಾರಿಗಳು: ತಹಸೀಲ್ದಾರ್ ಗ್ರೇಡ್-1 ಗಣಪತಿ ಶಾಸ್ತ್ರಿ, ಬಿ.ಎಸ್.ರಾಜೀವ್, ವಿ.ಹನುಮಂತರಾಯಪ್ಪ, ನೀಲಪ್ರಭಾ, ರೇಣುಕಮ್ಮ, ಕೆ.ಎಂ.ಮಹೇಶ್‌ಕುಮಾರ್, ಗ್ರೇಡ್-2 ತಹಸೀಲ್ದಾರ್ ವೃಂದದ ವಿಜಯಕುಮಾರ್ ಕಡಕೋಳ, ಶಿವಕುಮಾರ್ ಶಾಬಾ, ಪಿ.ಆರ್.ಗುರುರಾಜ್, ಪರಶುರಾಮ ಸತ್ತಿಗೇರಿ, ಅಮರೇಶ್ ಬಿರಾದರ್, ಸಂಜಯ್, ಕಾಂಬ್ಳೆ, ಎಂ.ಬಸವರಾಜು, ಕರಿಯಾನಾಯಕ್, ರಾಮ ಲಕ್ಷ್ಮಯ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net