

ಬೆಂಗಳೂರು ಕಳೆದ ಹತ್ತಾರು ವರ್ಷಗಳಿಂದ ಬಿ.ಇಡಿ ಕಾಲೇಜುಗಳ ಶುಲ್ಕ ಪರಿಷ್ಕರಣೆಯಾಗದ ಕಾರಣ ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಶುಲ್ಕ ಪರಿಷ್ಕರಣ ಸಮಿತಿ ರಚನೆ ಮಾಡಲಾಗಿದೆ.
ಇಲಾಖೆ ಮೂಲಗಳ ಪ್ರಕಾರ ಅಂದಾಜು 30 ವರ್ಷಗಳಿಂದ ಶುಲ್ಕ ಪರಿಷ್ಕರಣೆಯಾಗಿಲ್ಲ. ಪರಿಣಾಮ, ಖಾಸಗಿ ಕಾಲೇಜುಗಳು ಇಂದಿನ ಅಗತ್ಯತೆಗೆ ತಕ್ಕಂತೆ ವಿದ್ಯಾರ್ಥಿಗಳಿಂದ ಹೆಚ್ಚುವರಿ ಶುಲ್ಕ ಪಡೆಯುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಶುಲ್ಕ ಪರಿಷ್ಕರಣೆಗೆ ಮುಂದಾಗಿದೆ ಎಂದು ತಿಳಿದು ಬಂದಿದೆ.
ಇಂಜಿನಿಯರಿಂಗ್, ವೈದ್ಯಕೀಯ ಸೇರಿ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಪ್ರತಿ ವರ್ಷ ಶುಲ್ಕ ಪರಿಷ್ಕರಣೆ ಮಾಡಲಾಗುತ್ತಿದೆ. ಆದರೆ, ಬಿ.ಇಡಿ ಕಾಲೇಜಿನಲ್ಲಿ ಪ್ರಸ್ತುತ ಸರ್ಕಾರಿ ಕಾಲೇಜುಗಳಲ್ಲಿ 5 ಸಾವಿರ, ಅನುದಾನಿ ಕಾಲೇಜುಗಳಲ್ಲಿ 6 ಸಾವಿರ ಮತ್ತು ಖಾಸಗಿ ಕಾಲೇಜುಗಳಲ್ಲಿ 13 ಸಾವಿರ ರೂ. ಶುಲ್ಕವಿದೆ. ಇಂದು ಶಾಲೆಗಳಲ್ಲಿಯೇ ಕನಿಷ್ಠ 50 ಸಾವಿರ ರೂ. ಶುಲ್ಕ ಪಡೆಯುತ್ತಾರೆ. ಇಂತಹದ್ದರಲ್ಲಿ 13 ಸಾವಿರ ರೂ. ಶುಲ್ಕ ಯಾವುದಕ್ಕೂ ಸಾಲುವುದಿಲ್ಲ. ಆದ್ದರಿಂದ ಶುಲ್ಕವನ್ನು ಪರಿಷ್ಕರಣೆ ಮಾಡುವಂತೆ ಸಾಕಷ್ಟು ವರ್ಷಗಳಿಂದ ಬೇಡಿಕೆ ಇಡಲಾಗಿತ್ತು. ಈಗ ಸರ್ಕಾರ ಮನಸ್ಸು ಮಾಡಿದ್ದು, ಪರಿಷ್ಕರಣಾ ಸಮಿತಿ ರಚಿಸಿದೆ. ಸಮಿತಿಯು ನೀಡುವ ಆದೇಶದ ಅನ್ವಯ ಮುಂಬರುವ ಪ್ರವೇಶಾತಿಯಲ್ಲಿ ಅನ್ವಯವಾಗಲಿದೆ.