ಕೃಷಿ ವಿ.ವಿ.ಗಳ ವಿಭಜನೆಗೆ ಸಮಿತಿ ರಚನೆ: ಸಚಿವ ಚಲುವರಾಯಸ್ವಾಮಿ | Transforming agriculture into a profitable sector

Agri minister meeting
Published on

ಬೆಂಗಳೂರು: ರಾಜ್ಯದಲ್ಲಿರುವ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯಗಳ ಭವಿಷ್ಯದ ಬೆಳೆವಣಿಗೆ, ಹಿತದೃಷ್ಟಿಯಿಂದ ಪುನರ್ವಿಂಗಡಣೆಗೆ ಚಿಂತನೆ ನಡೆದಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ವಿಧಾನಸೌಧ ಸಮಿತಿ ಕೊಠಡಿಯಲ್ಲಿ ಕೃಷಿ ಹಾಗೂ ತೋಟಗಾರಿಕೆ ವಿಶ್ವ ವಿದ್ಯಾಲಯಗಳ ಉಪ ಕುಲಪತಿಗಳು ಮತ್ತು ಇಲಾಖೆ ಅಧಿಕಾರಿಗಳ ಜಂಟಿ ಸಭೆಯನ್ನು ಉದ್ದೇಶಿಸಿ ಸೋಮವಾರ ಅವರು ಮಾತನಾಡಿದರು.

ವಿದ್ಯಾರ್ಥಿಗಳು, ರೈತರು ಹಾಗೂ ಕೃಷಿ ವಿಶ್ವ ವಿದ್ಯಾಲಯಗಳ ಹಿತದೃಷ್ಟಿಯಿಂದ ಮರು ವಿಂಗಡಣೆ ಯೋಚನೆಯಿದೆ. ಇದಕ್ಕಾಗಿ ಸಮಿತಿ ರಚಿಸಿದ್ದು, ವರದಿ ಆಧರಿಸಿ ಸಚಿವ ಸಂಪುಟ ಸಭೆಗೆ ಪ್ರಸ್ತಾವನೆ ಮಂಡಿಸಲಾಗುವುದು. ಈ ಬಗ್ಗೆ ಚರ್ಚಿಸಿ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.

ಎಲ್ಲ ಕೃಷಿ, ತೋಟಗಾರಿಕೆ ವಿವಿಗಳು, ಜಿಲ್ಲೆಗಳಿಗೆ ಸರ್ಕಾರ ಸಮಾನ ಮಹತ್ವ ನೀಡಿದೆ. ಜಿಲ್ಲೆ, ವಿವಿಗಳ ಹಿತಾಸಕ್ತಿಯನ್ನು ಗಮನದಲ್ಲಿಕೊಂಡು ಸರ್ಕಾರ ತೀರ್ಮಾನಿಸಲಿದೆ ಎಂದು ಚಲುವರಾಯಸ್ವಾಮಿ ತಿಳಿಸಿದರು.

ಲಾಭದಾಯಕವಾಗಿ ಪರಿವರ್ತನೆ

ಸಂಶೋಧನೆ, ಕ್ಷೇತ್ರ ಕಾರ್ಯ ಹಾಗೂ ಪ್ರಾತ್ಯಕ್ಷಿಕೆಗಳಿಗೆ ಕೃಷಿ ವಿವಿಗಳು ಇನ್ನಷ್ಟು ಹೆಚ್ಚಿನ ಆದ್ಯತೆ ನೀಡಬೇಕು. ರೈತರನ್ನು ತಾಂತ್ರಿಕವಾಗಿ ಸಶಕ್ತ, ಕೃಷಿ ಕ್ಷೇತ್ರದ ಸದೃಢತೆಗೊಳಿಸಿದರೆ ನಿಶ್ವಿತವಾಗಿ ಕೃಷಿ ಕ್ಷೇತ್ರ ಲಾಭದಾಯಕ ಉದ್ಯಮವನ್ನಾಗಿ ಪರಿವರ್ತಿಸಬೇಕು ಎಂದು ಸಲಹೆ ನೀಡಿದರು.

ಕೃಷಿ ಮತ್ತು ತೋಟಗಾರಿಕೆ ವಿವಿಗಳು ಎದುರಿಸುತ್ತಿರುವ ತಾಂತ್ರಿಕ, ಆಡಳಿತಾತ್ಮಕ ಮತ್ತು ಆರ್ಥಿಕ ಸಮಸ್ಯೆ, ಸವಾಲುಗಳನ್ನು ಆದ್ಯತೆ ಮೇರೆಗೆ ಪಟ್ಟಿ ಮಾಡಿ ಪ್ರಸ್ತಾವನೆ ಸಲ್ಲಿಸಬೇಕು. ಈ ಬಗ್ಗೆ ಸಿಎಂ ಹಾಗೂ ಸಂಬಂಧಿಸಿದವರ ಜತೆಗೆ ಮಾರ್ಚ್ ನಂತರ ಚರ್ಚಿಸುವುದಾಗಿ ಭರವಸೆ ನೀಡಿದರು.

ಮಂಡ್ಯ ವಿ.ಸಿ. ಫಾರಂನಲ್ಲಿ ಹೊಸದಾಗಿ ಪ್ರಾರಂಭಿಸಲು ಉದ್ದೇಶಿತ ಸಮಗ್ರ ಕೃಷಿ, ತೋಟಗಾರಿಕೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಕಾರ್ಯಾರಂಭಿಸಲಿದೆ. ಅದಕ್ಕಾಗಿಯೇ ಎಲ್ಲ ರೀತಿ ತಯಾರಿ ನಡೆದಿದ್ದು, ಇದೇ ರೀತಿ ಎಲ್ಲ ವಿವಿಗಳನ್ನು ಬಲಪಡಿಸಲು ತಜ್ಞರ ಸಮಿತಿ ರಚಿಸಲಾಗುತ್ತಿದೆ ಎಂದರು.

ಕೃಷಿ ಹಾಗೂ ಕೃಷಿಕರ ಅಭ್ಯುದಯವೇ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯಗಳ ಮೂಲ ಆಶಯವಾಗಿದೆ. ಅದಕ್ಕೆ ಪೂರಕವಾಗಿ ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಎನ್.ಚಲುವರಾಯಸ್ವಾಮಿ ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net