ತೀರ್ಮಾನಗಳ ತನಿಖೆಗೆ ಸಮಿತಿ ರಚನೆ

klr dairy
ಕೋಮುಲ್​ ಒಕ್ಕೂಟದ ಕಚೇರಿಯಲ್ಲಿ ನಡೆದ ಸಭೆಯ ನಂತರ ಒಕ್ಕೂಟದ ಅಧ್ಯಕ್ಷ ಕೆ.ವೈ.ನಂಜೇಗೌಡ ಮಾತನಾಡಿದರು. ಜಂಚಿಮಲೆ ರಮೇಶ್​, ಜಯಸಿಂಹ ಕೃಷ್ಣಪ್ಪ ಇದ್ದರು.
Published on

ಕೋಲಾರ: ಒಕ್ಕೂಟದಲ್ಲಿ ಆಡಳಿತಾಧಿಕಾರಿ ಅವಧಿಯಲ್ಲಿ ಮಾಡಿರುವ ಕೆಲ ತೀಮಾರ್ನಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ನಿರ್ದೇಶಕರ ಸಮಿತಿ ರಚನೆ ಮಾಡಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಹಾಗೂ ಶಾಸಕ ಕೆ.ವೈ.ನಂಜೇಗೌಡ ಹೇಳಿದರು.

ಒಕ್ಕೂಟದ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಅವರನ್ನು ಒಳಗೊಂಡಂತೆ ನಿರ್ದೇಶಕರ ಸಮಿತಿ ರಚನೆ ಮಾಡಿದ್ದು, ವರದಿ ನಂತರ ಕ್ರಮಕ್ಕೆ ಶಿಾರಸು ಮಾಡಲಾಗುವುದು ಎಂದು ತಿಳಿಸಿದರು.

ಕೋಮುಲ್​ಗೆ ಆಡಳಿತಾಧಿಕಾರಿ ನಿಯೋಜಿಸಿದ್ದ ಅವಧಿಯಲ್ಲಿ ವ್ಯವಸ್ಥಾಪಕ ನಿರ್ದೇಶಕರ ಜತೆಗೂಡಿ ಒಕ್ಕೂಟದಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಸಾಮಗ್ರಿ ಖರೀದಿ ಮಾಡಿದ್ದು, ಅದನ್ನು ಒಪ್ಪಲು ಸಾಧ್ಯವಿಲ್ಲ. ಈ ಸಂಬಂಧ ರಚಿಸಿರುವ ನಿರ್ದೇಶಕರು ಹಾಗೂ ಅಧಿಕಾರಿಗಳ ಸಮಿತಿಯಲ್ಲಿ ತನಿಖೆ ನಡೆಸಿ ವರದಿ ನೀಡುವವರೆಗೆ ಖರೀದಿ ವ್ಯವಹಾರಕ್ಕೆ ಮಾನ್ಯತೆ ನೀಡುವಂತಿಲ್ಲ ಎಂಬ ನಿರ್ಧಾರಕ್ಕೆ ಸಭೆಯಲ್ಲಿ ಬರಲಾಯಿತು ಎಂದು ಶಾಸಕ, ಕೋಮುಲ್​ ನಿರ್ದೇಶಕ ಎಸ್​.ಎನ್​.ನಾರಾಯಣಸ್ವಾಮಿ ತಿಳಿಸಿದರು.

ಎಂವಿಕೆ ಗೋಲ್ಡನ್​ ಡೇರಿ ಬಾಕಿ ಇರುವ ಶೇ.15 ಕಾಮಗಾರಿ ಬಾಕಿಯ ಜತೆಗೆ ಬೇರೆಬೇರೆ ಕಾಮಗಾರಿಗಳನ್ನು ಆಡಳಿತಾಧಿಕಾರಿ ಅವಧಿಯಲ್ಲಿ ಸೇರ್ಪಡೆ ಮಾಡಲಾಗಿದೆ. ಅದರಿಂದ ಸಂಸ್ಥೆಗೆ ಯಾವುದೇ ತೊಂದರೆ ಇಲ್ಲ ಎನ್ನುವುದು ಮೇಲ್ನೋಟಕ್ಕೆ ಕಂಡುಬಂದಿದೆಯಾದರೂ, ಕೆಲವು ನಿರ್ದೇಶಕರು ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಎಸ್​.ಎನ್​.ನಾರಾಯಣಸ್ವಾಮಿ, ಜಯಸಿಂಹ ಕೃಷ್ಣಪ್ಪ, ಚಂಜಿಮಲೆ ರಮೇಶ್​, ಕಾಡೇನಹಳ್ಳಿ ನಾಗರಾಜ್​, ಚೆಲುವನಹಳ್ಳಿ ನಾಗರಾಜ್​, ಮಂಜುನಾಥ್​ ಹಾಗೂ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಿದ್ದು, ಮುಂದಿನ ಸಭೆಗೆ ವರದಿ ನೀಡುತ್ತಾರೆ ಎಂದರು.

* ನ್ಯಾಯಾಂಗ ತನಿಖೆಗೆ ಒತ್ತಾಯ

ಒಕ್ಕೂಟದಲ್ಲಿ ಹಲವು ಲೋಪದೋಷ, ಅವ್ಯವಹಾರ ನಡೆದಿರುವ ಬಗ್ಗೆ ಸಾರ್ವಜನಿಕರ ವಲಯದಲ್ಲಿ ಚರ್ಚೆಯಾಗುತ್ತಿದೆ. ಎಲ್ಲರೂ ಇದರಲ್ಲಿ ಭಾಗಿಯಾಗಿಲ್ಲ. ಆದರೆ, ಗೊಂದಲ ಸರಿಪಡಿಸಿಕೊಂಡು ನ್ಯಾಯ ದೊರಕಿಸಿಕೊಡಬೇಕಾದರೆ ನ್ಯಾಯಾಂಗ ತನಿಖೆಯಾಗಬೇಕು ಎಂದು ನಿರ್ದೇಶಕ ಡಿ.ವಿ.ಹರೀಶ್​ ಒತ್ತಾಯಿಸಿದರು.

ಆಡಳಿತಾಧಿಕಾರಿ ಅವಧಿಯಲ್ಲಿ ಆಗಿರುವ ಟೆಂಡರ್​, ಖರೀದಿ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದ್ದು, ತನಿಖೆಗೆ ಸಮಿತಿ ರಚಿಸಲಾಗಿದೆ ಎಂದರು.

ನಿರ್ದೇಶಕರಾದ ಜಯಸಿಂಹ ಕೃಷ್ಣಪ್ಪ, ಚಂಜಿಮಲೆ ರಮೇಶ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net